ವಿಶೇಷ ವರದಿ:ಮಾಕವಳ್ಳಿ ಕುಮಾರಸ್ವಾಮಿ
ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣ ಮಳೆಗಾಲದಲ್ಲಿ ಕೆರೆಯಾಗಿ ಪರಿವರ್ತನೆಯಾಗುತ್ತಿದೆ.ಪಟ್ಟಣದಲ್ಲಿ ಸ್ವಲ್ಪ ಬಿರುಸಾದ ಮಳೆ ಬಂದರೆ ಸಾಕು ಈ ಬಸ್ಸು ನಿಲ್ದಾಣ
ನೀರು ನಿಂತು ಕೆರೆಯಂತಾಗುತ್ತದೆ .
ಈ ಮೊದಲು ಈ ಬಸ್ಸು ನಿಲ್ದಾಣದ ಸ್ಥಳ ಚನ್ನಪ್ಪನ ಕೆರೆ ಆಗಿತ್ತು .ಅದನ್ನು ಹಲವು ವರ್ಷಗಳ ಹಿಂದೆ ನಿಲ್ದಾಣವಾಗಿ ಪರಿವರ್ತನೆ ಮಾಡಲಾಗಿದೆ . ನೀರಳ್ಳಿಕೆರೆ-ಕೆ.ಆರ್.ಪೇಟೆಯ ದೇವಿರಮ್ಮಣ್ಣಿ ಕೆರೆ ನಡುವೆ ಈ ಕೆರೆ ಇತ್ತು . ಈ ಕೆರೆಗೆ ನೀರಳ್ಳಿಕೆರೆಯು ಕೋಡಿ ಬಿದ್ದ ನಂತರ ನೀರು ಒಂದು ದೊಡ್ಡದಾದ ಹಳ್ಳದ ಮುಖಾಂತರ ಈ ಕೆರೆಗೆ ಬಂದು ಇದು ತುಂಬಿದ ನಂತರ ಕೆ.ಆರ್.ಪೇಟೆ ದೇವಿರಮ್ಮಣ್ಣಿ ಕೆರೆಗೆ ದೊಡ್ಡದಾದ ಹಳ್ಳದ ಮುಖಾಂತರ ಇದರ ನೀರು ತುಂಬುತ್ತಿತ್ತು.
ಈ ಹಳ್ಳದ ಎರಡೂ ಬದಿ 33 ಅಡಿ “ಬ ಖರಾಬು” ( ಇದನ್ನು ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಅನ್ಯಕ್ರಾಂತ ಮಾಡುವಂತಿಲ್ಲ ) ಜಾಗ ಇದೆ . ಇತ್ತೀಚಿನ ದಿನಗಳಲ್ಲಿ ಈ ಚನ್ನಪ್ಪನ ಕೆರೆ ಕೆ.ಎಸ್.ಆರ್.ಟಿ.ಸಿ . ಬಸ್ ನಿಲ್ದಾಣವಾದ ನಂತರ ಇದಕ್ಕೆ ಒಳಹರಿವು ಮತ್ತು ಹೊರ ಹರಿವಿನ ಮಳೆಗಾಲುವೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಂಡಿವೆ .
ಈ ಕಾರಣದಿಂದ ಈ ಬಸ್ ನಿಲ್ದಾಣಕ್ಕೆ ಬರುವ ನೀರು ಹೊರ ಹೋಗಲು ಸೂಕ್ತ ಹೊರ ಹರಿವಿನ ಜಾಗ ಇಲ್ಲದೆ ಬಸ್ ನಿಲ್ದಾಣ ಆಗಾಗ ತನ್ನ ಮೂಲ ಸ್ವರೂಪವಾದ ಕೆರೆ ಆಗಿ ಪರಿವರ್ತನೆ ಆಗುತ್ತಿರುತ್ತದೆ . ಇದರಿಂದ ಮಳೆ ಬಿದ್ದ ತಕ್ಷಣ ಪ್ರಯಾಣಿಕರು ಹೆಣಗಾಡಬೇಕಾಗಿದೆ .
ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ ಎಂದು ಸಾರ್ವಜನಿಕರಿಗೆ ಪ್ರಶ್ನೆ ಕಾಡುತ್ತಿದೆ . ಇದಕ್ಕೆ ಉತ್ತರ ಇದೆ. ಸಾರಿಗೆ ಕಂದಾಯ ಇಲಾಖೆಯಿಂದ ನೀರಳ್ಳಿ ಕೆರೆ ಯಿಂದ ದೇವಿರಮ್ಮಣ್ಣಿ ಕೆರೆ ನಡುವೆ ಇರುವ ಹಳ್ಳ ಮತ್ತು ಅದರ ಆಸುಪಾಸಿನ ಹಳ್ಳದ"ಬಿ" ಖರಾಬಿನ ಹದುಬಸ್ತಿಗೆ ತಹಸೀಲ್ದಾರ್ ಕಛೇರಿಯಿಂದ ಸಾರ್ವಜನಿಕರ ಸಮ್ಮುಖದಲ್ಲಿ ಈ ಹಳ್ಳದ ಸರ್ವೆ ಮಾಡಿಸಿ ಒತ್ತುವರಿ ಬಿಡಿಸಿದರೆ ಈ ಸಮಸ್ಯೆಯು ಬಹುತೇಕ ಬಗೆಹರಿದಂತೆಯೆ ಸರಿ. ನಂತರ ನೀರಳ್ಳಿ ಕೆರೆಯಿಂದ ಹಳ್ಳದ ಮೂಲಕ ಬರುವ ನೀರನ್ನು ಆಧುನಿಕ ತಂತ್ರಜ್ಞಾನ ಮೂಲಕ ದೇವಿರಮ್ಮಣ್ಣಿ ಕೆರೆಗೆ ಹೋಗುವ ಹಳ್ಳಕ್ಕೆ ದಾಟಿಸಿದರೆ ಉಳಿಕೆ ಸಮಸ್ಯೆಯೂ ಪರಿಹಾರವಾಗುತ್ತದೆ.
ನೀರಳ್ಳಿಕೆರೆ -ದೇವಿರಮ್ಮಣ್ಣಿ ಕೆರೆ ನಡುವೆ ಇರುವ ಹಳ್ಳ ಮತ್ತು ಅದರ ಏರಿಗಳನ್ನು ತಾಲ್ಲೂಕು ಆಡಳಿತ ಒತ್ತುವರಿ ತೆರವುಗೊಳಿಸಿದರೆ ಕೆ.ಎಸ್.ಆರ್.ಟಿ.ಸಿ. ನಿಲ್ದಾಣ ಮತ್ತೊಮ್ಮೆ ಚನ್ನಪ್ಪನ ಕೆರೆ ಆಗಿ ಪರಿವರ್ತನೆ ಆಗುವುದು ತಪ್ಪುತ್ತದೆ.ಈ ದಿಕ್ಕಿನಲ್ಲಿ ಶಾಸಕ ಎಚ್ ಟಿ ಮಂಜುನಾಥ್ ಕಾರ್ಯೊನ್ಮುಖರಾಗುವರೆ ಇಲ್ಲವೆ ಬಸ್ ನಿಲ್ದಾಣವನ್ನು ಮಳೆಗಾಲದಲ್ಲಿ ತಾತ್ಕಾಲಿಕ ಕೆರೆಯನ್ನಾಗಿ ಘೋಷಿಸುವರೆ ಕಾದು ನೋಡೋಣಾ