ಇಡೀ ರಾಜ್ಯದ ಗಮನ ಸೆಳೆದಿರುವ ಮಂಡ್ಯದ ಸರ್ಕಾರಿ ಶಾಲೆ ಉಳಿಸಿ ಉಪವಾಸ ಸತ್ಯಾಗ್ರಹದ ಮಾಸ್ಟರ್ ಮೈಂಡ್‌ಗಳು ಯಾರೆಂದು ತಿಳಿದು ಬಂದಿದೆ. ಮೂರು ದಿನಗಳಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಚಳಿ ಗಾಳಿಯನ್ನೂ ಲೆಕ್ಕಿಸದೆ ಮಾಡುತ್ತಿರುವ ಉಪವಾಸ ಸತ್ಯಾಗ್ರಹ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ತಲೆನೋವಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಲೇಬೇಕೆಂದು ಉಪವಾಸ ಕುಳಿತಿರುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸಂತೋಷ್ ಗೌಡ, BE, MTech, Phd
ಮಂಡ್ಯ ನಗರದ ಪಕ್ಕದಲ್ಲಿರುವ ಬೂತನ ಹೊಸೂರಿನವರಾದ ಸಂತೋಷ್ ಬಿಇ ಪದವೀಧರ. ಎಂ.ಟೆಕ್‌ನಲ್ಲಿ ದೇಶಕ್ಕೆ 3ನೇ ರ‌್ಯಾಂಕ್ ಪಡೆದು, ಪಿಎಚ್‌ಡಿ ಕೂಡ ಮಾಡಿಕೊಂಡವರು. ನವದೆಹಲಿ, ಗುಜರಾತ್ ವಿಶ್ವವಿದ್ಯಾಲಯಗಳು ಇವರ ಜ್ಞಾನದ ವಿಸ್ತಾರವನ್ನು ಗಮನಿಸಿ ಪ್ರತಿವರ್ಷ ವಿಶೇಷ ಉಪನ್ಯಾಸ ನೀಡುವಂತೆ ಆಹ್ವಾನಿಸುತ್ತವೆ. ಇದನ್ನೆಲ್ಲಾ ಪಕ್ಕಕ್ಕಿಟ್ಟು ರೈತಸಂಘ ಸೇರಿದವರು ಸಂತೋಷ್. ಬಡಮಕ್ಕಳಿಗೆ ಉಚಿತವಾಗಿ ಗಣಿತ, ಇಂಗ್ಲೀಷ್ ಹೇಳಿಕೊಡುವುದರ ಜತೆಗೆ ನವೋದಯ, ಸೈನಿಕಶಾಲೆಗಳ ಪರೀಕ್ಷೆಗಳಿಗೆ ಸಜ್ಜುಗೊಳಿಸುವ ತರಬೇತಿ ಶಾಲೆ ತೆರೆದಿದ್ದಾರೆ. ದುಬಾರಿ ಟ್ಯೂಷನ್ ಮಾಫಿಯಾ ತಡೆಗಟ್ಟಲು ಯೂಟ್ಯೂಬ್ ಚಾನೆಲ್ ತೆರೆದು ಸುಲಭವಾಗಿ ಸೈನ್ಸ್, ಮ್ಯಾತ್ಸ್‌ನ ಪ್ರಾಬ್ಲಮ್‌ಗಳನ್ನು ಪರಿಹರಿಸುವ ವಿಧಾನಗಳನ್ನು ಕಲಿಸುತ್ತಾರೆ. ಉಪವಾಸದ ನಡುವೆಯೂ ಕೆಲವು ಮಕ್ಕಳು ಪ್ರಶ್ನೆಪತ್ರಿಕೆಗಳನ್ನು ಹಿಡಿದುಕೊಂಡು ಬರುತ್ತಿರುವುದು ಸಂತೋಷ್ ಅವರ ಕಲಿಸುವ ಗುಣಕ್ಕೆ ಹಿಡಿದ ಕನ್ನಡಿ. ಇವರೇ ಈಗ ನಡೆಯುತ್ತಿರುವ ಸರ್ಕಾರಿ ಶಾಲೆ ಉಳಿಸಿ ಉಪವಾಸ ಸತ್ಯಾಗ್ರಹದ ರೂವಾರಿ.

