ಮಂಡ್ಯ : ಲೈಂಗಿಕ ಹಗರಣದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಸಹಾಯ ಕೋರಿ ಬಂದ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡಿರುವುದನ್ನು ಖಂಡಿಸಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ‘ಅಬಲೆಯರನ್ನು ಗೌರವಿಸೋಣ-ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ’ ಎಂಬ ಘೋಷಣೆಯಡಿ ಹಾಸನ ಚಲೋ ನಡೆಸುವುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಜಿಎಂ ರಮೇಶ್ ಗೌಡ ತಿಳಿಸಿದರು.
ಸಹಾಯ ಕೋರಿ ಬಂದ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡಿರುವುದು ವಿಷಾದನೀಯ ವಿಚಾರವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ
ಕಿಡಿಕಾರಿದರು.
ರಾಜ್ಯ ಸರ್ಕಾರ ಪೆನ್ ಡ್ರೈವ್ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕು. ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಾದರೆ ,ಪ್ರಜ್ವಲ್ ರೇವಣ್ಣ ಕುಟುಂಬದ ಕೃಪಾಕಟಾಕ್ಷದಿಂದ ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆ ಕುಟುಂಬದ ರುಣಧಲ್ಲಿದ್ದೇವೆ ಎಂದು ಭಾವಿಸಿರುವ ಅಧಿಕಾರಿಗಳನ್ನು ಈ ಪ್ರಕರಣದಿಂದ ದೂರವಿಡಬೇಕು. ಬೇರೆ ಜಿಲ್ಲೆಗಳಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು .
ಈ ಘಟನೆಯನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮೇ.13 ರಂದು ‘ಆಬಲೆಯರನ್ನು ಗೌರವಿಸೋಣ ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ’ ಎನ್ನುವ ಘೋಷಣೆಯಡಿ ಹಾಸನ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ,ರಾಜ್ಯದ ಜನತೆ ಬೆಂಬಲಿಸಬೇಕೆಂದು ಮನವಿ ಮಾಡಿದರು .
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್, ಸಂಘಟನಾ ಕಾರ್ಯದರ್ಶಿಗಳಾದ ಶಶಿಧರ್ ,ಯೋಗೇಶ್ ,ರವೀಂದ್ರ, ಜಗದೀಶ್ ,ವಿಶ್ವನಾಥ್ ಉಪಸ್ಥಿತರಿದ್ದರು.