ಮಂಡ್ಯ: ಹೊಸ ಕಾಯ್ದೆಯಿಂದ ನರೇಗಾ ಯೋಜನೆಯ ಅವ್ಯವಹಾರ, ದುರುಪಯೋಗಗಳನ್ನು ತಡೆಯುವ ಉದ್ದೇಶದಿಂದ ವಿಬಿ ಜಿರಾಮ್ ಜಿ ಯೋಜನೆಯಾಗಿ ಸ್ವರೂಪ ಬದಲಿಸಲಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಯೋಜನೆಯ ಲೋಪದೋಷಗಳನ್ನು ಸರಿಪಡಿಸಿ ಹೊಸದಾಗಿ ವಿಬಿಜಿ ರಾಮಜಿ ಕಾಯ್ದೆ ಜಾರಿಗೆ ತರಲಾಗಿದೆ. ಮನರೆಗಾದಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ರಾಜ್ಯ ಸರಕಾರಗಳ ಸಹಭಾಗಿತ್ವದೊಂದಿಗೆ ಯೋಜನೆ ಮುಂದುವರೆಸಲು ಸ್ವರೂಪ ಬದಲಿಗೆ ಹೊಸದಾಗಿ ವಿಬಿಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಸಮರ್ಥಿಸಿಕೊಂಡರು.
ನಕಲಿ ಜಾಬ್ ಕಾರ್ಡ್ಗಳು, ಕೃತಕ ಪಲಾನುಭವಿಗಳು, ಕಲ್ಪಿತ ಮಾಸ್ಟರ್ ರೋಲ್ಗಳು, ಕಾರ್ಮಿಕರಿಗೆ ಭಾಗಶಃ ವೇತನ ಪಾವತಿಯಂತಹ ಅನೇಕ ಹಗರಣಗಳು ನಡೆದಿವೆ. ಇದರಿಂದ ಪಶ್ಚಿಮ ಬಂಗಳ, ಪಂಜಾಬ್, ತೆಲಂಗಾಣ ರಾಜ್ಯಗಳಲ್ಲಿ ಸಾವಿರಾರು ಕೋಟಿ ರೂ ಹಣ ದುರ್ಬಳಕೆಯಾಗಿರುವುದು ಬಹಿರಂಗಗೊಂಡಿವೆ ಎಂದು ಹೇಳಿದರು.
ಮನರೇಗಾ ಕಾಮಗಾರಿಗಳು ಕೃಷಿ ಋತುವಿನಲ್ಲಿ ಮುಂದುವರೆದ ಕಾರಣದಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕಾರ್ಮಿಕರ ಕೊರತೆ ಸೃಷ್ಠಿಸುತ್ತಿದೆ. ಇದರಿಂದ ಕೃಷಿಯ ವೆಚ್ಚವು ದುಬಾರಿಯಾಗಿತ್ತು. ಕಾನೂನಿನಲ್ಲಿ ನಿರುದ್ಯೋಗ ಭತ್ಯೆ, ವಿಳಂಬದ ವೇತನ ಪಾವತಿಗೆ ಪರಿಹಾರ ಒದಿಗಸಲಾಗಿತ್ತು ಆದರೆ ಅವುಗಳ ಪಾವತಿ ವಿರಳ ಮತ್ತು ನಿಬಂಧನೆಗಳು ಸಾಂಕೇತವಾಗಿ ಮಾತ್ರ ಇದ್ದವು ಎಂದು ತಿಳಿಸಿದರು.
ವಿಬಿ ಗ್ರಾಮ ಜಿ ಯೋಜನೆಯಡಿ ಕೂಲಿ ದಿನಗಳ ಸಂಖ್ಯೆಯನ್ನು ೧೦೦ ರಿಂದ ೧೨೫ ಕ್ಕೆ ಹೆಚ್ಚಿಸಲಾಗಿದೆ. ಹೊಸ ಯೋಜನೆಯಡಿ ಕೇಂದ್ರ ಸರಕಾರ ಶೇ.೬೦ರಷ್ಟು ರಾಜ್ಯ ಸರ್ಕಾರ ಶೇ. ೪೦ ರಷ್ಟು ಹಣ ಭರಿಸಬೇಕಾಗಿದೆ. ಜಲ ಸಂಬಂಧಿ ಕಾಮಗಾರಿ, ಗ್ರಾಮೀಣ ಮೂಲ ಸೌಕರ್ಯ, ಜೀವನೋಪಾಯ ಸಂಬಂಧ ಮೂಲಸೌಕರ್ಯ, ಹವಾಮಾನ ವೈಪರಿತ್ಯ, ವಿಪತ್ತಿನ ಸನ್ನದ್ದತೆಗಳನ್ನು ತಗ್ಗಿಸಲು ವಿಶೇಷ ಕಾರ್ಯಗಳಿಗೆ ನೇರವಾಗಿ ಕೊಡುಗೆ ನೀಡುತ್ತದೆ ಎಂದರು.
ಈ ಯೋಜನೆಯಲ್ಲಿ ಎಐ ತಂತ್ರಜ್ಞಾನ ಬಳಸಲಾಗುತ್ತಿದೆ. ಜಿಯೋ-ಟ್ಯಾಗಿಂಗ್, ಉಪಗ್ರಹ ಚಿತ್ರಣ, ನೈಜ-ಸಮಯದ ಟ್ಯಾಗಿಂಗ್ಗೆ ಮೊಬೈಲ್ ಅಪ್ಲಿಕೇಶನ್, ಎಐ ಆಧಾರಿತ ವಂಚನೆ ಪತ್ತೆ ಮತ್ತು ವಿಶ್ಲೇಷಣೆ, ಕಾಲ ಮಿತಿಯಲ್ಲಿ ವೇತನ ಪಾವತಿ, ಧನಸಹಾಯದ ಚೌಕಟ್ಟು ಮತ್ತು ಹಣಕಾಸಿನ ಶಿಸ್ತು ಸೇರಿದಂತೆ ಹಲವು ವಿಭಾಗಗಳಲ್ಲಿ ಭ್ರಷ್ಟಾಚಾರ ಮತ್ತು ಹಣ ದುರುಪಯೋಗ ನಿಯಂತ್ರಿಸುತ್ತದೆ ಎಂದು ವಿವರಿಸಿದರು.
೨೦೦೫ರಿಂದ ಜಾರಿಯಲ್ಲಿರುವ ಮನರೇಗಾ ಯೋಜನೆಗೆ ೧೨.೫ ಲಕ್ಷ ಕೋಟಿ ರೂಗಳ ಅನುದಾನ ಬಳಕೆಯಾಗಿದೆ. ಆದರೆ, ಎನ್ಡಿಎ ಸರಕಾರದ ಅವದಿಯಲ್ಲೇ ೮ ಲಕ್ಷ ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು. ಉಳಿದಂತೆ ಅಧಿಕ ಅವಧಿಗೆ ಉಪಿಎ ಸರಕಾರದಿಂದ ೪.೫ ಲಕ್ಷ ಕೋಟಿ ರೂ.ಗಳ ಅನುದಾನ ನೀಡದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅಶೋಕ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ವಕ್ತಾರ ನಾಗಾನಂದ ಇದ್ದರು.


