Tuesday, December 2, 2025
spot_img

ವಿಪ್ ಉಲ್ಲಂಘನೆ:ಹಾವೇರಿಯ ರಟ್ಟಹಳ್ಳಿ ಪಪಂ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯತ್ವ ರದ್ದು

ರಟ್ಟೀಹಳ್ಳಿ ಅಧ್ಯಕ್ಷ–ಉಪಾಧ್ಯಕ್ಷರ ಸದಸ್ಯತ್ವ ಅನರ್ಹ
ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷಾಂತರ: ಜಿಲ್ಲಾಧಿಕಾರಿ ಆದೇಶ
02/12/2025

 

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಹಾಗೂ ಉಪಾಧ್ಯಕ್ಷ ಶಿವಕುಮಾರ ಉಪ್ಪಾರ ಅವರ ಸದಸ್ಯತ್ವವನ್ನು ಪಕ್ಷಾಂತರ ಕಾಯ್ದೆ ಉಲ್ಲಂಘನೆ ಆರೋಪದಡಿ ಅನರ್ಹಗೊಳಿಸಿ ಜಿಲ್ಲಾಧಿಕಾರಿಯವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಪಂಚಾಯಿತಿಯ 15 ವಾರ್ಡ್‌ ಸದಸ್ಯರ ಆಯ್ಕೆಗೆ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. 7 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ 6 ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರು ಗೆದ್ದಿದ್ದರು. ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು.

ತೀವ್ರ ಕುತೂಹಲ ಕೆರಳಿಸಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಹುಮತದ ಪ್ರಕಾರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪಡೆಯಬಹುದೆಂಬ ಲೆಕ್ಕಾಚಾರವಿತ್ತು. ವಾರ್ಡ್‌ 9ರ ಪಕ್ಷೇತರ ಅಭ್ಯರ್ಥಿ ಶಿವಕುಮಾರ ಸಹ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು, ಬೆಂಬಲ ಸೂಚಿಸಿದ್ದರು.

ಇದರ ನಡುವೆಯೇ ಕಾಂಗ್ರೆಸ್‌ನ ರವೀಂದ್ರ ಅವರು, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಪಕ್ಷೇತರರಾಗಿ ಆಯ್ಕೆಯಾಗಿ ಕಾಂಗ್ರೆಸ್‌ ಸೇರಿದ್ದ ಶಿವಕುಮಾರ ಸಹ ಬಿಜೆಪಿ ಹಾಗೂ ರವೀಂದ್ರ ಅವರ ಬೆಂಬಲದೊಂದಿಗೆ ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದರು. ಇದರಿಂದಾಗಿ, ಬಹುಮತವಿದ್ದರೂ ಕಾಂಗ್ರೆಸ್ ಪಕ್ಷ, ಅಧಿಕಾರದಿಂದ ವಂಚಿತವಾಗಿತ್ತು.

‘ಕಾಂಗ್ರೆಸ್ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಪಕ್ಷಾಂತರ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿ ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಅದರ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ವಾದ–ಪ್ರತಿವಾದ ಆಲಿಸಿದ್ದರು. ಅಧ್ಯಕ್ಷ ರವೀಂದ್ರ ಹಾಗೂ ಉಪಾಧ್ಯಕ್ಷ ಶಿವಕುಮಾರ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

‘ರವೀಂದ್ರ ಹಾಗೂ ಶಿವಕುಮಾರ ಅವರು ಪಕ್ಷಾಂತರ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಹೀಗಾಗಿ, ಅವರಿಬ್ಬರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.

‘ಜಾರಿಯಾಗಿದ್ದ ವಿಪ್’

‘ಇಬ್ಬರು ಪಕ್ಷೇತರ ಅಭ್ಯರ್ಥಿಗಳು, ಕಾಂಗ್ರೆಸ್ ಸೇರಿದ್ದರು. 7 ವಾರ್ಡ್‌ಗಳ ಕಾಂಗ್ರೆಸ್ ಅಭ್ಯರ್ಥಿಗಳು ಸೇರಿ 9 ಅಭ್ಯರ್ಥಿಗಳಿಗೆ ವಿಪ್ ಜಾರಿ ಮಾಡಲಾಗಿತ್ತು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮೇಲ್ಮನವಿಯಲ್ಲಿ ತಿಳಿಸಿದ್ದರು.

‘ಸೆ. 30ರಂದು ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಿತ್ತು. 27ರಂದು ಸಭೆ ನಡೆಸಿ ವಿಪ್ ಜಾರಿ ಬಗ್ಗೆ ಠರಾವು ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಲಲಿತಾ ಮಹೇಶಗೌಡ ಚನ್ನಗೌಡ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಕಬೂಲ ಮಹ್ಮದ್ ಖಾಸಿಂಸಾಹೇಬ ಮುಲ್ಲಾ ಅವರನ್ನು ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಲಾಗಿತ್ತು.ವಿಪ್ ಉಲ್ಲಂಘನೆ ಮಾಡಿದ್ದ ರವೀಂದ್ರ ಹಾಗೂ ಶಿವಕುಮಾರ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದ್ದಾರೆ’ ಎಂದು ಆರೋಪಿಸಿದ್ದರು.

ಮಂಡ್ಯದಲ್ಲಿ ಉಲ್ಟಾ:ಮಂಡ್ಯ ನಗರಸಭೆಯಲ್ಲು ಪಕ್ಷಾಂತರ ಮಾಡಿದ್ದ ಜ್ಯಾದಳ ಹಾಗೂ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರ ಅನರ್ಹತೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು‌.ಆದರೆ ಪ್ರಕರಣ ದಾಖಲಿಸಿದ್ದ ಅಯಾ ಪಕ್ಷದ ಮುಖ್ಯಸ್ಥರೆ ವಿಚಾರಣೆ ವೇಳೆ ಪ್ರತಿ ಹೇಳಿಕೆ ನೀಡಿ ಪಕ್ಷಾಂತರಿಗಳ ಪರ ತೀರ್ಪು ಬರಲು ಕಾರಣರಾಗಿದ್ದು ರಾಜ್ಯದ ಏಕೈಕ ಪ್ರಕರಣ ಎನಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!