Sunday, June 16, 2024
spot_img

ಕನ್ನಡನಾಡಿನ ಸಾಲ ಆರು ಲಕ್ಷ ಕೋಟಿ.ಬಡ್ಡಿ ಅರವತ್ತು ಸಾವಿರ ಕೋಟಿ.ಸಿದ್ದರಾಮಯ್ಯನವರಿಗೊಂದು ಬಹಿರಂಗ ಪತ್ರ

ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೊಂದು ಬಹಿರಂಗ ಪತ್ರ

ಮಾನ್ಯ ಸಿದ್ದರಾಮಯ್ಯನವರೆ,

ರಾಜ್ಯದ ಹಣಕಾಸು ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ರಾಜ್ಯದ ಮೇಲಿನ ಸಾಲದ‌ ಹೊರೆ ಆರು ಲಕ್ಷ ಕೋಟಿಗೆ ಏರಿಕೆಯಾಗಿದೆ. ರಾಜ್ಯವು ಪ್ರತಿ ವರ್ಷ ಮರುಪಾವತಿ ಮಾಡಬೇಕಿರುವ ಅಸಲು ಬಡ್ಡಿಯೇ ರೂ. 60,000 ಕೋಟಿಯಷ್ಟಿದೆ. ರಾಜ್ಯ ಸರ್ಕಾರಿ ಸಿಬ್ಬಂದಿಗಳ ವೇತನ ವೆಚ್ಚ ಸುಮಾರು ರೂ. 55,000 ಕೋಟಿಯಷ್ಟಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ ಸುಮಾರು ಒಂದು ಲಕ್ಷ ಕೋಟಿ ಹೊಂದಿಸಬೇಕಿದೆ. ಆದರೆ, ರಾಜ್ಯದ ಬಜೆಟ್ ಗಾತ್ರವಿರುವುದು ಸುಮಾರು‌ ಮೂರು ಲಕ್ಷ ಕೋಟಿ ಮಾತ್ರ. ಇದರಿಂದ ವಿತ್ತೀಯ ಕೊರತೆ (Fiscal deficit) ಹಾಗೂ ಸಾಲದ ಹೊರೆ ಗಂಭೀರ ಸ್ವರೂಪ ಪಡೆದಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಆರ್ಥಿಕ ಶಿಸ್ತು (Fiscal discipline) ನಿಭಾಯಿಸಲೇಬೇಕಾದ ಜರೂರಿದೆ. ಹೀಗಾಗಿಯೇ ಸಮರ್ಥ ಅರ್ಥ ಸಚಿವರಾಗಿ ರಾಜ್ಯವನ್ನು ಪ್ರಗತಿಯೆಡೆಗೆ ಮುನ್ನಡೆಸಿದ್ದ ನಿಮ್ಮನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಮುಂದಾಗಿದೆ. ಈ ಹೊತ್ತಿನಲ್ಲಿ ರಾಜ್ಯದ ಆರ್ಥಿಕ ಚೇತರಿಕೆಗೆ ಕಾರಣವಾಗಬಹುದು ಎಂಬ ಆಶಾವಾದದೊಂದಿಗೆ ಈ ಕೆಲವು ಸಲಹೆಗಳನ್ನು ನೀಡುತ್ತಿದ್ದೇನೆ. ಸೂಕ್ತವೆನಿಸಿದರೆ ಅಳವಡಿಸಿಕೊಳ್ಳಬೇಕಾಗಿ ಕಳಕಳಿಯ ಮನವಿ:

1) ಪ್ರತಿ ಬಾರಿಯ ಬಜೆಟ್‌ನಲ್ಲಿ ಇಲಾಖಾವಾರು ಹಂಚಿಕೆಯಾಗುವ ಬಜೆಟ್ ಮೀಸಲಿನ ಪೈಕಿ ಅರ್ಧದಷ್ಟು ಇಲಾಖೆಗಳಲ್ಲಿ ಪೂರ್ಣ ಪ್ರಮಾಣದ ಹಂಚಿಕೆ ಬಳಕೆಯೇ ಆಗುತ್ತಿಲ್ಲ. ಹೀಗಾಗಿ ಮುಂದಿನ ಬಾರಿಯ ಬಜೆಟ್‌ನಲ್ಲಿ ಇಂತಹ ಇಲಾಖೆಗಳನ್ನು ಗುರುತಿಸಿ ವಾಸ್ತವಿಕ ಬಜೆಟ್ ಅನುದಾನ ಮೀಸಲಿಡಿ. (Factual budget allocation).

