ಕುಮಾರಸ್ವಾಮಿ ನಿಲ್ತಾರಾ ಮಂಡ್ಯದಿಂದ’
ಕುಮಾರಸ್ವಾಮಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ?ಹೀಗೊಂದು ಚರ್ಚೆ ಕಳೆದ ಕೆಲದಿನಗಳಿಂದ ಮಂಡ್ಯದ ರಾಜಕೀಯ ಪಡಸಾಲೆಯಲ್ಲಿ ನಡೀತಿದೆ.ಹೇಗೂ ಚುನಾವಣಾ ಕಾಲ ಬಾಯಿಗೆ ಮಾತನಾಡುವ ಚಪಲ ಯಾರೋ ಎಲ್ಲೋ ಮಾತನಾಡಿರಬಹುದು ಅಂತಾ ನಿರ್ಲಕ್ಷಿಸಬಹುದಿತ್ತು.ಆದರೆ ಮಿಷನ್ -123ಅಂತಾ ಕುಮಾರಸ್ವಾಮಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯವೆಲ್ಲ ಸುತ್ತುತ್ತಿದ್ದಾರೆ.ಆದರೆ ಕಳೆದ ಬಾರಿ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಮಂಡ್ಯ ಜಿಲ್ಲೆಯ ಮತದಾರರು ತೆನೆ ಹೊತ್ತು ನಿಂತಿದ್ದರು. ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ ಅಂತೆಯೆ ಮಂಡ್ಯದ ಮತದಾರರ ಮನದಲ್ಲು ಸಾಕಷ್ಟು ಬದಲಾವಣೆಗಳಾಗಿವೆ.ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಹಾಲೀ ಶಾಸಕ ಎಂ.ಶ್ರೀನಿವಾಸ್ ಗೆ ಜನತಾದಳದ ಭಿ ಫಾರಂ ಘೋಷಣೆಯಾಗಿದ್ದರು ಕಡೇ ಗಳಿಗೆಯಲ್ಲಿ ಅಭ್ಯರ್ಥಿ ಬದಲಾಗುವ ನಿರೀಕ್ಷೆ ಹಲವರದ್ದು.ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ಕುಮಾರಸ್ವಾಮಿ ಸರಕಾರ ಎಂಟಕ್ಕೆ ಎಂಟು ಜೆಡಿಎಸ್ ಶಾಸಕರು ನೂರಾರು ಕೋಟಿ ದುಡ್ಡು ಸಾವಿರಾರು ಕಾರ್ಯಕರ್ತರು ಬೆವರು ಹರಿಸಿದರು ಜ್ಯಾದಳದ ನಿಖಿಲ್ ಕುಮಾರಸ್ವಾಮಿ ಮಕಾಡೆ ಮಲಗಿದರು.ನಂತರದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ನ ದಿನೇಶ್ ಗೂಳೀಗೌಡ ಗೆಲುವಿನೊಂದಿಗೆ ಇದ್ದ ಸ್ಥಾನವನ್ನು ಜೆಡಿಎಸ್ ಕಳೆದುಕೊಂಡಿತು.ನಂತರದಲ್ಲಿ ನಡೆದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ನ ಮಧು ಮಾದೇಗೌಡ ಗೆಲುವಿನೊಂದಿಗೆ ದಕ್ಷಿಣ ಪದವೀಧರ ಕ್ಷೇತ್ರದಲ್ಲು ಜ್ಯಾದಳ ಇದ್ದ ಸ್ಥಾನವನ್ನು ಕಳೆದುಕೊಂಡಿತು.ಅಧಿಕಾರ ಇದ್ದಾಗ ಮಂಡ್ಯ ಮೈಶುಗರ್ ಕಾರ್ಖಾನೆ ಬಾಗಿಲು ತೆರೆಯಲಿಲ್ಲ.