
ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಲು ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿರುವ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಮಾತನಾಡಿರುವ ಆಡಿಯೋ ವೈರಲ್ ಆಗಿ ಒಂದು ವಾರ ಕಳೆಯುತ್ತಿದ್ದರೂ ಆರೋಪ ಮಾಡಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳದೇ ಇರುವ ಪೊಲೀಸರ ವಿರುದ್ಧ ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ತಾ.ಪಂ.ಮಾಜಿ ಸದಸ್ಯ ಮಾಧವಪ್ರಸಾದ್, ಚಿಕ್ಕಗಾಡಿಗನಹಳ್ಳಿ ರಾಜಯ್ಯ, ಅಗಸರಹಳ್ಳಿ ಗೋವಿಂದರಾಜು ಮತ್ತಿತರರು, ಜೆಡಿಎಸ್ ಅಭ್ಯರ್ಥಿಯಾಗಿದ್ದ ಹೆಚ್ ಟಿ ಮಂಜು ಪರವಾಗಿ ಕೆಲಸ ಮಾಡಲು ಹಣ ಪಡೆದಿದ್ದಾರೆ ಎಂದು ಮಾವಿನಕಟ್ಟೆಕೊಪ್ಪಲು ಚೇತನ್ ಅವರೊಂದಿಗೆ ಮಾತನಾಡುವ ವೇಳೆ ಡಾಲು ರವಿ ಅವರು ಗಂಭೀರ ಆರೋಪ ಮಾಡಿದ್ದು, ಇದರ ವಿಡಿಯೋ ಮತ್ತು ಆಡಿಯೋ ತುಣುಕು ವೈರಲ್ ಆಗಿದ್ದು ಕಾಂಗ್ರೆಸ್ ಮುಖಂಡರ ತೇಜೋವಧೆ ಮಾಡಲಾಗಿದೆ ಎಂದು ದೂರಿದರು.
ಡಾಲು ರವಿ ಆಡಿಯೋ ಧ್ವನಿ ನನ್ನದಲ್ಲ, ನನಗೂ
ಆಡಿಯೋ ಸಂಬಂಧವಿಲ್ಲ ಎಂದು ಮಾತನಾಡಿದ್ದಾರೆ.
ಆದ್ದರಿಂದ ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ
ನಡೆಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು.
ಕಾಂಗ್ರೆಸ್ ನಾಯಕರ ತೇಜೋವಧೆ ಮಾಡಲು
ಹರಿಯ ಬಿಟ್ಟಿರುವ ಆಡಿಯೋ ಮೂಲವನ್ನು ಪತ್ತೆ
ಮಾಡಿ ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮವನ್ನು
ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾ.ಪಂ., ಜಿ.ಪಂ.ಚುನಾವಣೆ ಸಮೀಪಿಸುತ್ತಿದೆ ಈ ಆಡಿಯೋ ಪ್ರಕರಣದಲ್ಲಿ ನಮ್ಮ ಕಾಂಗ್ರೆಸ್ ನಾಯಕರುಗಳನ್ನು ದೋಷಮುಕ್ತಗೊಳಿಸದೇ ಇದ್ದರೆ ಜನರ ಮುಂದೆ ಮತ ಕೇಳಲು ಹೋಗಲು ಆಗುವುದಿಲ್ಲ. ಹಾಗಾಗಿ ಪೋಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋ ಮೂಲವನ್ನು ಪತ್ತೆಮಾಡಿ ಆರೋಪ ಮಾಡಿರುವ ವ್ಯಕ್ತಿಯ ವಿರುದ್ಧ ತುರ್ತಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು