₹12 ಲಕ್ಷ ನಗದು ಸೇರಿ ₹2.49 ಕೋಟಿ ಮೌಲ್ಯದ ಆಸ್ತಿ ಪತ್ತೆ
26/11/2025
ಶಿವಮೊಗ್ಗ: ಇಲ್ಲಿನ ಶಿವಮೊಗ್ಗ ವೈದ್ಯಕೀಯ ಸಂಸ್ಥೆಯ (ಸಿಮ್ಸ್) ನಿರ್ದೇಶಕ ಡಾ.ವಿರೂಪಾಕ್ಷಪ್ಪ ಅವರ ಆಪ್ತ ಸಹಾಯಕ ಸಿ.ಎನ್. ಲಕ್ಷ್ಮೀಪತಿ ಅವರ ನಿವಾಸದ ಮೇಲೆ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರಿಗೆ ₹ 12.01 ಲಕ್ಷ ನಗದು ಸೇರಿ ₹ 2.49 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಶೋಧ ಮುಂದುವರಿದಿದೆ.
ಲಕ್ಷ್ಮೀಪತಿ ಬಳಿ ಶಿವಮೊಗ್ಗದ ಜೆ.ಎಚ್.ಪಟೇಲ್ ಬಡಾವಣೆ ಹಾಗೂ ಸ್ವಂತ ಊರು ದಾವಣಗೆರೆ ಜಿಲ್ಲೆ ಜಗಳೂರಿನ ಇಂದಿರಾ ಬಡಾವಣೆಯಲ್ಲಿ ಎರಡು ಸೇರಿ ₹ 1.45 ಕೋಟಿ ಮೌಲ್ಯದ ಮೂರು ಮನೆಗಳು, ₹ 23.04 ಲಕ್ಷ ಮೌಲ್ಯದ ಒಂದು ಕಿಯಾ ಕಾರು, ಮೂರು ದ್ವಿಚಕ್ರ ವಾಹನ, ₹ 23.29 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳು, ₹ 18.80 ಲಕ್ಷ ಮೌಲ್ಯದ ಮೂರೂವರೆ ಎಕರೆ ಕೃಷಿ ಭೂಮಿ ಪತ್ತೆಯಾಗಿದೆ.
ಇಲ್ಲಿನ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಲಕ್ಷ್ಮೀಪತಿ ಅವರ ನಿವಾಸ, ಜಗಳೂರಿನಲ್ಲಿರುವ ಮನೆ, ಸಿಮ್ಸ್‌ನ ಕಚೇರಿಯಲ್ಲಿ ಏಕ ಕಾಲಕ್ಕೆ ದಾಳಿ ನಡೆಸಲಾಯಿತು. ಮೊದಲು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಲ್ಯಾಬ್ ಟೆಕ್ನೀಶಿಯನ್ ಆಗಿದ್ದ ಲಕ್ಷ್ಮೀಪತಿ 2019ರಲ್ಲಿ ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕ ಆಗಿ ನೇಮಕಗೊಂಡಿದ್ದಾರೆ.
‘ಲಕ್ಷ್ಮೀಪತಿ ಅವರಿಗೆ ಸಂಬಂಧಿ ಸಿದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.


