Wednesday, December 17, 2025
spot_img

ಬಸವಣ್ಣನ ನಂತರ ಕನ್ನಡನಾಡನ್ನು ಅತಿಹೆಚ್ಚು ಪ್ರಭಾವಿಸಿದವರು ಕುವೆಂಪು: ರಮೇಶ್ ಗೌಡ

ಪಂಪ, ಕುಮಾರವ್ಯಾಸ, ಬಸವಣ್ಣನ ನಂತರ ಕನ್ನಡ ನಾಡು ಕಂಡಿರುವುದು ಕುವೆಂಪುಯುಗವನ್ನು ಮಾತ್ರ. “ಎಲ್ಲವೂ ಬ್ರಾಹ್ಮಣೀಕರಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ನಾಡಿನ ಶೂದ್ರ ಸಮುದಾಯ ತಮ್ಮ ತಲೆಗಳನ್ನು ಅಡಮಾನವಿಡದಿದ್ದರೆ ಸಾಕು” ಎಂದು ರಸ ಋಷಿ ಕುವೆಂಪು ಅವರು ಹೇಳಿದ್ದ ಮಾತುಗಳನ್ನು ಜನಪರ ವಕೀಲ ಜೀರಹಳ್ಳಿ ರಮೇಶ್‌ ಗೌಡ ಪುನರುಚ್ಛರಿಸಿದರು.

ಪುಸ್ತಕ ಓದುವ ಹವ್ಯಾಸ ಹೆಚ್ಚಿಸುವ ಸಲುವಾಗಿ ʼಪರಿಚಯ ಪ್ರಕಾಶನʼ ಈಚೆಗೆ ಮಂಡ್ಯ ಶಿವನಂಜಪ್ಪ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ಅವರ ಆತ್ಮಕಥೆ “ನೆನಪಿನ ದೋಣಿಯಲಿ” ಕೃತಿಯ ಕುರಿತ ಸಂವಾದದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಮೇಶ್‌ ಗೌಡರು “ಕುವೆಂಪು ಬದುಕಿನ ಪುಟಗಳನ್ನು ಒಂದೊಂದಾಗಿ ಪ್ರಸ್ತುತಪಡಿಸುತ್ತಿದ್ದರೆ ನೆರೆದಿದ್ದ ಓದುಗರು ಮೈಯೆಲ್ಲಾ ಕಿವಿಯಾಗಿದ್ದರು.

ಕುವೆಂಪು ಬಾಲ್ಯ, ಪಾದ್ರಿ ಮೋಸೆಸ್‌ ಅವರಿಂದ ಕಲಿತ ಶಿಕ್ಷಣ, ಮೈಸೂರಿನ ದಿನಗಳು, ರಾಮಕೃಷ್ಣ ಮಠದ ಸಹವಾಸ, ರಮ್ಯತೆಯಿಂದ ಪ್ರಖರ ವೈಚಾರಿಕತೆಯತ್ತ ಹೊರಳಿದ ಕುವೆಂಪು ಅವರ ಸೂಕ್ಷ್ಮ ಒಳನೋಟಗಳನ್ನು ರಮೇಶ್‌ ಗೌಡರು ತೆರೆದಿಟ್ಟರು. ನಂತರ ಕವಯತ್ರಿ, ಉಪನ್ಯಾಸಕಿ ಆಶಾ ಹನಿಯಂಬಾಡಿ ಅವರು ಕುವೆಂಪು ರಚನೆಯ “ಹಸುರು” ಕವಿತೆಯನ್ನು ಇಂಪಾಗಿ, ಮನಮುಟ್ಟುವಂತೆ ವಾಚಿಸಿದರು.

