
..
ವಿಶೇಷವರದಿ: ಕೆ.ಆರ್.ನೀಲಕಂಠ ,
ರೈತರ ಸಧೃಢ, ಸ್ವಾವಲಂಭಿ ಜೀವನಕ್ಕೆ ಹೈನುಗಾರಿಕೆಯ ಜೊತೆಗೆ ಇಂದು ಎಳನೀರು ವಹಿವಾಟು ಕೂಡ ಮುಖ್ಯ ಕಾರಣವಾಗಿದೆ. ಕೆ.ಆರ್.ಪೇಟೆ ಎಳನೀರು ಮಾರುಕಟ್ಟೆಯಲ್ಲಿ ಪ್ರತಿದಿನವೂ ಸರಾಸರಿ ೧೨ಸಾವಿರದಿಂದ ೧೫
ಸಾವಿರ ಎಳನೀರಿನಂತೆ ೭ಲಕ್ಷಕ್ಕೂ ಹೆಚ್ಚು ಎಳನೀರು ೫೦ ಬೃಹತ್ ಲಾರಿಗಳಲ್ಲಿ
ದೇಶದಾದ್ಯಂತ ಮಾರಾಟವಾಗುತ್ತಿದೆ. ದಿನವಹಿ ೨ಕೋಟಿ ರೂಪಾಯಿಗಳಿಗೂ
ಹೆಚ್ಚಿನ ಹಣಕಾಸು ವ್ಯವಹಾರವು ನಡೆಯುತ್ತಿದ್ದು ಎಳನೀರು
ಮಾರುಕಟ್ಟೆಯು ರೈತರ ಜೀವನ ಶೈಲಿಯನ್ನೇ ಬದಲಿಸಿದೆ.
ಕೆ.ಆರ್.ಪೇಟೆ ತಾಲೂಕಿನ ಹವಾಮಾನವು ತೆಂಗು ಬೇಸಾಯಕ್ಕೆ ಹೇಳಿ
ಮಾಡಿಸಿದಂತಿರುವುದರಿಂದ ತಾಲೂಕಿನ ಫಲವತ್ತಾದ ಒಣಭೂಮಿ ನೆಲದಲ್ಲಿ
ಬೆಳೆಯುತ್ತಿರುವ ಎಳನೀರು ಅತ್ಯುತ್ತಮವಾದ ರುಚಿ ಹಾಗೂ ಶ್ರೇಷ್ಠ ಗುಣಮಟ್ಟದಿಂದ ಕೂಡಿರುವುದರಿಂದ ದೇಶಾಧ್ಯಂತ ಬೇಡಿಕೆ ಹೊಂದಿದೆ.
ಬರಗಾಲದ ಇಂದಿನ ಸಂಕಷ್ಠ ದಿನಗಳಲ್ಲಿ ಕೆ.ಆರ್.ಪೇಟೆ ತಾಲೂಕಿನ ರೈತರು ಹೈನುಗಾರಿಕೆಯ ಜೊತೆಗೆ ಭತ್ತ, ಬಾಳೆ, ಅಡಿಕೆ ಬೇಸಾಯವನ್ನು ಕಷ್ಟಪಟ್ಟು ಮಾಡುತ್ತಾ ತೆಂಗು ಬೇಸಾಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಎಳನೀರು ವ್ಯಾಪಾರವು ಸಂಕಷ್ಠದ ಇಂದಿನ ದಿನ ಮಾನದಲ್ಲಿ ರೈತರಿಗೆ ಪ್ರಮುಖವಾಗಿ ಆಸರೆಯಾಗಿದೆ ಯಲ್ಲದೇ ರೈತರ ಆರ್ಥಿಕ ಸ್ವಾವಲಂಭನೆಯ ಜೊತೆಗೆ ನೆಮ್ಮದಿಯ ಜೀವನ ನಡೆಸಲು ಕಾರಣವಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ಈ ಹಿಂದೆ ಎಳನೀರು ವ್ಯಾಪಾರದಲ್ಲಿ ಸಾಧನೆ ಮಾಡಿ ಮುಂಚೂಣಿ ಯಲ್ಲಿತ್ತು. ಆದರೆ ಇಂದು ಮದ್ದೂರು ಎಳನೀರು ಮಾರುಕಟ್ಟೆಯನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿರುವ ಕೆ.ಆರ್.ಪೇಟೆಯ ಎಳನೀರು ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಭಾರೀ
