ಮಂಡ್ಯ: ಕಾಂಗ್ರೆಸ್ ಸೋಲಿಸಲು ನಾಯಕರೆ ಸಾಕು
ಮಂಡ್ಯ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಮತದಾರರುಅಥವಾ ವಿರೋಧ ಪಕ್ಷಗಳು ಬೇಕಿಲ್ಲ ಅದರ ನಾಯಕರೇ ಸಾಕು ಎಂಬ ಮಾತೊಂದು ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಚಾಲ್ತಿಯಲ್ಲಿದೆ.ಈಗ ಅಂಥದ್ದೆ ಬೆಳವಣಿಗೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಹಂಚಿಕೆ ಕಾರಣವಾಗುತ್ತಿದೆ.ಲಾಗಾಯ್ತಿನಿಂದಲೂ ಮಂಡ್ಯ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು.ಕಾಲನಂತರ ಪಕ್ಷದೊಳಗಿನ ಒಳಜಗಳ ಇಲ್ಲಿ ಜನತಾಪರಿವಾರ ಬಲವಾಗಿ ನೆಲೆಯೂರಲು ಕಾರಣವಾಯಿತು.ಈಗ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಗಣಿಗ ರವಿಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆಯಾಗಿರುವುದು ಹಲವು ಅಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದು ಪರಾಜಿತರಾಗಿದ್ದ ಗಣಿಗ ರವಿಕುಮಾರ್ ನಂತರ ನಡೆದ ಗ್ರಾಪಂ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದರು.ಕೋವಿಡ್ ಕಾಲದ ಪುಡ್ ಕಿಟ್ ಹಂಚಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಉಳಿಸಿದ್ದರು.ನಂತರದಲ್ಲೂ ಗ್ರಾಮಗಳಲ್ಲಿ ಸಣ್ಣಪುಟ್ಟ ಹಣಕಾಸು ಸಹಾಯಗಳ ಮೂಲಕ ತಮಗೆ ತೋಚಿದ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಾ ಪಕ್ಷವನ್ನು ಜೀವಂತವಾಗಿಟ್ಟಿದ್ದರು.ಸಾಲದ್ದಕ್ಕೆ ಕಳೆದ ಬಾರಿಯ ಸೋಲು ಮತದಾರರಲ್ಲಿ ಅನುಕಂಪಕ್ಕೆ ಅವಕಾಶವನ್ನು ಒದಗಿಸಿತ್ತು.ಇದನ್ನೆಲ್ಲ ಅಳೆದು ಸುರಿದು ಹದಿನಾರು ಮಂದಿ ಅಕಾಂಕ್ಷಿಗಳ ಪೈಕಿ ಗಣಿಗ ರವಿಯನ್ನು ಹೈಕಮಾಂಡ್ ಅಭ್ಯರ್ಥಿಯಾಗಿ ಘೋಷಿಸಿತು.ಈ ಎಲ್ಲ ಕಷ್ಟಕಾಲದಲ್ಲಿ ಯಾರೆಂದರೆ ಯಾರು ಸಹ ಪಕ್ಷದ ಪ್ರಯತ್ನಗಳಿಗೆ ಹೆಗಲು ಕೊಡದ ನಾಯಕರು ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾನೂ ಸಹ ಎಮ್ಮೆಲ್ಲೆ ಕ್ಯಾಂಡಿಡೇಟು ಅಂತಾ ಜುಬ್ಬಾ ಹೊಲಿಸಿಕೊಳ್ಳತೊಡಗಿದರು.