2) ಎಸ್‌ಸಿಟಿಪಿ/ಎಸ್‌ಟಿಪಿ ಯೋಜನೆಗಳಿಗೆ ರೂ. 20,000 ಕೋಟಿಗೂ ಹೆಚ್ವು ಅನುದಾನ ಮೀಸಲಿಡುತ್ತಿದ್ದರೂ ಅದರಲ್ಲಿ ಅರ್ಧದಷ್ಟೂ ಸದ್ಬಳಕೆಯಾಗುತ್ತಿಲ್ಲ. ಇಲ್ಲೂ ಕೂಡಾ ವಾಸ್ತವಿಕ ಬಜೆಟ್ ಅನುದಾನವನ್ನು ನಿಗದಿಗೊಳಿಸಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಉಳಿದ ಮೊತ್ತವನ್ನು ವಿನಿಯೋಗಿಸಲು ಕ್ರಮ ಕೈಗೊಳ್ಳಿ.

3) ನಿರುದ್ಯೋಗ ಸಮಸ್ಯೆ ತೀವ್ರವಾಗಿರುವುದರಿಂದ ಖಾಲಿ ಇರುವ ಸರ್ಕಾರಿ‌ ಹುದ್ದೆಗಳನ್ನು ಭರ್ತಿ‌ ಮಾಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ‌ ನೀಡಲಾಗಿದೆ. ಇದು ಸ್ವಾಗತಾರ್ಹವಾದರೂ ಬೊಕ್ಕಸದ ಮೇಲಿನ ಆರ್ಥಿಕ‌‌ ಹೊರೆ ದುಪ್ಪಟ್ಟಾಗಲಿದೆ. ಹೀಗಾಗಿ ಖಾಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಜೊತೆಜೊತೆಗೇ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ (PPP) ಹೊಸ ಸಂಸ್ಥೆಗಳನ್ನು ಉತ್ಪಾದನಾ ಆಧಾರಿತ ಬಂಡವಾಳ ಹೂಡಿಕೆಯ (Production based investment) ಮೂಲಕ ಸ್ಥಾಪಿಸಲು‌ ಪ್ರತಿ ವರ್ಷ ರೂ. 10,000 ಕೋಟಿ ಮೀಸಲಿಡಿ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಜಿಎಸ್‌ಟಿ, ಕಾರ್ಪೊರೇಟ್ ತೆರಿಗೆ ಹಾಗೂ ಲಾಭದ ರೂಪದಲ್ಲಿ ಹರಿದು ಬರುವ ಆದಾಯ ವೃದ್ಧಿಯಾಗಲಿದೆ. ಅದರಿಂದ ವಿತ್ತೀಯ‌ ಕೊರತೆಯನ್ನು ತಗ್ಗಿಸಿಕೊಳ್ಳಬಹುದಾಗಿದೆ.

  1. ಸದ್ಯ ಭಾರತದ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ಪಾದನಾ ವಲಯಕ್ಕಿಂತ ಸೇವಾ ವಲಯ ಕ್ಷಿಪ್ರವಾಗಿ ಬೆಳವಣಿಗೆ ಸಾಧಿಸುತ್ತಿದೆ. ಮುಖ್ಯವಾಗಿ ಸರಕು ಸಾಗಣೆ (Logistics), ಮಾಹಿತಿ ತಂತ್ರಜ್ಞಾನ (Information technology) ಹಾಗೂ ಟೆಲಿಕಾಂ ವಲಯಗಳು. ಹೀಗಾಗಿ ಈ ವಲಯಗಳಲ್ಲಿ ನವೋದ್ಯಮಗಳು ಇಲ್ಲವೆ ಈಗಾಗಲೇ ಅಸ್ತಿತ್ವದಲ್ಲಿರುವ ಖಾಸಗಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡು ನೂತನ ಸಂಸ್ಥೆಗಳನ್ನು ಸ್ಥಾಪಿಸುವುದರಿಂದ ಸರ್ಕಾರದ ಆದಾಯ ಗಣನೀಯ ಪ್ರಮಾಣದಲ್ಲಿ ವೃದ್ದಿಯಾಗಲಿದೆ. ಉದಾ:

