Tuesday, November 3, 2026
spot_img

ಮದ್ದೂರು:ಜಗಳ ಬಿಡಿಸಲು ಬಂದವನ ಹತ್ಯೆ

ಮದ್ದೂರು
ಮದ್ದೂರು | ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಮದ್ದೂರು:ಮದ್ದೂರು ಪಟ್ಟಣದ ಸಿದ್ಧಾರ್ಥ ನಗರದಲ್ಲಿ ಹಣದ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಶಾಂತಗೊಳಿಸಲು ಮುಂದಾದ ಅಮಾಯಕ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.

​ವೆಲ್ಡಿಂಗ್ ವೃತ್ತಿ ಮಾಡಿಕೊಂಡಿದ್ದ ಸ್ಥಳೀಯ ನಿವಾಸಿ ಕುಮಾರ್ ಎಂಬುವವರ ಪುತ್ರ ನಂದನ್ (25) ಕೊಲೆಯಾದ ಯುವಕ.

ಘಟನೆಯ ವಿವರ: ಕೆಲಸದ ಹಣದ ವಹಿವಾಟಿಗೆ ಸಂಬಂಧಿಸಿದಂತೆ ರಘು ಹಾಗೂ ಪ್ರಕಾಶ್ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ತಾರಕಕ್ಕೇರಿತ್ತು. ಗಲಾಟೆ ನಡೆಯುತ್ತಿದ್ದ ಸ್ಥಳದಲ್ಲಿದ್ದ ನಂದನ್, ಪರಿಸ್ಥಿತಿಯನ್ನು ತಿಳಿಗೊಳಿಸಿ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾನೆ. ಆದರೆ, ಕ್ಷುಲ್ಲಕ ಜಗಳದಲ್ಲಿದ್ದ ಗುಂಪು ನಂದನ್ ಮೇಲೆಯೇ ತಿರುಗಿಬಿದ್ದಿದೆ ಎನ್ನಲಾಗಿದೆ.

​ಈ ಸಂದರ್ಭದಲ್ಲಿ ಜಗಳದಲ್ಲಿ ಭಾಗಿಯಾಗಿದ್ದರೆನ್ನಲಾದ ಶಿವರಾಜು, ಧನುಷ್ ಹಾಗೂ ನಿಖಿಲ್ ಎಂಬುವವರ ಪೈಕಿ ಶಿವರಾಜು ಎಂಬಾತ ಏಕಾಏಕಿ ‘ಡ್ರ್ಯಾಗನ್’ ಮಾದರಿಯ ಮಾರಕಾಸ್ತ್ರದಿಂದ ನಂದನ್ ಕುತ್ತಿಗೆಯ ಭಾಗಕ್ಕೆ ಆಳವಾಗಿ ಚುಚ್ಚಿ ಗಂಭೀರ ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂದನ್‌ನನ್ನು ತಕ್ಷಣವೇ ಸ್ಥಳೀಯರು ಮದ್ದೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರಾದರೂ, ತೀವ್ರ ರಕ್ತಸ್ರಾವದಿಂದಾಗಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಜಗಳಕ್ಕೂ ತನಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಜಗಳ ನಿಲ್ಲಿಸಲು ಹೋಗಿ ಅಮಾಯಕ ಯುವಕ ಪ್ರಾಣ ಕಳೆದುಕೊಂಡಿರುವುದು ಕುಟುಂಬಸ್ಥರ ಹಾಗೂ ಸ್ಥಳೀಯರ ಆಕ್ರಂದನಕ್ಕೆ ಕಾರಣವಾಗಿದೆ.
​

ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ವಿ.ಜೆ. ಶೋಭಾರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಆವರಣದಲ್ಲಿ ನೂರಾರು ಮಂದಿ ಸಾರ್ವಜನಿಕರು ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

​ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!