ಅಕಾಂಕ್ಷಿಗಳ ಪೈಕಿ ಬೆರಳೆಣಿಕೆ ಮಂದಿ ಬಿಟ್ಟರೆ ಬಹುತೇಕರು ರಾಜಕೀಯವಾಗಿ ಕಾಲಬಾಹಿರರಾಗಿ ಬಹಳ ದಿನಗಳೇ ಕಳೆದುಹೋಗಿವೆ.ಮಂಡ್ಯ ಕಾಂಗ್ರೇಸ್ಸಿನಲ್ಲಿ ಕಾಲೆಳೆದು ಸೋಲಿಸುವ ಪರಂಪರೆಗೆ ಬಹುದೊಡ್ಡ ಇತಿಹಾಸವೆ ಇದೆ. ಮೊದಲೆಲ್ಲ ಮಂಡ್ಯದಲ್ಲಿ ರಾಜಕಾರಣ ಎಂದರೆ ಫಸ್ಟ್ ಕ್ರಾಸ್ ಸೆಕೆಂಡ್ ಕ್ರಾಸ್ ರಾಜಕಾರಣ ಎಂಬ ಮಾತಿತ್ತು.ಮೊದಲ ಕ್ರಾಸಿನಲ್ಲಿ ಮಾಜಿ ಸಂಸದ ಎಂ.ಕೆ. ಶಿವನಂಜಪ್ಪ ಕುಟುಂಬ ಎರಡನೇ ಕ್ರಾಸಿನಲ್ಲಿ ಜಿ.ದೇವಯ್ಯ ಕುಟುಂಬದ ರಾಜಕಾರಣ ದಿವಿನಾಗಿ ಸಾಗಿತ್ತು ಅದೇ ಕಾರಣಕ್ಕೆ ಫಸ್ಟ್ ಕ್ರಾಸ್ ಸೆಕೆಂಡ್ ಕ್ರಾಸ್ ರಾಜಕಾರಣ ಎನ್ನಲಾಗುತಿತ್ತು.1985ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾದತ್ ಅಲೀಖಾನರಿಗೆ ಟಿಕೇಟ್ ಕೊಟ್ಟಾಗ ಕಾಂಗ್ರೆಸ್ ನ ಒಂದು ಪ್ರಮುಖ ಬಣ ಜನತಾಪಕ್ಷದ ದೊಡ್ಡಬೋರೆಗೌಡರನ್ನು ಗೆಲ್ಲುವಂತೆ ನೋಡಿಕೊಂಡು ಸಾದತ್ ಅಲಿ ಖಾನ್ ಮಕಾಡೆ ಮಲಗುವಂತೆ ಮಾಡಿದರು.ಕಡೇಗೆ ಮಂಡ್ಯದಿಂದ ಓಡಿಹೋದ ಸಾದತ್ ಅಲೀ ಖಾನ್ ಚನ್ನಪಟ್ಟಣದಲ್ಲಿ ಎಮ್ಮೆಲ್ಲೆಯಾದುದು ಈಗ ಮರೆತುಹೋದ ಕತೆ.ನಂತರದಲ್ಲಿ ಮಾಜಿ ಸಚಿವ ಎಸ್ ಡಿ.ಜಯರಾಂ ಅಕಾಲಿಕವಾಗಿ ಸಾವನ್ನಪ್ಪಿದಾಗ ನಡೆದ ಮಂಡ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂ.ಬಿ.ಶ್ರೀಕಾಂತ್ ಗೆ ಭಿ ಫಾರಂ ನೀಡಿದಾಗ ಕಾಂಗ್ರೆಸ್ ಪಕ್ಷದ ನಾಯಕರೆ ಬಹಿರಂಗವಾಗಿ ಜನತಾದಳಕ್ಕೆ ಬೆಂಬಲಿಸಿ ಶ್ರೀಕಾಂತ್ ಮುಗ್ಗರಿಸುವಂತೆ ನೋಡಿಕೊಂಡರು.ಆ ಚುನಾವಣೆಯಲ್ಲಿ ಜಯರಾಂ ಪತ್ನಿ ಪ್ರಭಾವತಿ ಜಯರಾಂ ಅನಾಯಾಸವಾಗಿ ಗೆದ್ದು ಬಂದರು.ಅದೇ ಉಪಚುನಾವಣೆಯಲ್ಲಿ ಹಾಲೀ ಶಾಸಕ ಎಂ.