Sunday, July 14, 2024
spot_img

ಮಂಡ್ಯದಲ್ಲಿ ಯಾರು ಗೆಲ್ತಾರೆ ?

ಯಾರು ಗೆಲ್ತಾರೆ ಮಂಡ್ಯದಲ್ಲಿ?

ಮಂಡ್ಯ ಅಂದ್ರೆ ಇಂಡ್ಯಾ ಅಂತಾರೆ ಇಲ್ಲಿನ ಜನ.ಈ ಮಾತು ಪ್ರಾಸಬದ್ದವಾಗಿದ್ದರು ಕರ್ನಾಟಕದ ರಾಜಕಾರಣವನ್ನು ಮಂಡ್ಯದ ರಾಜಕಾರಣ ಹಲವಾರು ಬಾರಿ ಪ್ರಭಾವಿಸಿದ್ದು ಉಂಟು.ಕಳೆದ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಹೊರೆ ಹೊತ್ತ ಮಹಿಳೆಯನ್ನು ಬೆಂಬಲಿಸಿದ ಮಂಡ್ಯ ಜಿಲ್ಲೆಯಲ್ಲಿ ಕನ್ನಡನಾಡಿನ ಉಳಿದ ಜಿಲ್ಲೆಗಳಂತೆ ಇಲ್ಲಿಯು ಈಗ ಸೋಲು ಗೆಲುವಿನ ಲೆಕ್ಕಚಾರ ಹಳ್ಳೀ ಕಟ್ಟೆಯಿಂದ ಹರಿ ಪ್ರಿಯಾ ಹೋಟೆಲ್ ತನಕ ನಡೆದಿದೆ.ಕ್ರಿಕೆಟ್ ನೋಡಲು ಹೋಟೆಲ್ ಗಳಲ್ಲಿ ರೂಂ ಬುಕ್ ಮಾಡಿಕೊಂಡು ಎಂಜಾಯ್ ಮಾಡುವವರನ್ನು ನೋಡಿದ್ದೀವಿ ಅಲ್ವೇ.

ಇಲ್ಲಿ ಚುನಾವಣಾ ಫಲಿತಾಂಶ ಗುಂಪಾಗಿ ಸವಿಯಲು ಮಂಡ್ಯದಲ್ಲಿ ಹೋಟೆಲ್ ರೂಂಗಳು ಬುಕ್ ಆಗಿವೆ.ಅದಿರಲಿ ಅಷ್ಟಕ್ಕು ಮಂಡ್ಯದಲ್ಲಿ ಈ ಸಾರಿ ಯಾರು ಗೆಲ್ತಾರೆ ಅನ್ನೋ ಪ್ರಶ್ನೆಗೆ ಯಾರ ಬಳಿಯೂ ನಿಖರ ಉತ್ತರವಿಲ್ಲ.ಜನರ ಅಭಿಪ್ರಾಯಗಳನ್ನು ಆಧರಿಸಿ ಅಯಾ ಪಕ್ಷದ ಕಾರ್ಯಕರ್ತರು ನಾಯಕರು ತಮ್ಮದೆ ಪಕ್ಷ ಗೆಲ್ಲುತ್ತದೆಂದು ಹೇಳುತ್ತಾರೆ ವಿನಾ ಈ ಹೇಳಿಕೆಗಳಿಗೆ ಯಾವುದೆ ಗಟ್ಟಿ ಆಧಾರ ಒದಗಿಸುವುದಿಲ್ಲ.೨೦೧೮ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ.ರೈತರ ಸಾಲ ಮನ್ನಾ ಮಾಡುತ್ತಾರೆಂಬುದು ಜತೆಗೆ ಒಕ್ಕಲಿಗರ ಅಧಿನಾಯಕ ದೇವೆಗೌಡರ ಕುರಿತು ಸಿದ್ದರಾಮಯ್ಯರ ಏಕವಚನದ ಟೀಕೆಗೆ ಒಕ್ಕಲಿಗರ ಬಾಹುಳ್ಯದ ಮಂಡ್ಯದ ಮತದಾರರನ್ನು ಮತಗಟ್ಟೆಗೆ ಕೈ ಹಿಡಿದು ಜಗ್ಗಿತ್ತು.