ಬೇಡಿಕೆ ಹೊಂದಿದೆ. ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು, ಮಂಗಳೂರು ಸೇರಿದಂತೆ ಮುಂಬೈ, ಪೂನಾ, ಕಲ್ಕತ್ತಾ,ಚೆನ್ನೈ,ವಿಶಾಖಪಟ್ಟಣ, ಕೊಯಮತ್ತೂರು, ಕೇರಳ, ಒರಿಸ್ಸಾ, ಗ್ವಾಲಿಯರ್,
ಆಗ್ರಾ ಮಾರುಕಟ್ಟೆಯಲ್ಲಿ ಕೆ.ಆರ್.ಪೇಟೆಯ ಎಳನೀರು ಭಾರೀ ಬೇಡಿಕೆಯನ್ನು ಹೊಂದಿದೆ. ೩೦ರೂನಂತೆ ರೈತರಿಂದ ಎಳನೀರು ಖರೀದಿಸಿ ೩೫ ರೂಗಳಿಗೆ ಮಧ್ಯವರ್ತಿಗಳು ವರ್ತಕರಿಗೆ ಮಾರಾಟ ಮಾಡಿದರೆ ವರ್ತಕರು ೫೦ರೂಗಳಿಂದ ೬೦ರೂಗಳ ವರೆಗೆ ಎಳನೀರನ್ನು ಮಾರಾಟ ಮಾಡುತ್ತಿದ್ದಾರೆ. ಬರಗಾಲದ ಸಂಕಷ್ಠದ ಇಂದಿನ ದಿನಮಾನದಲ್ಲಿ ಎಳನೀರು
ವ್ಯಾಪಾರವು ರೈತರಿಗೆ ನೆರವಿಗೆ ಬಂದಿದ್ದು ಆರ್ಥಿಕ ಸ್ವಾವಲಂಭನೆಗೆ
ದಾರಿದೀಪವಾಗಿದೆ. ತೆಂಗು ಬೆಳೆಗೆ ಕಂಟಕವಾಗಿದ್ದ ನುಸಿಪೀಡೆ ಹಾಗೂ
ಗರಿತಿನ್ನುವ ಗೊಣ್ಣೆಹುಳು, ಕೆಂಪುಮೂತಿ ಹುಳುವಿನ ಕಾಟವು ಪ್ರಸ್ತುತ ಕಡಿಮೆ ಯಾಗಿರುವುದರಿಂದ ತೆಂಗಿನ ಬಂಫರ್ ಫಸಲು ರೈತರ
ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ.
ಕೆ.ಆರ್.ಪೇಟೆ ಎಪಿಎಂಸಿ ಮಾರುಕಟ್ಟೆಯು ಅವ್ಯವಸ್ಥೆಯ ತಾಣವಾಗಿದ್ದು
ಮಾರುಕಟ್ಟೆಯ ಆವರಣವು ಗಬ್ಬೆದ್ದು ನಾರುತ್ತಿದೆ. ಮಾರುಕಟ್ಟೆಗೆ ಕೃಷಿ ಹುಟ್ಟುವಳಿಗಳು, ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಬರುವ ರೈತರು ವಿಶ್ರಾಂತಿ ಪಡೆಯಲು ರೈತಭವನವಿಲ್ಲ, ಗಬ್ಬೆದ್ದು ನಾರುತ್ತಿರುವ ಶೌಚಾಲಯದ ಸಮಸ್ಯೆಯನ್ನು ಸರಿಪಡಿಸಿಲ್ಲ, ಎಳನೀರು ಮಾರಾಟ ಹಾಗೂ ಲೋಡಿಂಗ್‌ಗೆ ಅನುಕೂಲ ವಾಗುವಂತೆ ಸೂಕ್ತವಾದ ಮಾರುಕಟ್ಟೆ ಯಾರ್ಡ್ ಮತ್ತು ಶೆಡ್ ಇಲ್ಲದಿರುವುದರಿಂದ ಭಾರಿ ಬಿಸಿಲಿನ ಬೇಗೆಯ ನಡುವೆ ಅಲ್ಲಲ್ಲಿ ಬೆಳೆದಿರುವ ಮರಗಳ ನೆರಳಿನಲ್ಲಿ ವರ್ತಕರು ಲಾರಿಗಳನ್ನು ನಿಲ್ಲಿಸಿಕೊಂಡು ಎಪಿಎಂಸಿ ಆಡಳಿತ ಮಂಡಳಿಗೆ ಹಿಡಿ ಶಾಫವನ್ನು ಹಾಕಿಕೊಂಡು ಲೋಡಿಂಗ್ ಮಾಡಿಸುತ್ತಿರುವುದು ಸರ್ವೇ
ಸಾಮಾನ್ಯವಾಗಿದೆ.