ಶ್ರೀನಿವಾಸ್ ಮೊದಲ ಬಾರಿ ರಾಮಕೃಷ್ಣ ಹೆಗಡೆಯವರ ಪಕ್ಷದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.ನಂತರದಲ್ಲಿ 2008ರಲ್ಲಿ ಕಾಂಗ್ರೆಸ್ ಪಕ್ಷ ಮಾಜಿ ಸಚಿವ ಎಂ.ಎಸ್ ಆತ್ಮನಂದಾ ಬದಲಿಗೆ ಎಚ್ ಬಿ ರಾಮುಗೆ ಮಣೆ ಹಾಕಿತು.ಆಗಲೂ ಸಹ ಮೂರನೇ ಸ್ಥಾನಕ್ಕೆ ಕುಸಿಯುವಂತೆ ನೋಡಿಕೊಳ್ಳಲಾಯಿತು.ಲೋಕಸಭಾ ಉಪಚುನಾವಣೆಯಲ್ಲಿ ದಳವನ್ನು ಮಣಿಸಿದ ಚಿತ್ರನಟಿ ರಮ್ಯರನ್ನು ಮುಂದಿನ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಹಿಮ್ಮೆಟ್ಟುವಂತೆ ಮಾಡಲು ಸ್ವತ ಅಂಬರೀಶ್ ಸಿಂಗಾಪುರದಿಂದ ಬಂದವರೆ ನೇರ ಪ್ರಚಾರಕಿಳಿದರು.ಹೀಗೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಸ್ವಪಕ್ಷೀಯರೆ ಕಾಂಗ್ರೆಸ್ ಪಕ್ಷವನ್ನು ನೆಲಕಚ್ಚಿಸಿದ ಶ್ರೀಮಂತ ಇತಿಹಾಸವಿದೆ.ಈಗ ಒಂದಿಷ್ಟು ಗೆಲ್ಲಲ್ಲು ಅವಕಾಶವಿರುವ ಮಂಡ್ಯ ಕ್ಷೇತ್ರದಲ್ಲಿ ಈ ಥರದೊಂದು ಪ್ರಯತ್ನ ಶುರುವಾಗಿದೆ.
ಅಷ್ಟಕ್ಕು ಈ ಬಂಡಾಯದ ಸದ್ದು ಮಾಡುತ್ತಿರುವವರ ಪೈಕಿ ಹಲವರು ಹಲವು ಪಕ್ಷ ಸುತ್ತಿ ಬಂದವರು.ಇದ್ದುದ್ದರಲ್ಲಿ ಮಾಜಿ ಸಚಿವ ಆತ್ಮನಂದಾ ಸರಿಯಾಗಿ ರಾಜಕಾರಣ ಮಾಡಿದ್ದರೆ ಮಂಡ್ಯ ಟಿಕೇಟ್ ಮಾತ್ರವಲ್ಲ ಹಳೇ ಮೈಸೂರಿನ ನಾಲ್ಕೈದು ಜಿಲ್ಲೆಗಳ ಟಿಕೇಟ್ ಹಂಚುವ ಮಟ್ಟಕ್ಕೆ ಅವರು ಬೆಳೆಯಬಹುದಿತ್ತು.ಆದರೆ ಈ ಅವಕಾಶವನ್ನು ಕೈ ಚೆಲ್ಲಿದ ಆತ್ಮಾನಂದಾರಿಗೆ 2008ರಲ್ಲೆ ಪಕ್ಷ ಟಿಕೇಟ್ ನಿರಾಕರಿಸಿದೆ.ಈಗ ನಿಡುಗಾಲದಲ್ಲಿ ಟಿಕೇಟ್ ಗೆ ಅರ್ಜಿ ಸಲ್ಲಿಸಿ ತಮ್ಮ ಹಿರಿತನಕ್ಕೆ ಧಕ್ಕೆ ತಂದುಕೊಂಡಿದ್ದಾರೆ.ಪಕ್ಷದ ಹೈಕಮಾಂಡ್ ಈಗ ನಿಷ್ಟುರವಾಗಿ ನಡೆದುಕೊಳ್ಳದಿದ್ದರೆ ಗೆಲ್ಲುವ ಕ್ಷೇತ್ರವೊಂದು ಅನಾಯಾಸವಾಗಿ ಕೈ ತಪ್ಪಲಿದೆ