ಕುವೆಂಪು ಅವರ ನಿಸರ್ಗರಾಧನೆಯ ಕೃತಿಯಾದ “ಮಲೆನಾಡಿನ ಚಿತ್ರಗಳು” ಪುಸ್ತಕದ ಕುರಿತು ಸಾಹಿತಿ ಮತ್ತು ರಾಜ್ಯ ಯುವ ಬರಹಗಾರರ ಬಳಗದ ಅಧ್ಯಕ್ಷರಾದ ಟಿ.ಸತೀಶ್‌ ಜವರೇಗೌಡರು ಅತ್ಯಂತ ಆಪ್ತತೆಯಿಂದ ಮಾತನಾಡಿದರು. ಸ್ವಾತಂತ್ರಪೂರ್ವ ಮಲೆನಾಡಿನ ಚಿತ್ರಣವನ್ನು ಕಟ್ಟಿಕೊಡುವ “ಅಜ್ಜಯ್ಯನ ಅಭ್ಯಂಜನ” ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ನಂತರ ಕುವೆಂಪು ಅವರ ಜನಪ್ರಿಯ ಭಾಷಣಗಳಲ್ಲಿ ಒಂದಾದ “ವಿಚಾರ ಕ್ರಾಂತಿಗೆ ಆಹ್ವಾನ”ದ ಕುರಿತು ಚಿಂತಕರಾದ ಹಾಲಹಳ್ಳಿ ಮುಕುಂದ ಅವರು ತಮ್ಮ ಒಳನೋಟಗಳನ್ನು ಬಿಚ್ಚಿಡುತ್ತಾ “ಕುವೆಂಪು ಜಾತಿ, ಮತಗಳನ್ನು ಮೀರಿದ ಪ್ರೀತಿ, ಪ್ರೇಮ, ಮಮತೆಗಳ ಸಮಾಜ ನಿರ್ಮಾಣದ ಕನಸು ಹೊತ್ತಿದ್ದ ವಿಶ್ವ ಮಾನವರಾಗಿದ್ದರು” ಎಂದರು.

ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ ಆರಾಧ್ಯ, ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆ ಮುಖ್ಯಸ್ಥ ಅರವಿಂದ ಪ್ರಭು, ಸಾಹಿತಿ ಕಲೀಂಉಲ್ಲಾ, ಲೇಖಕಿ ಡಾ.ಅನಿತಾ ಮಂಗಲ, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಸಿಪಿಎಂನ ಟಿ.ಎಲ್.ಕೃಷ್ಣೇಗೌಡ, ಕನ್ನಡ, ಕರ್ನಾಟಕ ಫೌಂಡೇಷನ್‌ನ ಎಂ.ಜಿ.ವಿನಯ್‌ ಕುಮಾರ್‌, ರೈತರ ಶಾಲೆಯ ಸತ್ಯಮೂರ್ತಿ, ರಾಜ್ಯ ವೈಜ್ಙಾನಿಕ ಪರಿಷತ್‌ನ ಜಿ,ಎನ್.ಕೆಂಪರಾಜು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

 

ಸೌಹಾರ್ದತೆ ಉಳಿಸಿದ ರಸ ಋಷಿ ಕುವೆಂಪು: ಸಜಗೌ

ಜನ ಸಮುದಾಯದಲ್ಲಿ ವೈಚಾರಿಕ ದೃಷ್ಟಿ, ವೈಜ್ಞಾನಿಕ ಮನೋಭಾವ, ವಿಶ್ವಮಾನವ ಪ್ರಜ್ಞೆಯನ್ನು ಎಚ್ಚರವಾಗಿಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜೀವಾನುಭವದ ಸಾಂದ್ರತೆಯೊಂದಿಗೆ ವಿಶ್ವಾತ್ಮಕ ದೃಷ್ಟಿಕೋನವನ್ನೂ ಸೃಜನಶೀಲತೆಯ ದಟ್ಟವಾದ ಸ್ಪರ್ಶವನ್ನೂ ಹೊಂದಿರುವ ಕುವೆಂಪು ಸಾಹಿತ್ಯವನ್ನು ಪ್ರಚಾರ ಮಾಡಬೇಕಿದೆ. ಆಗ ಮಾತ್ರ ಅರಿವಿನ ದೀವಿಗೆ ಬೆಳಗಿ, ಈ ನೆಲದಲ್ಲಿ ಸೌಹಾರ್ದತೆಯು ನೆಲೆಸಲು ಸಾಧ್ಯವಾಗುತ್ತದೆ.
– ಟಿ. ಸತೀಶ್ ಜವರೇಗೌಡ, ಸಾಹಿತಿ

 