ಏಳಕ್ಕೆ ಏಳು ಕೊಟ್ಟ ಮಂಡ್ಯ ಜಿಲ್ಲೆಗೆ ಹೇಳಿಕೊಳ್ಳುವಂತ ಯೋಜನೆಗಳು ಬರಲಿಲ್ಲ.ಇದ್ದುದ್ದರಲ್ಲಿ ಒಂದಿಷ್ಟು ಕಾಮಗಾರಿಗಳು ನಡೆದು ಜ್ಯಾದಳ ಶಾಸಕರು ಅವರ ಆಪ್ತರು ದುಂಡಗಾದರೆ ವಿನಾ ಜಿಲ್ಲೆಗೆ ಯಾವ ಅನುಕೂಲವು ಒದಗಿಬರಲಿಲ್ಲ.ಸಾಲ ಮನ್ನಾ ಹೊರತುಪಡಿಸಿ .ಇದೆಲ್ಲದರ ಪರಿಣಾಮವಾಗಿ ಏಳರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಜ್ಯಾದಳದ ನಾಯಕರುಗಳೇ ಕಮಲ ಹಿಡಿದಿದ್ದಾರೆ.ಇಂಥ ಹೊತ್ತಿನಲ್ಲೆ ನಾನು ಗೆದ್ದೆ ಗೆಲ್ಲುತ್ತೇನೆ ಎಂದು ಹೇಳುವ ಧೈರ್ಯ ದಳದ ಯಾವ ಶಾಸಕರ ಗಂಟಲಿನಿಂದ ಹೊರಡುತ್ತಿಲ್ಲ.ಇದೆಲ್ಲದರ ಮಧ್ಯೆ ಈ ಎಲ್ಲ ಗೆಲುವುಗಳು ತಮ್ಮ ರಾಜಕೀಯ ಕಡುವೈರಿ ಚಲುವರಾಯಸ್ವಾಮಿಯ ಜಿಲ್ಲಾ ನಾಯಕತ್ವವನ್ನು ಗಟ್ಡಿಗೊಳಿಸುತ್ತಿವೆ.ಸಾಲದ್ದಕ್ಕೆ ದಳದಲ್ಲಿ ಜಿಲ್ಲಾ ಮಟ್ಟದ ನಾಯಕರು ಎಂದು ಹೇಳಿಕೊಳ್ಳುವ ಒಬ್ಬ ನಾಯಕರು ಇಲ್ಲವಾಗಿದೆ.ಇರುವ ನಾಯಕರೆಲ್ಲ ಅವರವರ ಕ್ಷೇತ್ರಗಳಿಗೆ ಸಿಮೀತರು.ಚನ್ನಪಟ್ಟಣದಲ್ಲಿ ಈ ಸಾರಿಯ ಸ್ಪರ್ಧೆ ಅಷ್ಟು ಸಲೀಸಲ್ಲ.ಮಂಡ್ಯ ವಿಧಾನಸಭಾ ಕ್ಷೇತ್ರ ಕೃಷ್ಣರಾಜ ಪೇಟೆ ಹೊರತುಪಡಿಸಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ತಗುಲಿಕೊಂಡಿದೆ.ಮಂಡ್ಯ ಜಿಲ್ಲೆ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಜನತಾದಳಕ್ಕೆ ಪ್ರಬಲವಾದ ನೆಲೆಯಿದೆ.ಇಲ್ಲಿ ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧಿಸಿದರೆ ಜಿಲ್ಲೆಯ ಇನ್ನುಳಿದ ಕ್ಷೇತ್ರದ ಅಭ್ಯರ್ಥಿಗಳಿಗೆ ಟಾನಿಕ್ ಸಿಕ್ಕಂತಾಗುತ್ತದೆ.2018ರ ಫಲಿತಾಂಶ ಮರುಕಳಿಸಬಹುದು ಇದಲ್ಲದೆ ನೆರೆಯ ಮೈಸೂರು ಹಾಸನದ ಮೇಲು ಇದರ ಪರಿಣಾಮ ಇದ್ದೇ ಇರುತ್ತದೆ ಎಂಬ ಲೆಕ್ಕಚಾರಗಳು ಇವೆ.ಈ ಎಲ್ಲ ಲೆಕ್ಕಚಾರಗಳೊಂದಿಗೆ ಕುಮಾರಸ್ವಾಮಿ ಚನ್ನಪಟ್ಟಣ ಹಾಗೂ ಮಂಡ್ಯ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಕುರಿತು ಕಾರ್ಯಕರ್ತರ ಮಟ್ಟದಲ್ಲಿ ಚರ್ಚೆಗಳು ಸಾಗಿವೆ.ಈ ಎಲ್ಲ ಚರ್ಚೆಗಳು ಒಂದು ಅಂತ್ಯ ಕಾಣಲು ಎ.20ವರೆಗೆ ಕಾಯಲೇಬೇಕಿದೆ