ಮಂಡ್ಯದಲ್ಲಿ ನಿನ್ನೆಯಿಂದ ಆರಂಭವಾಗಿರುವ ಸರ್ಕಾರಿ ಶಾಲೆ ಉಳಿಸಿ ಉಪವಾಸ ಸತ್ಯಾಗ್ರಹವನ್ನು ಮಂಡ್ಯದ ದೈತ್ಯ ಸಾಂಸ್ಕೃತಿಕ ಸಂಸ್ಥೆಯಾದ ಕರ್ನಾಟಕ ಸಂಘ 2ನೇ ದಿನವಾದ ಇಂದು ಬೆಂಬಲಿಸಿದೆ. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊಫೆಸರ್ ಜಯಪ್ರಕಾಶ ಗೌಡರ ನೇತೃತ್ವದಲ್ಲಿ ಧರಣಿ ಸ್ಥಳಕ್ಕೆ ಆಗಮಿಸಿದ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುವದರೊಂದಿಗೆ ಹೋರಾಟ ಕಳೆಗಟ್ಟಿದೆ.
ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭದ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಂಡ್ಯ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಆರಂಭಿಸಿರುವ ಮೂರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಪ್ರೊ.ಬಿ. ಜಯಪ್ರಕಾಶ ಗೌಡರು ಮಾತನಾಡಿದರು.
“ಸರ್ಕಾರಿ ಶಾಲೆಗಳ ದುಸ್ಥಿತಿಗೆ ದುರ್ಜನರು ಮಾತ್ರವಲ್ಲ ಸಜ್ಜನರ ಮೌನವೂ ಒಂದು ಕಾರಣ. ಸರಕಾರ ಯಾವುದೆ ಯೋಜನೆಗಳ ಕುರಿತು ಸಾರ್ವಜನಿಕ ಸಂವಾದ ಚರ್ಚೆ ನಡೆಸುವುದಿಲ್ಲ. ಉಳ್ಳವರ ಆಸಕ್ತಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಿ, ಅದರಲ್ಲಿ ತಾವೊಂದಿಷ್ಟು ಕಮೀಷನ್ ಬಾಚುವ ಹವಣಿಕೆಯಲ್ಲಿದೆ. ಸರಕಾರಿ ಶಾಲೆ ಉಳಿಸುವ ಈ ಹೋರಾಟ ದೊಡ್ಡ ಹೋರಾಟವಾಗಬೇಕು. ಈ ಕೂಗು ನಿನ್ನೆ ಮೊನ್ನೆಯದಲ್ಲ. ನಾವು ಸಹ ಈ ಹೋರಾಟದ ಜತೆ ಇದ್ದೇವೆ” ಎಂದು ಹೋರಾಟಗಾರರಿಗೆ ಭರವಸೆ ತುಂಬಿದರು.
ಸರ್ಕಾರಿ ಶಾಲೆ ಅಧೋಗತಿಗೆ ಜನಪ್ರತಿನಿಧಿಗಳೇ ಹೊಣೆ: ಸುನಂದಾ ಜಯರಾಂ
ಸರ್ಕಾರಿ ಶಾಲೆಗಳನ್ನು ಮುಚ್ಚುವುದರಿಂದ ಸರ್ಕಾರವೇ ನೇರವಾಗಿ ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣ ಮಾಡಿದಂತಾಗುತ್ತದೆ. ಹಳ್ಳಿ ಹಳ್ಳಿಗಳಲ್ಲೂ ಖಾಸಗಿ ಕಾನ್ವೆಂಟುಗಳನ್ನು ತೆರೆದು ಕೂತಿರುವವರು ನಮ್ಮ ಎಂಪಿ., ಎಂಎಲ್‌ಎಗಳೇ ಆಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿ ವಿಧಾನಸಭೆ, ಸಂಸತ್ತುಗಳಿಗೆ ಆಯ್ಕೆಯಾದ ರಾಜಕಾರಣಿಗಳೇ ಬಡಮಕ್ಕಳು ಓದುತ್ತಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ದುರಂತವಲ್ಲದೆ ಮತ್ತೇನೂ ಅಲ್ಲ.