ಧನುಷ್ ಗೌಡ ಎಚ್.ಎಸ್. BE Civil
ಮದ್ದೂರಿನ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರ ಮಗನಾದ ಧನುಷ್ ಸಿವಿಲ್ ಇಂಜಿನಿಯರಿಂಗ್ ಪದವೀಧರ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಟ್ಟಾಭಿಮಾನಿ. ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಈತನ ಆಸಕ್ತಿಯ ಕ್ಷೇತ್ರಗಳು. ಜಲಜೀವನ್ ಮಿಷನ್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಾ ಬಿಡುವಿನ ವೇಳೆಯಲ್ಲಿ ಸರ್ಕಾರಿ ಶಾಲೆಗಳ ಬಲವರ್ಧನೆಗೆ, ಕನ್ನಡ ಭಾಷೆಯ ಉಳಿವಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾನೆ. ಇದುವರೆಗೂ ರಾಜ್ಯಾದ್ಯಂತ 64 ಸರ್ಕಾರಿ ಶಾಲೆಗಳನ್ನು ‘ಕನ್ನಡ ಮನಸ್ಸುಗಳು’ ತಂಡದ ಜತೆ ಅಭಿವೃದ್ಧಿ ಪಡಿಸಿದ್ದಾನೆ. ಚಿತ್ರಕೂಟ ಸಂಸ್ಥೆಯ ಮೂಲಕ ಮಂಡ್ಯ ನಗರಕ್ಕೆ ಅಂಟಿಕೊಂಡಿರುವ ಚಿಕ್ಕಮಂಡ್ಯ ಪ್ರೌಢಶಾಲೆಯನ್ನು ಕಳೆದ ವರ್ಷ ಸ್ನೇಹಿತರ ಸಹಕಾರದಲ್ಲಿ 3.5 ಲಕ್ಷ ಖರ್ಚು ಮಾಡಿ ಅಂದಗೊಳಿಸಿದ್ದಾನೆ.

ಕವಿತಾ ದೇಗಾಂವ್, ITI Electronics
ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸಬೇಕು ಎಂಬ ಒಂದೇ ಕಾರಣಕ್ಕೆ ಮನೆಯಿಂದ ಏಳು ಕಿಮೀ ದೂರದಲ್ಲಿರುವ ಗೌರ್ನಮೆಂಟ್ ಶಾಲೆಗೆ ಪ್ರತಿನಿತ್ಯ ಆಟೋದಲ್ಲಿ ಬಿಟ್ಟುಬರುವ ಕಲಬುರಗಿಯ ಮಹಾತಾಯಿ ಕಳೆದ ಮೂರು ದಿನಗಳಿಂದ ಮಂಡ್ಯದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿರುವ ಆದರ್ಶ ಮಹಿಳೆ. ಕಲಬುರ್ಗಿ ಉತ್ತರ ಕಾಕಡೆ ನಗರದ ನಿವಾಸಿಯಾದ ಇವರು ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್‌ನಲ್ಲಿ ಐಟಿಐ ಮಾಡಿಕೊಂಡಿರುವ ಗೃಹಿಣಿ. ತನ್ನ ಜಾಗದಲ್ಲಿ ಮುಚ್ಚಿಹೋದ ಸರ್ಕಾರಿ ಶಾಲೆಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಅನಿಲ್ ಕುಮಾರ್ ಟಿ.ಎಂ, ITI
ಕಳೆದ ಒಂದು ವರ್ಷದಿಂದ ಮಂಡ್ಯ ಜಿಲ್ಲೆಯ ತಗ್ಗಹಳ್ಳಿ ಗ್ರಾಮದ ಸರ್ಕಾರಿ ಪಾಠಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಅಉತ್ತಿರುವ ಇವರು 4 ವರ್ಷ ಕಮಿಟಿ ಮೆಂಬರ್ ಆಗಿದ್ದರು. ಮೈಸೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ವ್ಯವಸಾಯದ ಜತೆಗೆ ತಮ್ಮ ಹುಟ್ಟೂರಿನ ಶಾಲೆಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.

