ಮಂಡ್ಯ: ಮಿಮ್ಸ್‌ಗೆ ಸಂಬಂಧಿಸಿದಂತೆ ಜಾಗದ ಒತ್ತುವರಿಯನ್ನು ತೆರವುಗೊಳಿಸಿ, ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳಿಗೆ ಜಮೀನು ಮಂಜೂರು ಮಾಡಿರುವುದನ್ನು ರದ್ದು ಮಾಡಿ, ಲೋಪವೆಸಗಿದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ವಹಿಸುವಂತೆ ಜಿಲ್ಲಾಡಳಿತವನ್ನು ಮಾಹಿತಿ ಹಕ್ಕು ಕಾರ್ಯಕರ್ತ ಆರ್.ರವೀಂದ್ರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಜಿಲ್ಲಾಸ್ಪತ್ರೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಉದ್ದೇಶಕ್ಕೆ ೭೮.೧೫ ಎಕರೆ ಜಮೀನು ಮೀಸಲಿಡಲಾಗಿದ್ದು, ಅವುಗಳನ್ನು ಕೆಲವರು ಒತ್ತುವರಿ ಮಾಡಿಕೊಂಡರೆ, ಇನ್ನು ಕೆಲವರು ಅಕ್ರಮವಾಗಿ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸುಮಾರು ೯೦೦ ಕೋಟಿ ರೂ. ಹೆಚ್ಚು ಬೆಲೆ ಬಾಳುವ ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಹಾಗೂ ಸಂಘ-ಸಂಸ್ಥೆಗಳು ಮಂಜೂರು ಮಾಡಿಸಿಕೊಂಡಿರುವುದನ್ನು ತನಿಕೆ ನಡೆಸಿ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಟ್ರಾಮಾ ಕೇರ್ ನಿರ್ಮಾಣಕ್ಕೆ ಮಂಡ್ಯ ಶಾಸಕರು ಡಿಎಚ್‌ಓ ಕಚೇರಿ ಸ್ಥಳವನ್ನು ತೆರವು ಮಾಡಿಸುವುದಾಗಿ ಹೇಳಿದ್ದಾರೆ. ಮಿಮ್ಸ್‌ಗೆ ಸಂಬಂಧಿಸಿದಂತೆ ಒತ್ತುವರಿ ಮಾಡಿಕೊಂಡ ೨ಎಕರೆ ೩೩ ಗುಂಟೆ ಸ್ಥಳವಿದೆ. ಅಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಬುದು ಎಂದು ಸಲಹೆ ನೀಡಿದರು.
ತಮಿಳು ಕಾಲೋನಿ ಸಂಬಂಧ ಇರುವ ತಡೆಯಾಜ್ಞೆಯು ೨೦೨೬ರ ಫೆ.೩ರಂದು ನ್ಯಾಯಾಲಯ ತೆರವು ಮಾಡಲಿದೆ. ಜಿಲ್ಲಾಧಿಕಾರಿಗಳು ಕೂಡಲೇ ತಮಿಳು ಕಾಲೋನಿ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮವಹಿಸಬೇಕು. ಈ ಸಂಬಂಧ ಜಿಲ್ಲೆಯ ರಾಜಕಾರಣಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸಚಿವರು ಕೈಗಾರಿಕೆ ಸ್ಥಾಪಿಸಲು ಸ್ಥಳ ಹುಡುಕಾಟದಲ್ಲಿದ್ದಾರೆ. ಜಿಲ್ಲೆಯಲ್ಲಿ ಅಕ್ರಮವಾಗಿ ಭೂಮಿ ಕಬಳಿಕೆ ಮಾಡಿರುವುದನ್ನು ತೋರಿಸಿ. ಈ ಸಂಬಂಧ ದಾಖಲೆಗಳನ್ನು ಒದಗಿಸುತ್ತೇವೆ. ಅವುಗಳನ್ನು ತೆರವುಗೊಳಿಸಿ ಜಿಲ್ಲೆಯ ಅಭಿವೃದ್ದಿಗೆ ರಾಜ್ಯ-ಕೇಂದ್ರ ಸಚಿವರಿಬ್ಬರು ಶ್ರಮಿಸಬೇಕು. ಇವರ ಜಗಳದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ತೊಡಕಾಗುತ್ತಿದೆ ಎಂದು ದೂರಿದರು.
ನಗರದಲ್ಲಿ ಸರ್ಕಾರಿ ಶಾಲೆ(ಕಲ್ಲುಕಟ್ಟಡ), ಮಿಮ್ಸ್‌ಗೆ ಸಂಬಂಧಿಸಿದಂತೆ ಮೈಸೂರು ರಾಜರು ೩ ಗೆಜೆಟ್‌ಗಳಲ್ಲಿ ೭೮ ಎಕರೆ ೧೫ ಗುಂಟೆ ಜಮೀನು ಮಂಜೂರು ಮಾಡಿದ್ದರು. ಈ ಪೈಕಿ ತಮಿಳು ಕಾಲೋನಿ ಒತ್ತುವರಿ ಸಂಬಂಧ ಇದ್ದ ತಡೆಯಾಜ್ಞೆ ಫೆ.೩ರಂದು ತೆರವುಗೊಳ್ಳಲಿದೆ. ಉಳಿದಂತೆ ಅಕ್ರಮವಾಗಿ ಮಂಜೂರು ಮಾಡಿಕೊಂಡಿರುವ ಸಂಘ-ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ನೋಟೀಸ್ ನೀಡಿ ತೆರವು ಕಾರ್‍ಯಕ್ಕೆ ಮುಂದಾಗುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಶಿವರಾಮೇಗೌಡ, ಕಿರಣ್‌ಕುಮಾರ್, ಮಾದು, ಅಣ್ಣಯ್ಯ ಇದ್ದರು.