-ಸುನಂದಾ ಜಯರಾಂ, ಕರ್ನಾಟಕ ರಾಜ್ಯ ರೈತ ಸಂಘ

ಇಂದು ಸಂಜೆ ಕವಿಗಳು, ಕಲಾವಿದರಿಂದ ಸಾಂಸ್ಕೃತಿಕ ಪ್ರತಿರೋಧ
ರೈತಸಂಘದ ಸರ್ಕಾರಿ ಶಾಲೆ ಉಳಿಸಿ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಮಂಡ್ಯ ಹತ್ತಾರು ಸಂಘ ಸಂಸ್ಥೆಗಳು ಇಂದು ಸಂಜೆ ಧರಣಿ ಸ್ಥಳದಲ್ಲಿ ಹಾಡು, ಕವಿತೆ ಮತ್ತು ಚಿತ್ರಕಲೆಯ ಮೂಲಕ ಸಾಂಸ್ಕೃತಿಕ ಪ್ರತಿರೋಧಕ್ಕೆ ಮುಂದಾಗಿವೆ. “ನಾವು ಓದಿದ ಶಾಲೆಗಳು ನಮ್ಮ ಕಣ್ಣೆದುರೇ ಮುಚ್ಚುತ್ತಿರುವಾಗ ನಾವು ಮೌನವಾಗಿರಬಾರದು. ನಾವು ನಮ್ಮದೇ ರೀತಿಯ ಪ್ರತಿಭಟನೆಯನ್ನು ದಾಖಲಿಸುತ್ತೇವೆ. ಚಳಿ ಗಾಳಿಯೆನ್ನದೆ ಉಪವಾಸ ಕೂತಿರುವವರಿಗೆ ನಾವು ಬೆಂಬಲಿಸುತ್ತೇವೆ” ಎಂದು ಚಿತ್ರಕೂಟ ಬಳಗದ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೆವ ಚಳಿಯಲ್ಲೂ ಮುಂದುವರಿದ ಉಪವಾಸ
ರಾಜ್ಯದ ವಿವಿಧ ಭಾಗಗಳಿಂದ ಮಂಡ್ಯದಲ್ಲಿ ನಡೆಯುತ್ತಿರುವ ʼಸರ್ಕಾರಿ ಶಾಲೆ ಉಳಿಸಿʼ ಉಪವಾಸ ಸತ್ಯಾಗ್ರಹದ ಹೋರಾಟಗಾರರು ನಿನ್ನೆ ರಾತ್ರಿ ಕೊರೆಯುವ ರಣಚಳಿಯಲ್ಲೂ ತಮ್ಮ ಹೋರಾಟ ಮುಂದುವರಿಸಿದರು. ಬೆಂಗಳೂರು, ಮೈಸೂರು ಮಾತ್ರವಲ್ಲದೆ ದೂರದ ಕಲಬುರಗಿ, ರಾಯಚೂರು, ಶಿವಮೊಗ್ಗ, ತುಮಕೂರು ಮತ್ತು ಚಿತ್ರದುರ್ಗದಿಂದ ರಾತ್ರಿಯೇ ಮಂಡ್ಯಕ್ಕೆ ಬಂದಿಳಿದಿರುವ ಯುವಕ ಯುವತಿಯರು ಹೊದ್ದುಕೊಳ್ಳಲು ಬೆಡ್‌ಶೀಟ್‌ಗಳಿಲ್ಲದಿದ್ದರೂ ನಡುರಾತ್ರಿಯ ತನಕ ಸತ್ಯಾಗ್ರಹದ ಸ್ಥಳದಲ್ಲಿದ್ದು ಹೋರಾಟವನ್ನು ಗಟ್ಟಿಗೊಳಿಸಿದರು.


ಉಪವಾಸ ಸತ್ಯಾಗ್ರಹದಲ್ಲಿ ಚಿತ್ರಕೂಟ ಬಳಗದ ಸದಸ್ಯರು