I) ಸರ್ಕಾರಿ ಒಡೆತನದ Keonics ಸಂಸ್ಥೆ ಹಾಗೂ ಇನ್ನಾವುದಾರೂ ನವೋದ್ಯಮ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಜಂಟಿಯಾಗಿ ಬಂಡವಾಳ ಹೂಡಿಕೆ‌‌ ಮಾಡಿ, ತಂತ್ರಾಂಶಗಳ ಅಭಿವೃದ್ಧಿ ಮತ್ತು ರಫ್ತಿಗೆ ಉತ್ತೇಜನ ನೀಡಿದರೆ, ರಾಜ್ಯದ ಆರ್ಥಿಕತೆ ಗಮನಾರ್ಹ ಪ್ರಮಾಣದಲ್ಲಿ ಚೇತರಿಸಿಕೊಳ್ಳಲಿದೆ.

ii) ಮಹಾರಾಷ್ಟ್ರ ರಾಜ್ಯ ಸರ್ಕಾರಿ ಒಡೆತನದಲ್ಲಿದ್ದ MTNL ಸಂಸ್ಥೆಯಂತೆಯೇ ರಾಜ್ಯದಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ಟೆಲಿಕಾಂ ಸಂಸ್ಥೆಯೊಂದನ್ನು ಹುಟ್ಟು ಹಾಕಿ. ಅದರಿಂದಲೂ ಗಮನಾರ್ಹ ಲಾಭವಾಗಲಿದೆ.

iii) ಭಾರತದಲ್ಲಿ ಸರಕು ಸೇವಾ ವಲಯ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಹೀಗಾಗಿ ಇಲ್ಲಿಯೂ ಕೂಡಾ ಖಾಸಗಿ ಸಹಭಾಗಿತ್ವದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿ.

iv) ಕೇಂದ್ರ ಸರ್ಕಾರದ ಜನೌಷಧಿ‌ ಯೋಜನೆಯಂತೆಯೇ ರಾಜ್ಯ ಸರ್ಕಾರವೂ ಜೆನೆರಿಕ್ ಔಷಧ ಮಾರಾಟ ಮಳಿಗೆಗಳನ್ನು ಸಮರೋಪಾದಿಯಲ್ಲಿ ತೆರೆಯಲು ಕ್ರಮ ಕೈಗೊಳ್ಳಿ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವಾ ವೆಚ್ಚ ತಗ್ಗುವುದರೊಂದಿಗೆ ಸರ್ಕಾರದ ಆದಾಯವೂ ವೃದ್ಧಿಸಲಿದೆ.

ಕೊನೆಯದಾಗಿ, 2024ರ ನಂತರ ನಗುನಗುತ್ತಲೇ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ‌ ಕೇಂದ್ರ ರಾಜಕಾರಣಕ್ಕೆ ತೆರಳಿ. ನಿಮ್ಮ ಅಗತ್ಯವಿಂದು ರಾಜ್ಯಕ್ಕಿಂತ ದೇಶಕ್ಕೇ ಹೆಚ್ಚಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನಿಶ್ಚಿತವಾಗಿ ಅಧಿಕಾರಕ್ಕೆ ಬರಲಿದ್ದು, ಕೇಂದ್ರ ಹಣಕಾಸು ಸಚಿವರಾಗುವ ಮೂಲಕ ನಿಮ್ಮ ಗ್ರಾಮೀಣ ಮೂಲದ ಆರ್ಥಿಕ‌ ಜ್ಞಾನದಿಂದ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ತುಂಬಿ.

ಇಂತಿ,

ಸದಾನಂದ ಸಿ. ಗಂಗನಬೀಡು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!