ಸಾರ್ವಜನಿಕ ಅಭಿಪ್ರಾಯಗಳು :
ಎಳನೀರು ಮಾರುಕಟ್ಟೆ ಸೇರಿದಂತೆ ಎಪಿಎಂಸಿ ಆವರಣದಲ್ಲಿ ಶುದ್ಧವಾದ
ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು ಹೈಟೆಕ್
ಶೌಚಾಲಯ ಹಾಗೂ ಸ್ನಾನ ಕೊಠಡಿಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕು. ಶಶಿಗೌಡ, ಎಳನೀರು ವರ್ತಕರು .
ಕೆ.ಆರ್.ಪೇಟೆ ಎಳನೀರು ಮಾರುಕಟ್ಟೆಯಲ್ಲಿ ಪ್ರತಿನಿತ್ಯವೂ
ಕೋಟಿಗಟ್ಟಲೆ ವ್ಯಾಪಾರ ವಹಿವಾಟು ನಡೆಯುತ್ತಿದ್ದು ಎಪಿಎಂಸಿ ಸಂಸ್ಥೆಗೆ
ಲಕ್ಷಾಂತರ ರೂಪಾಯಿ ಆದಾಯ ಸಂಗ್ರಹವಾಗುತ್ತಿದ್ದರೂ ರೈತರು,
ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಅಧಿಕಾರಿಗಳುಒದಗಿಸಿಕೊಟ್ಟಿಲ್ಲ. ರೈತರ ಗೋಳು ಅಧಿಕಾರಿಗಳ ಕಿವಿಗೆ ಮುಟ್ಟಿಲ್ಲ. ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಶಾಸಕರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಯೂ ಮುಂದಾಗಿಲ್ಲ.
ಪುಟ್ಟಣ್ಣ, ಎಳನೀರು ವ್ಯಾಪಾರಿ .
ಕೆ.ಆರ್.ಪೇಟೆ ಎಪಿಎಂಸಿ’ಯಲ್ಲಿ ಪ್ರಸ್ತುತ ಆಡಳಿತ ಮಂಡಳಿಯಿಲ್ಲ,
ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ನನಗೆ ರೈತರು ಹಾಗೂ ವರ್ತಕರ ಸಮಸ್ಯೆಗಳು ಗಮನಕ್ಕೆ ಬಂದಿವೆ. ಪ್ರತಿದಿನವೂ
ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತಿದ್ದರೂ
ರೈತರಿಗೆ ಯಾವುದೇ ಮೋಸವಾಗದಂತೆ ಎಚ್ಚರ ವಹಿಸಲಾಗಿದೆ. ಎಪಿಎಂಸಿಗೆ
ಕಾಯಕಲ್ಪ ನೀಡುವ ನಿಟ್ಟಿನಲ್ಲಿ ನಾನು ಬದ್ಧನಾಗಿದ್ದು ಸರ್ಕಾರಕ್ಕೆ ಸಂಪೂರ್ಣ ವರದಿ ನೀಡಿದ್ದೇನೆ. ನಿಸರ್ಗಪ್ರಿಯ, ತಹಶೀಲ್ದಾರ್ .