ಕೇಂದ್ರ ಸರ್ಕಾರ ಕುವೆಂಪು ಅವರಿಗೆ “ಭಾರತರತ್ನ” ನೀಡಲಿ

ಜಗತ್ತಿಗೆ ವಿಶ್ವಮಾನವತೆಯ ಬೆಳಕು ನೀಡಿದ ಕುವೆಂಪು ಅವರು ಕನ್ನಡನಾಡಿಗಷ್ಟೇ ಅಲ್ಲದೆ ಇಡೀ ಭಾರತಕ್ಕೆ ಹೊಸ ವಿವೇಕದ ಮಾರ್ಗವೊಂದನ್ನು ತೋರಿದರು. ಅವರು ಆಶಿಸಿದ ಸಮ ಸಮಾಜ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ನಾವಿನ್ನೂ ಸಾಧಿಸಲು ಸಾಧ್ಯವಾಗಿಲ್ಲ. ಕುವೆಂಪು ಅವರಿಗೆ ಭಾರತರತ್ನ ನೀಡಿ ಗೌರವಿಸುವುದರಿಂದ ಮಾತ್ರ ಅವರ ವಿಶ್ವಮಾನವ  ಪರಿಕಲ್ಪನೆಯನ್ನು ಇಡೀ ದೇಶಕ್ಕೆ ಹರಡಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಆಂದೋಲನವೂ ಆರಂಭವಾಗಬೇಕಿದೆ.
-ಮುಕುಂದ ಹಾಲಹಳ್ಳಿ, ಚಿಂತಕ

ಮೊಳಗಿದ ʼಅಖಂಡ ಕರ್ನಾಟಕʼ ಕೂಗು

ಗಾಯಕ ಗಾಮನಹಳ್ಳಿ ಸ್ವಾಮಿ ಅವರು ಭಾವಾವೇಶದಿಂದ “ಕರ್ನಾಟಕ ಎಂದರೇನು? ಮಂತ್ರ ಕಣಾ! ಶಕ್ತಿ ಕಣಾ! ಬೆಂಕಿ ಕಣಾ! ಸಿಡಿಲು ಕಣಾ!” ಎಂದು ಕುವೆಂಪು ಅವರ ಕವಿತೆಯನ್ನು ಏರುದನಿಯಲ್ಲಿ ಲಯಬದ್ಧವಾಗಿ ಹಾಡುತ್ತಿದ್ದ ಹಾಡಿಗೆ ಅಪಾರ ಚಪ್ಪಾಳೆ, ಜನಮೆಚ್ಚುಗೆ ವ್ಯಕ್ತವಾಯಿತು. ಹಾಡು ಮುಗಿದರೂ ಕರತಾಡನ ನಿಲ್ಲಲಿಲ್ಲ. ನಂತರ ಗಾಯಕರಾದ ಪ್ರತಿಭಾಂಜಲಿ ಡೇವಿಡ್‌ “ಜನಸಾಮಾನ್ಯನೇ ಭಗವಾನ್”‌ ಗೀತೆ ಪ್ರಸ್ತುತಪಡಿಸಿದರೆ, ಎಚ್‌.ಎನ್.ದೇವರಾಜು ಅವರು “ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ” ಹಾಡನ್ನು ಮೆಲುದನಿಯಲ್ಲಿ ಇಂಪಾಗಿ ಹಾಡಿದರು.

ಪ್ರಕೃತಿಯ ಮಡಿಲಲ್ಲಿ ಪುಸ್ತಕ ಓದು ಮತ್ತು ಮಾರಾಟ

ಮಂಡ್ಯದ ಶಿವನಂಜಪ್ಪ ಉದ್ಯಾನವನದಲ್ಲಿ ಪ್ರತಿ ತಿಂಗಳ ಎರಡನೇ ಮಂಗಳವಾರ ವಿನೂತನ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪರಿಚಯ ಪ್ರಕಾಶನ ಈ ಬಾರಿ ಕುವೆಂಪು, ತೇಜಸ್ವಿ, ಭೈರಪ್ಪ ಮತ್ತು ಪರಿಸರ ಸಂಬಂಧಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವನ್ನು ಇಟ್ಟುಕೊಂಡಿತ್ತು. ಕನ್ನಡ ಕವಿಗಳ ಹಾಡುಗಳನ್ನು ಕೇಳುತ್ತಾ ಪ್ರಶಾಂತವಾಗಿ ಪ್ರಕೃತಿಯ ಮಡಿಲಲ್ಲಿ ಸಾಹಿತ್ಯಾಸಕ್ತರು ತಮ್ಮ ಇಷ್ಟದ ಲೇಖಕರ ಪುಸ್ತಕಗಳನ್ನು ಖರೀದಿಸಿ ಓದುತ್ತಿದ್ದರು. ಎಲ್ಲರ ಕೈಯಲ್ಲೂ ಪುಸ್ತಕಗಳಿದ್ದವು. ಮೊಬೈಲುಗಳನ್ನು ಸೈಲೆಂಟ್‌ ಮಾಡಲಾಗಿತ್ತು.

 

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!