ರವಿಚಂದ್ರ ಚಾಕಲೆಬ್ಬಿ, Auto Driver
ಧಾರವಾಡ ಜಿಲ್ಲೆಯವರಾದ ರವಿಚಂದ್ರ ಓದಿದ್ದು 7ನೇ ತರಗತಿ. ವೃತ್ತಿಯಲ್ಲಿ ಆಟೋ ಚಾಲಕ. ಹುಬ್ಬಳ್ಳಿ ಶಹರದ 16ನೇ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾನು ಆಟೋ ಓಡಿಸಿ ಸಂಪಾದಿಸಿದ ಹಣದಲ್ಲಿ ಶಾಲೆಗಾಗಿ ಒಂದು ಭಾಗ ಮೀಸಲಿಟ್ಟಿರುವ ಇವರು ಅಧಿಕಾರ ವಹಿಸಿಕೊಂಡ ನಂತರ ಸರ್ಕಾರಿ ಶಾಲೆಯೊಂದು ಮೇಲ್ದರ್ಜೆಗೆ ಏರಿದೆ.

ಫಯಾಜ್ ಮೈಸೂರು, BBM
ಕೆಆರ್ ನಗರದವರಾದ ಫಯಾಜ್ ಬಿಬಿಎಂ ಪದವಿ ಪಡೆದ ನಂತರ ವ್ಯವಸಾಯವನ್ನೇ ಕಸುಬನ್ನಾಗಿ ಸ್ವೀಕರಿಸಿದವರು. ರೈತ ಚಳುವಳಿ ಇವರನ್ನು ಆಕರ್ಷಿಸಿತು. ರಾಜ್ಯ ರೈತ ಸಂಘದ ಯುವ ಘಟಕದ ಅಧ್ಯಕ್ಷರಾಗಿದ್ದಾರೆ. ಬರಿ ಭಾಷಣದ ನಾಯಕರಾಗದೆ ಮೂರು ದಿನಗಳಿಂದ ಸರ್ಕಾರಿ ಶಾಲೆ ಉಳಿವಿಗಾಗಿ ಮಂಡ್ಯದಲ್ಲಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಉಪವಾಸ ಕುಳಿತಿದ್ದಾರೆ.

ರೇವಣ್ಣ
ಮೈಸೂರಿನ ಕೂರ್ಗಹಳ್ಳಿ ಸರ್ಕಾರಿ ಪಾಠಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿರುವ ಇವರು ಕಳೆದು ಐದಾರು ವರ್ಷಗಳಿಂದ ತಮ್ಮೂರಿನ ಶಾಲೆಯ ಅಭಿವೃದ್ಧಿಗೆ ನಾನಾ ಕಚೇರಿಗಳನ್ನು, ಖಾಸಗಿ ದಾನಿಗಳನ್ನು ಸಂಪರ್ಕಿಸಿ ದುಡಿಯುತ್ತಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಮೂರು ದಿನದಿಂದ ಹಸಿದು ಬಡಮಕ್ಕಳ ಶಿಕ್ಷಣಕ್ಕಾಗಿ ಕುಳಿತಿದ್ದಾರೆ.
ಇವರೆಲ್ಲ ಸುಶಿಕ್ಷಿತರು. ಕನ್ನಡನಾಡಿನಲ್ಲಿ ಒಂದೊಂದಾಗಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಲು ಪಣತೊಟ್ಟವರು ಬಡವರು, ಕಾರ್ಮಿಕರು, ರೈತರು ಮತ್ತು ದಲಿತರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಉಪವಾಸ ಕುಳಿತವರು. ಇಂದು ಪಂಜಿನ ಮೆರವಣಿಗೆಯೊಂದಿಗೆ ಮಂಡ್ಯದ ಜನ, ಸಂಘ ಸಂಸ್ಥೆಗಳು ಇವರ ತ್ಯಾಗ ಮತ್ತು ಹೋರಾಟವನ್ನು ಶ್ಲಾಘಿಸುತ್ತಿವೆ.
