**ಕೃಷ್ಣರಾಜಪೇಟೆಯಲ್ಲಿ ಆರ್ಎಸ್ಎಸ್ ವಿಜಯದಶಮಿ ಪಥಸಂಚಲನ: ಗಣವೇಷಧಾರಿ ಸ್ವಯಂಸೇವಕರಿಂದ ಶಿಸ್ತಿನ ಮೆರವಣಿಗೆ**
ಕೃಷ್ಣರಾಜಪೇಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ 101ನೇ ವರ್ಷಾಚರಣೆ ಅಂಗವಾಗಿ ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನದ ನಂತರ ಆರ್ಎಸ್ಎಸ್ ಸ್ವಯಂಸೇವಕರು ಮುಖ್ಯ ಬೀದಿಗಳಲ್ಲಿ ವಿಜಯದಶಮಿ ಪಥಸಂಚಲನ ನಡೆಸಿದರು.
ಪಟ್ಟಣದ ಹೊಸ ಕಿಕ್ಕೇರಿ ರಸ್ತೆ ಪಕ್ಕದಲ್ಲಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಆವರಣದಲ್ಲಿ ಕಾರ್ಯಕ್ರಮ ಆರಂಭವಾಯಿತು. ಕೃಷ್ಣರಾಜಪೇಟೆ ಪಟ್ಟಣ, ಕಸಬಾ, ಬೂಕನಕೆರೆ, ಅಕ್ಕಿಹೆಬ್ಬಾಳು, ಕಿಕ್ಕೇರಿ, ಸಂತೆಬಾಚಹಳ್ಳಿ ಹಾಗೂ ಶಿಳ್ಳನೆರೆ ಹೋಬಳಿಗಳು ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸ್ವಯಂಸೇವಕರು ಸಂಘದ ನಿಯಮದಂತೆ ಗಣವೇಷಧಾರಿಗಳಾಗಿ ಪ್ರಮುಖರ ಸೂಚನೆಯಂತೆ ಶಿಸ್ತಿನಿಂದ ಸಾಲುಗಟ್ಟಿ ನಿಂತರು.
ಪ್ರಮುಖರ ಸೂಚನೆಗೆ ತಕ್ಕಂತೆ ಎಡ-ಬಲಕ್ಕೆ ತಿರುಗಿದ ಸ್ವಯಂಸೇವಕರು, ಭಗವಾಧ್ವಜ ಮತ್ತು ಭಾರತಾಂಬೆಯ ಚಿತ್ರಪಟದ ಕಡೆಗೆ ಮುಖಮಾಡಿ ನಿಂತು, ಗುರುವಾಗಿ ಸ್ವೀಕರಿಸಿರುವ ಭಗವಾಧ್ವಜಕ್ಕೆ ಗೌರವ ಪ್ರಣಾಮ ಸಲ್ಲಿಸಿದರು. ಬಳಿಕ ದೇಶ ಹಾಗೂ ಭಾರತಾಂಬೆಯನ್ನು ಕುರಿತು ರಚಿಸಿರುವ ದೇಶಭಕ್ತಿ ಗೀತೆಯನ್ನು ಹಾಡಿ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು.
ಭಗವಾಧ್ವಜ ಹಾಗೂ ಬ್ಯಾಂಡ್ ವಾದ್ಯದ ನಾದದೊಂದಿಗೆ ಸಾಗಿದ ಪಥಸಂಚಲನದ ಮಾರ್ಗದುದ್ದಕ್ಕೂ ಮಹಿಳೆಯರು, ಪುರುಷರು, ಹಿತೈಷಿಗಳು ಹಾಗೂ ಮಕ್ಕಳು ಭಗವಾಧ್ವಜಕ್ಕೆ ಪುಷ್ಪವೃಷ್ಟಿಗೈದು ತಮ್ಮ ದೇಶಾಭಿಮಾನ ಮೆರೆದರು.
ಪಥಸಂಚಲನವು ಹೊಸ ಕಿಕ್ಕೇರಿಯಿಂದ ಹಳೇ ಕಿಕ್ಕೇರಿ ರಸ್ತೆ ಮಾರ್ಗವಾಗಿ ಸಾಗಿ, ದುರ್ಗಾಭವನ ವೃತ್ತವನ್ನು ಬಳಸಿಕೊಂಡು ಮುಖ್ಯರಸ್ತೆಯಲ್ಲಿ ಟಿ.ಬಿ. ವೃತ್ತ ಹಾಗೂ ಅಗ್ನಿಶಾಮಕ ಠಾಣೆಯ ಮುಂಭಾಗದ ಮೂಲಕ ಹಾದು, ಹೊಸ ಕಿಕ್ಕೇರಿ ರಸ್ತೆಗೆ ಮರಳಿತು. ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಾಂಗಣದಲ್ಲಿ ಭಗವಾಧ್ವಜವನ್ನು ಭಾರತಾಂಬೆಯ ಚಿತ್ರಪಟದ ಪಕ್ಕದಲ್ಲಿ ಸ್ಥಾಪಿಸಿ, ದೇಶಭಕ್ತಿ ಗೀತೆ ಪಠಿಸಿ ಗೌರವ ವಂದನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.
ಪಟ್ಟಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸುನೀಲ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರಮುಖರು, ಸ್ವಯಂಸೇವಕರು, ಮಹಿಳೆಯರು, ಹಿತೈಷಿಗಳು ಹಾಗೂ ಪುಟಾಣಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಭಾಗವಹಿಸಿದ ಎಲ್ಲರಿಗೂ ಬಾಳೆಹಣ್ಣು ಹಾಗೂ ತಂಪು ಮಜ್ಜಿಗೆ ವಿತರಿಸಲಾಯಿತು.