ಕುಮಾರಸ್ವಾಮಿಯ ಅಲೆ ಯಾವ ಪರಿ ಇತ್ತೆಂದರೆ ವಿರೋಧಿಗಳು ಮತ್ತೆ ತಲೆ ಎತ್ತದಂತೆ ಮತದಾರರು ಗುಡಿಸಿಹಾಕಿದ್ದರು.ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಭರ್ತಿ 50 ಸಾವಿರ ಮತಗಳ ಅಂತರದಲ್ಲಿ ನೆಲ ಕಚ್ಚಿದ್ದರು.ಸಿದ್ದ ರಾಮಯ್ಯ ಸರಕಾರದಲ್ಲಿ ಹಳೇ ಮೈಸೂರಿನಲ್ಲಿ ಮಿರಿಮಿರಿ ಮಿಂಚಿದ್ದ ಮಳವಳ್ಳಿ ನರೇಂದ್ರ ಸ್ವಾಮಿ ಜ್ಯಾದಳದ ಅಂದಾನಿ ಎದುರು ಮಕಾಡೆ ಮಲಗಿಸಿದ್ದರು.ಮತ್ತೇ ಕಾಂಗ್ರೇಸಿಗರು ಮಂಡ್ಯದಲ್ಲಿ ಚುನಾವಣೆಗೆ ನಿಲ್ಲಬೇಕಾ ಎಂದು ಯೋಚಿಸುವಷ್ಟು ಮಟ್ಟಿಗಿತ್ತು ಅವತ್ತಿನ ಫಲಿತಾಂಶ. ಪರಿಣಾಮವಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಹ ಆದರು.ಈಗ ಕಾಲಚಕ್ರ ಒಂದು ಸುತ್ತು‌ಹಾಕಿದೆ.

ಏಳಕ್ಕೆ ಏಳು ಸ್ಥಾನ ಕೊಟ್ಟ ಅದೇ ಮಂಡ್ಯದ ಮತದಾರರು ಒಂದು ರಾಜ್ಯ ಸರಕಾರ ಎಂಟು ಜ್ಯಾದಳ ಶಾಸಕರು ಇಬ್ಬರು ಸಚಿವರು ₹೧೫೦ಕೋಟಿ ಸುರಿದರು ಮುಖ್ಯಮಂತ್ರಿಯ ಮಗ ಎಂಬುದನ್ನು ನೋಡದೆ ಒಂದು ಕಾಲು ಲಕ್ಷ ಚಿಲ್ಲರೆ ಮತಗಳ ಅಂತರದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಮನೆಗಟ್ಡಿದರು.ಸೋತ ಆರಂಭದಲ್ಲಿ ಮಂಡ್ಯದಲ್ಲಿ ಮನೆ ಮಾಡ್ತಿನಿ ಇಲ್ಲೆ ಉಳಿದು ಸೇವೆ ಮಾಡ್ತಿನಿ ಎಂದ ನಿಖಿಲ್ ಮಂಡ್ಯದವರ ಸಹವಾಸವೇ ಬೇಡ ಎಂಬಂತೆ ರಾಮನಗರ ಸೇರಿಕೊಂಡರು.

ಸಂಸದೆ ಸುಮಲತಾ ಬಿಜೆಪಿಗೆ ಜೈ ಎಂದಿದ್ದಾರೆ.ಸುಮಲತಾ ಸೇರ್ಪಡೆಯಿಂದ ಬಿಜೆಪಿಗೆ ಜಿಲ್ಲೆಯಲ್ಲಿ ದೊಡ್ಡ ರಾಜಕೀಯ ಶಕ್ತಿ ಬರದಿದ್ದರೂ ಜ್ಯಾದಳದ ವಿರುದ್ದ ಮಾತನಾಡಲು ಒಬ್ಬ ಮೀಡಿಯಾ ಅಕರ್ಷಣೆಯ ನಾಯಕಿಯೊಬ್ಬಳು ಬಿಜೆಪಿಗೆ ಸಿಕ್ಕಾಂತಾಗಿದೆ.ನಿಖಿಲ್ ಪತನದೊಂದಿಗೆ ಕುಮಾರಸ್ವಾಮಿ ಸರಕಾರವೂ ಪತನವಾಯಿತು.ನಂತರದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಾರಮ್ಯ ಸಾಧಿಸಿದೆ.ಇಂತಹ ವೇಳೆಯಲ್ಲಿ ನಡೆದಿರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಯಾರ ಬೆನ್ನಿಗೆ ನಿಂತಿದೆ ಎಂಬುದು ಸರಳವಾಗಿ ಊಹಿಸಲಾಗದ ವಿಚಾರವಾಗಿದೆ.ಈವರೆಗೆ ಕಣದಲ್ಲಿ ಕಾಂಗ್ರೆಸ್ ಜ್ಯಾದಳ ಜಿದ್ದಾಜಿದ್ದಿ ಮಾತ್ರ ಇರುತಿತ್ತು ಈಗ ಬಿಜೆಪಿಯೂ ಇದೆ.ಒಂದು ಕಾಲಕ್ಕೆ ಬ್ಯಾನರ್ ಕಟ್ಟಲು ಜನರಿಲ್ಲದೆ ಹೆಣಗುತ್ತಿದ್ದ ಬಿಜೆಪಿಗೆ ಇಲ್ಲೀಗ ರಕ್ಕಸ ಶಕ್ತಿ ಬಂದಿದೆ. ಮೋದಿ ಅಮಿತ್ ಶಾ ರಾಜನಾಥ ಸೀಂಗ ಅದಿತ್ಯನಾಥ ಧರ್ಮೆಂದ್ರ ಪ್ರಧಾನ್ ರಂತ ಬಿಜೆಪಿಯ ನಾಯಕರು ಮಂಡ್ಯವನ್ನು ಪಕ್ಕದ ಗಲ್ಲಿ ಎಂಬಂತೆ ಬಂದು ಹೋಗಿದ್ದಾರೆ.