ಮನುಷ್ಯನ ದೇಹವನ್ನು ಐಸುಗೆಡ್ಡೆ ಮಾಡಿಬಿಡುವ ಭೀಕರ ಚಳಿ ಮತ್ತು ಮೂರು ದಿನಗಳ ನಿರಂತರ ಉಪವಾಸ ಈ ಹುಡುಗರನ್ನು ಹೈರಾಣಾಗಿಸಿದೆ. ಮುಖಗಳು ಇನ್ನಷ್ಟು ಗಂಭೀರವಾಗುತ್ತಿವೆ. ಹಸಿವು ಸಹಜವಾಗಿ ಆಕ್ರೋಶವನ್ನು ಹೆಚ್ಚಿಸುತ್ತದೆ. ಮಂಡ್ಯ ಡಿಡಿಪಿಐ ಅವರು ಇವತ್ತು ಸತ್ಯಾಗ್ರಹ ಸ್ಥಳಕ್ಕೆ ಬಂದಿದ್ದರು. ಹೋರಾಟಗಾರರ ಜೋರುದನಿ ಅವರನ್ನು ಕೆರಳಿಸಿರಬಹುದು. ಆದರೆ.., ಈ ಹೋರಾಟಗಾರರ ಕುರಿತು ನಾವು ಹೃದಯದಿಂದ ಆಲೋಚಿಸಬೇಕಿದೆ.

ಮನೆ ಮಠ ತೊರೆದು ಸತತ 72 ಗಂಟೆಗಳಿಂದ ಬರೀ ನೀರು ಕುಡಿದು “ನಮ್ಮ ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ. ಉಳಿಸಿಕೊಡಿ ಪ್ಲೀಸ್” ಅಂಥ ಮಂಡ್ಯದಲ್ಲಿ ಉಪವಾಸ ಕುಳಿತಿರುವ ಇವರು ಸಾಮಾನ್ಯ ಮಧ್ಯಮ ವರ್ಗದಲ್ಲಿ ಹುಟ್ಟಿ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಮಾಸ್ಟರ್ಸ್, ಪಿಎಚ್‌ಡಿ ಮಾಡಿಕೊಂಡವರು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಲಕ್ಷಗಟ್ಟಲೆ ಹಣ ಸಂಪಾದಿಸಬಹುದಾಗಿದ್ದ ಈ ಯುವ ಕ್ರಾಂತಿಕಾರಿಗಳನ್ನು ಸಾಮಾಜಿಕ ಕಳಕಳಿ ಒಂದುಗೂಡಿಸಿದೆ.
ನಮ್ಮನ್ನಾಳುತ್ತಿರುವ ರಾಜಕಾರಣಿಗಳು ಮತ್ತು ಲಾಭಕೋರ ಬಂಡವಾಳಶಾಹಿಗಳ ಸ್ವಾರ್ಥ ಸಾಧನೆಯಿಂದ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಬಡ ರೈತರು ಮಕ್ಕಳ ಫೀಜು ಕಟ್ಟಲಾಗದೆ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಖಾಸಗಿ ಇಂಟರ್‌ನ್ಯಾಷನಲ್ ಕಾನ್ವೆಂಟುಗಳ ಸ್ಕೂಲ್ ಬಸ್ಸುಗಳು ನಮ್ಮ ಹಳ್ಳಿಗಳಿಗೆ ಪೈಪೋಟಿಯ ಮೇಲೆ ನುಗ್ಗುತ್ತಿವೆ. ಸರ್ಕಾರಿ ಶಾಲೆಗಳು ಪಾಳುಬಿದ್ದು ಸ್ಮಶಾನಗಳಾಗುತ್ತಿವೆ. ಜನ ಎಚ್ಚೆತ್ತುಗೊಳ್ಳಬೇಕಿದೆ.



