ಕಾಂಗ್ರೇಸ್ ಪ್ರಣಾಳಿಕೆ ಹಂಚಿಕೊಂಡ ಉಪನ್ಯಾಸಕನಿಗೆ ನೋಟಿಸ್ ಜಾರಿ. ವಿಚಾರಣೆಗೆ ಕರೆ..
ಮಂಡ್ಯ. ಮೇ.4. ಪಿಯುಸಿ ಉಪನ್ಯಾಸಕರ ವಾಟ್ಸ್ ಪ್ ಗ್ರೂಪಿನಲ್ಲಿ ಕಾಂಗ್ರೇಸ್ ಪ್ರಣಾಳಿಕೆಯ ತುಣುಕನ್ನು ಹಂಚಿಕೊಂಡ ಕಾರಣಕ್ಕೆ ಉಪನ್ಯಾಸಕ ಬನ್ನಂಗಾಡಿ ಎಂ.ಡಿ. ತಮ್ಮೇಗೌಡ ಸೇರಿದಂತೆ ಗ್ರೂಪಿನ 24 ಮಂದಿ ಅಡ್ಮಿನ್ ಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ಪಿಯುಸಿ ಉಪನ್ಯಾಸಕರು KSPUCLA ಮಂಡ್ಯ ಎಂಬ ಉಪನ್ಯಾಸಕರ ವಾಟ್ಸ್ ಪ್ ಗ್ರೂಪ್ ರಚಿಸಿಕೊಂಡಿದ್ದು. ಈ ಗ್ರೂಪಿನಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನ್ನಂಗಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಂ.ಡಿ.ತಮ್ಮೇಗೌಡ ಎಂಬುವವರು ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಿಗೆ ಹಳೇಯ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸುವುದಾಗಿ ಘೋಷಿಸಿರುವ ಪ್ರಣಾಳಿಕೆಯ ತುಣುಕನ್ನು ಗುಂಪಿನಲ್ಲಿ ಹಂಚಿಕೊಂಡಿದ್ದರು.
ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯನ್ನು ಗುಂಪಿನಲ್ಲಿ ಹಂಚಿಕೊಂಡದ್ದು ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಸಂಬಂದ ಗ್ರೂಪಿನಲ್ಲಿ ಪ್ರಣಾಳಿಕೆ ಹಂಚಿಕೊಂಡ ಎಂ.ಡಿ.ತಮ್ಮೇಗೌಡ ಸೇರಿದಂತೆ ಇನ್ನುಳಿದ ಇಪ್ಪತ್ತು ನಾಲ್ಕು ಅಡ್ಮಿನ್ ಗಳಿಗೂ ನೋಟಿಸ್ ಜಾರಿ ಮಾಡಿ ಮಂಡ್ಯ ಅಪರ ಜಿಲ್ಲಾಧಿಕಾರಿಗಳ ಎದುರು ಇಂದು ಸಂಜೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಹಳೇಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸರ್ಕಾರಿ ಅನುದಾನಿತ ನೌಕರರು ಕಳೆದ ಸೆಪ್ಟೆಂಬರ್ ನಿಂದ ಸತತ 142 ದಿನಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸಿದ್ದರು. ಈ ಹೋರಾಟಕ್ಕೆ ಸರ್ಕಾರ ಯಾವುದೆ ಪ್ರತಿಕ್ರಿಯೆ ನೀಡಿರಲಿಲ್ಲ. ಹೋರಾಟ ನಿರತ ಇಬ್ಬರು ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡರೆ, ಮೂವರು ಹೃದಯಾಘಾತದಿಂದ ಸಾವನ್ನಪ್ಪಿದರು. ಆದಾಗಿಯೂ ಬಿಜೆಪಿ ಸರ್ಕಾರ ಹೋರಾಟವನ್ನು ಬಲವಂತವಾಗಿ ಹೋರಾಟವನ್ನು ಹತ್ತಿಕ್ಕಿತ್ತು.
ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆ ಕಾಂಗ್ರೇಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅನುದಾನಿತ ಮತ್ತು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಜಾರಿಗೆ ಭರವಸೆ ನೀಡಿರುವುದು ನೌಕರರಲ್ಲಿ ಭರವಸೆ ಮೂಡಿಸಿದೆ. ಈ ತುಣುಕನ್ನು ಪರಸ್ಪರ ಮಾಹಿತಿಗಾಗಿ ಹಂಚಿಕೊಂಡಿದ್ದು, ಇದನ್ನೆ ಒಂದು ಪ್ರಕರಣವಾಗಿ ದಾಖಲು ಮಾಡಿಕೊಂಡಿರುವುದು ಕುತೂಹಲ ಕೆರಳಿಸಿದೆ.