ಒಕ್ಕಲಿಗರ ಕೋಟೆಯನ್ನು ಕೆಡವದೆ ವಿಧಾನಸೌಧದ ಮೇಲೆ ಬಿಜೆಪಿ ಬಾವುಟ ಹಾರಿಸುವುದು ಅಷ್ಡು ಸುಲಭವಲ್ಲ ಎಂಬುದು ಬಿಜೆಪಿಯ ದಿಗ್ಗಜರಿಗೆ ಅರ್ಥವಾದಂತಿದೆ.ಪರಿಣಾಮವಾಗಿ ಏಳು ಕ್ಷೇತ್ರಗಳಲ್ಲು ಬಿಜೆಪಿ ಪ್ರಬಲ ಪೈಪೋಟಿಗೆ ಸೆಣಸಿದೆ.ಮಳವಳ್ಳಿ ಮುನಿರಾಜೂ ಮಂಡ್ಯದ ಅಶೋಕ್ ಜಯರಾಂ ಶ್ರೀರಂಗಪಟ್ಟಣ ಸಚ್ಚಿದಾನಂದ ಕೃಷ್ಣ ರಾಜ ಪೇಟೆಯ ನಾರಯಣಗೌಡ ನಾಗಮಂಗಲದ ಸುಧಾ ಶಿವರಾಮೇಗೌಡ ಮದ್ದೂರಿನ ಎಸ್ ಪಿ ಸ್ವಾಮಿ ಮೇಲು ಕೋಟೆಯ ಇಂದ್ರೇಶ್ ಕಾಂಗ್ರೆಸ್ ಜ್ಯಾದಳಕ್ಕೆ ಸಮನಾಗಿ ಸ್ಪರ್ಧೆಯೊಡ್ಡಿದ್ದಾರೆ.ಈ ಸಾರಿ ಜಿಲ್ಲೆಯಲ್ಲಿ ಬಿಜೆಪಿ ಪ್ರತಿಕ್ಷೇತ್ರದಲ್ಲು ಸರಾಸರಿ ಗರಿಷ್ಠ 30 ಸಾವಿರ ಮತಗಳನ್ನು ಪಡೆಯಲಿದೆ.ಇದರ ನೇರ ಪರಿಣಾಮ ಜ್ಯಾದಳಕ್ಕೆ ಬೀಳಲಿದೆ.ಈವರೆಗೆ ಕಾಂಗ್ರೆಸ್ ವಿರೋಧಿ ಮತಗಳ ಏಕೈಕ ವಾರಸುದಾರನಾಗಿದ್ದ ಜ್ಯಾದಳಕ್ಕೆ ಬಿಜೆಪಿ ಪ್ರವೇಶದಿಂದ ಮತವಿಭಜನೆಯಾಗಲಿದೆ.

