ಮಂಡ್ಯ: ಮಾಜಿ ಸಚಿವ ಎಂ.ಎಚ್.ಅಂಬರೀಶ್ ಅವರ ವಿರುದ್ದ ಅಶ್ಲೀಲ ಹೇಳಿಕೆ ನೀಡಿದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಜ.೩೦ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಎಚ್ಚರಿಕೆ ನೀಡಿದರು.
ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್.ಆರ್.ಶಿವರಾಮೇಗೌಡ ಅವರು ಜಿಲ್ಲೆಯ ಹೆಗ್ಗಳಿಕೆಗೆ ಪಾತ್ರರಾದ ಮಾಜಿ ಸಂಸದ ಜಿ.ಮಾದೇಗೌಡ ಹಾಗೂ ಮಾಜಿ ಸಚಿವ ಎಂ.ಎಚ್.ಅಂಬರೀಶ್ ಅವರ ತೇಜೋವಧೆ ಮಾಡಿರುವ ಆಡಿಯೋ ವೈರಲ್ ಆಗಿದೆ. ಅವರ ಹೇಳಿಕೆಗೆ ಮಾದೇಗೌಡ ಹಾಗೂ ಅಂಬರೀಶ್ ಅಭಿಮಾನಿಗಳ ತೀವ್ರ ಖಂಡನೆ ವ್ಯಕ್ತವಾಗಿದೆ ಎಂದರು.
ಅಧಿಕಾರದ ಚುಕ್ಕಾಣಿ ಹಿಡಿಯಲು ೨೦೦೯ರಿಂದ ವಿವಿಧ ಪಕ್ಷಗಳಿಗೆ ಹಾರಿ ಹೋದ ಇವರು ತಮ್ಮನ್ನು ತಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್‍ಯಕರ್ತರೆಂದು ಹೇಳಿಕೊಳ್ಳುತ್ತಾರೆ. ಎಲ್ಲ ಪಕ್ಷಗಳನ್ನು ಸುತ್ತಿಬಂದ ಇವರು ಇದೀಗ ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ಬದುಕಿರುವವರೆಗೂ ಕಾಂಗ್ರೆಸ್ ಪಕ್ಷಕ್ಕೆ ದುಡಿದ ಇಬ್ಬರು ಮಹನೀಯರ ವಿರುದ್ಧ ಅವಹೇಳನವಾಗಿ ಮಾತನಾಡಿದ ಅವರಿಗೆ ಕೆಪಿಸಿಸಿ ಅಧ್ಯಕ್ಷರು ನೋಟಿಸ್ ನೀಡಿ ಅಮಾನತು ಮಾಡದಿರುವುದು ಸರಿಯಲ್ಲ. ಮಾದೇಗೌಡರು, ಅಂಬರೀಶ್ ಅವರ ಬಗ್ಗೆ ಪಕ್ಷಕ್ಕೆ ಕಿಂಚಿತ್ತು ಗೌರವವಿದ್ದರೆ ಶಿವರಾಮೇಗೌಡರನ್ನು ಪಕ್ಷದಿಂದ ಅಮಾನತು ಮಾಡುವಂತೆ ಒತ್ತಾಯಿಸಿದರು.
ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಪ್ರಚೋಧನಾಕಾರಿ ಹೇಳಿಕೆ ನೀಡುವವರನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಅಧಿಕಾರ ನೀಡಲಾಗಿದೆ. ಪೊಲೀಸರು ಕೂಡಲೇ ಸುಮೋಟೊ ಪ್ರಕರಣ ದಾಖಲಿಸಿ ಎಲ್.ಆರ್.ಶಿವರಾಮೇಗೌಡರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಎಲ್.ಆರ್.ಶಿವರಾಮೇಗೌಡ ವಿರುದ್ದ ಮಂಡ್ಯ ಹಾಗೂ ಚೆನ್ನಮ್ಮನಕೆರೆ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು. ಅವರು ಈ ಕೂಡಲೇ ಅಂಬರೀಶ್ ಹಾಗು ಮಾದೇಗೌಡರ ಅಭಿಮಾನಿಗಳಲ್ಲಿ ಕ್ಷಮೆ ಕೇಳಬೇಕು. ಜ.೩೦ರಂದು ಬೆಂಗಳೂರಿನಲ್ಲಿ ಮುಂದುವರೆದು ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಜೂನಿಯರ್ ಅಂಬರೀಶ್ ಖ್ಯಾತಿಯ ಅಂಬಿ ಪುಟ್ಟೇಗೌಡ, ಅಭಿಮಾನಿಗಳ ಸಂಘದ ಮಂಡ್ಯ ತಾಲೂಕು ಅಧ್ಯಕ್ಷ ಪ್ರತಾಪ್ ಚಿಕ್ಕಮಂಡ್ಯ, ಶಶಿ ಇದ್ದರು.


