ಖಾಸಗಿ ಅಂಬುಲೆನ್ಸ್ ಲಾಭಿಗೆ ಮಣಿಯಿತೆ ಮಿಮ್ಸ್!
ಒಕ್ಕೂಟ ಸರಕಾರದ ಮಂತ್ರಿ ಕುಮಾರಸ್ವಾಮಿಯವರ ಪ್ರಯತ್ನದ ಭಾಗವಾಗಿ ಮಂಡ್ಯ ಮಿಮ್ಸ್ ನಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾಮಗಾರಿಗಳ ಸಂಬಂದದ ನಾಮಫಲಕದಲ್ಲಿನ ಕುಮಾರಸ್ವಾಮಿ ಚಿತ್ರಕ್ಕೆ ಟೇಪ್ ಅಂಟಿಸಿದ ಪ್ರಕರಣ ಚರ್ಚೆಯಾಗುತ್ತಿರುವ ಬೆನ್ನಲ್ಲೆ ಖಾಸಗಿ ಅಂಬುಲೆನ್ಸ್ ಲಾಭಿಗೆ ಮಿಮ್ಸ್ ಆಡಳಿತ ಮಂಡಳಿ ಮಣಿದಿರುವ ವಿಷಯ ಈಗ ಚರ್ಚೆಯ ಮುನ್ನೆಲೆಗೆ ಬಂದಿದೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಒಟ್ಟು ಒಂಬತ್ತು ಅಂಬುಲೆನ್ಸ್ ಗಳನ್ನು ನಿಯೋಜಿಸಲಾಗಿದೆ.ಇದರಲ್ಲಿ ರಕ್ತನಿಧಿ ಕೇಂದ್ರದಲ್ಲಿ ಎರಡು ಬೆಂಗಳೂರು ಮೈಸೂರಿಗೆ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ರವಾನಿಸಲು ಏಳು ಅಂಬುಲೆನ್ಸ್ ನಿಯೋಜಿಸಲಾಗಿದೆ.
ಈ ಪೈಕಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ವತಿಯಿಂದ ಮೂರು ಎಸ್ ಬಿ ಐ ಬ್ಯಾಂಕಿನಿಂದ ಒಂದು ಅಂಬುಲೆನ್ಸ್ ಸಿಎಸ್ ಆರ್ ನಿಧಿಯಡಿ ಆಸ್ಪತ್ರೆಗೆ ನೀಡಲಾಗಿದೆ.ಈ ಹಿಂದಿನ ಸಂಸದೆ ಸುಮಲತಾ ಅಂಬರೀಶ್ ಸಹ ತಮ್ಮ ಅನುದಾನದಲ್ಲಿ ವೆಂಟಿಲೇಟರ್ ಸಹಿತ ಒಂದು ಅಂಬುಲೆನ್ಸ್ ನೀಡಿದ್ದಾರೆ.
ಈ ಯಾವುದೆ ಅಂಬುಲೆನ್ಸ್ ಗಳಿಗೆ ಖಾಯಂ ಚಾಲಕರಿಲ್ಲ.ಹೆಸರಿಗೆ ಸರ್ಕಾರಿ ಆಸ್ಪತ್ರೆಯಾದರೂ ಈ ಎಲ್ಲ ಅಂಬುಲೆನ್ಸ್ ಚಲಾಯಿಸುವ ಎಲ್ಲರು ಹೊರಗುತ್ತಿಗೆ ವಾಹನ ಚಾಲಕರೇ ಆಗಿದ್ದಾರೆ.
ದಿನವೊಂದಕ್ಕೆ ಮಂಡ್ಯ ಮಿಮ್ಸ್ ನಲ್ಲಿ ಇಪ್ಪತ್ತಕ್ಕು ಹೆಚ್ವು ಪ್ರಕರಣಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಬೆಂಗಳೂರಿಗೆ ರವಾನಿಸಲಾಗುತ್ತದೆ.
ಆದರೆ ಈ ಎಲ್ಲ ಪ್ರಕರಣಗಳಲ್ಲಿ ಸರಕಾರಿ ಅಂಬುಲೆನ್ಸ್ ರೋಗಿಗಳಿಗೆ ದಕ್ಕುವುದಿಲ್ಲ.ಕಾರಣ ರಕ್ತನಿಧಿ ಬ್ಯಾಂಕಿನ ಎರಡು ಅಂಬುಲೆನ್ಸ್ ಗಳಿಗೆ ಇರುವುದು ಒಬ್ಬರೇ ಚಾಲಕರು.
ಇನ್ನು ಜಿಲ್ಲಾಸ್ಪತ್ರೆಯ ಏಳು ಅಂಬುಲೆನ್ಸ್ ಪೈಕಿ ಎರಡು ಪಾಳಿಗಳಲ್ಲಿ ಇರುವುದು ನಾಲಕ್ಕು ಚಾಲಕರು ಮಾತ್ರ.
ಸದ್ಯ ಅಂಬುಲೆನ್ಸ್ ಒಂದರ ಚಾಲಕ ಅನಾರೋಗ್ಯ ನಿಮಿತ್ತ ಕಳೆದ ಎರಡು ತಿಂಗಳಿನಿಂದ ರಜೆಯಲ್ಲಿದ್ದು.ಅಂಬುಲೆನ್ಸ್ ಸೇವೆಗೆ ಲಭ್ಯವಾಗುತ್ತಿಲ್ಲ.ಈ ಪ್ರಕರಣದಲ್ಲಿ ಪರ್ಯಾಯ ಚಾಲಕರ ವ್ಯವಸ್ಥೆ ಮಾಡಲಾಗದ ನಿರ್ದೇಶಕರ ಅಸಮರ್ಥತೆ ಮತ್ತೊಮ್ಮೆ ಬಯಲಾಗಿದೆ.ಮತ್ತೊಂದು ಪ್ರಕರಣದಲ್ಲಿ ನಿರ್ದೇಶಕ ಡಾ.ನರಸಿಂಹ ಸ್ವಾಮಿಯವರ ವೈಯಕ್ತಿಕ ಪ್ರತಿಷ್ಟೆಯಿಂದಾಗಿ ಅಂಬುಲೆನ್ಸ್ ಚಾಲಕನಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ಕೊಡದೆ ಕಳೆದ ಮೂರು ತಿಂಗಳಿನಿಂದ ಅಂಬುಲೆನ್ಸ್ ಸೇವೆಗೆ ಲಭ್ಯವಾಗುತ್ತಿಲ್ಲ.ಚಾಲಕ ಅಂಬುಲೆನ್ಸ್ ಚಲಾಯಿಸಲು ಸಿದ್ದನಿದ್ದರೂ ವಾಹನ ನೀಡದೆ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸುತ್ತಾ ಕಿರುಕುಳ ನೀಡಲಾಗುತ್ತಿದೆ.
ಇದರ ನೇರ ಪರಿಣಾಮ ಸಾರ್ವಜನಿಕರ ಮೇಲಾಗುತ್ತಿದೆ.
ಜತೆಗೆ ಖಾಸಗಿ ಅಂಬುಲೆನ್ಸ್ ಗಳಿಗೆ ಕೇಳಿದಷ್ಡು ದರ ಕೊಟ್ಟು ಸಾರ್ವಜನಿಕರು ತಮ್ಮ ಪ್ರಾಣ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.ಸದ್ಯ ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಖಾಸಗಿ ಅಂಬುಲೆನ್ಸ್ ಗಳ ಅಡ್ಡೆಯಾಗಿ ಪರಿವರ್ತನೆಯಾಗಿದೆ.ಇವುಗಳನ್ನು ನಿಯಂತ್ರಿಸುವುದಿರಲಿ.ಇರುವ ಸೇವೆಯನ್ನು ಸಮರ್ಪಕವಾಗಿ ಒದಗಿಸುವಲ್ಲಿ ಆಡಳಿತ ಸೋತಿದೆ.
ಮಂಡ್ಯ ಮಿಮ್ಸ್ ನಲ್ಲಿ ಲಭ್ಯವಿರುವ ಅಂಬುಲೆನ್ಸ್ ಸಮರ್ಪಕವಾಗಿ ಬಳಸಿಕೊಳ್ಳದೆ ಮಿಮ್ಸ್ ನಿರ್ದೇಶಕರು ಹಾಗೂ ಮೆಡಿಕಲ್ ಸೂಪರಿಡೆಂಟರ ಹಠಮಾರಿ ಹಾಗೂ ಅದಕ್ಷ ಆಡಳಿತದ ಪರಿಣಾಮ ಸಾರ್ವಜನಿಕರು ಜೇಬಿಗೆ ಬಿಸಿ ಮುಟ್ಟುತ್ತಿದೆ.
ಇನ್ನಾದರೂ ಮಿಮ್ಸ್ ಆಡಳಿತದ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಗಮನಹರಿಸದಿದ್ದರೆ ಎಲ್ಲವೂ ಇದ್ದು ಏನು ಇಲ್ಲದಂತಾ ಸ್ಥಿತಿಗೆ ಜಿಲ್ಲಾಸ್ಪತ್ರೆಯನ್ನು ದೂಡಿದಂತಾಗುತ್ತದೆ.