ಜಿಲ್ಲೆಯಲ್ಲಿರುವ ಬಹುತೇಕ ಬಿಜೆಪಿ ಹುರಿಯಾಳುಗಳು ಜ್ಯಾದಳದಿಂದ ವಲಸೆ ಹೋದವರೆ ಆಗಿದ್ದಾರೆ.ಬಿಜೆಪಿಯ ಸಾಂಪ್ರದಾಯಿಕ ಲಿಂಗಾಯತ ಬ್ರಾಹ್ಮಣ ಮತಗಳಲ್ಲದೆ ಈಗಾಗಲೇ ಸೋಶಿಯಲ್ ಮೀಡಿಯಾಗಳ ಮೂಲಕ ಕೋಮುವಾದಿಕರಣಗೊಂಡಿರುವ ಮಧ್ಯಮ ಹಾಗೂ ಸಣ್ಣ ಜಾತಿಗಳ ಬೆಂಬಲ ಬಿಜೆಪಿಗೆ ದೊರಕಲಿದೆ.ಇದ್ಯಾವುದು ಈಗ ಸೀಟಾಗಿ ಪರಿವರ್ತನೆಯಾಗದಿದ್ದರೂ ಭವಿಷ್ಯದಲ್ಲಿ ಬಿಜೆಪಿಗೆ ಭದ್ರ ನೆಲೆ ಒದಗಿಸಿಕೊಡಬಲ್ಲವು.

ಇನ್ನು ಗೆಲ್ಲೋದು ನಾವೇ ಎಂದು ಕಿಲಕಿಲ ಎಂದು ಬೀಗುತ್ತಿರುವ ಕಾಂಗ್ರೇಸಿಗರ ಸಂತಸದ ಕಾರಣಗಳಾದರೂ ಏನು.ಮುಸ್ಲಿಮರು ದಲಿತರು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ ಎಂಬುದಾಗಿದೆ.ಜಿಲ್ಲೆಯಲ್ಲಿ ಕೃಷ್ಣರಾಜಪೇಟೆ ಮಳವಳ್ಳಿ ನಾಗಮಂಗಲದಲ್ಲಿ ಕುರುಬರು ದೊಡ್ಡ ಸೈಜಿನಲ್ಲಿದ್ದಾರೆ.ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಗೆ ಮತ ನೀಡಿರಬಹುದು.ಇನ್ನು ಹಳೇ ಮೈಸೂರಿನಲ್ಲಿ ದಟ್ಟವಾಗಿರುವ ದಲಿತ ಸಮುದಾಯದ ಬಲಗೈ ಪಂಗಡ ಖರ್ಗೆ ಕಾರಣಕ್ಕೆ ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತಿದ್ದಾರೆ.ಇದಲ್ಕದೆ ಕಾಂಗ್ರೇಸ್ ಪಕ್ಷ ಹಣ ಹಂಚಿಕೆಯಲ್ಲಿ ಕಳೆದ ಬಾರಿಗಿಂತ ಚೇತರಿಸಿಕೊಂಡಿದೆ.ಮದ್ದೂರಿನಲ್ಲಿ ಹಣ ಹಂಚಿಕೆಯಲ್ಲಿ ಕಾಂಗ್ರೆಸ್ ಪಕ್ಷವೆ ಮುಂದಿದೆ.ಈ ಅಂಶವೂ ಸಹ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿದೆ.ಇದಲ್ಲದೆ ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ಜ್ಯಾದಳದ ಬಂಡಾಯವೂ ಕೈಗೆ ನೆರವಾಗಲಿದೆ ಮತ್ತು ಅದರ ಗ್ಯಾರಂಟಿಗಳು ಎಲ್ಲ ಜಾತಿಯ ಬಡವರ ಮತ ಗಮನಸೆಳೆಯುವಲ್ಲಿ ಯಶಸ್ವಿಯಾಗಿರುವುದು ಕಾಂಗ್ರೆಸ್ ಆತ್ಮವಿಶ್ವಾಸ ಹೆಚ್ಚಿಸಿದೆ.ಇದಲ್ಲದೆ 2018ರ ಚುನಾವಣೆಯಲ್ಲಿ ಜ್ಯಾದಳ ಬಿಜೆಪಿಯೊಂದಿಗೆ ಸುಮಧರ ಬಾಂದವ್ಯ ಹೊಂದಿದ್ದು ಜ್ಯಾದಳಕ್ಮೆ ಪ್ಲಸ್ ಆಗಿತ್ತು.ಆದರೆ ಈ ಸಾರಿ ಜೆಡಿಎಸ್ ನಿರ್ನಾಮಕ್ಮೆ ಹಾತೊರೆಯುತ್ತಿರುವ ಬಿಜೆಪಿ ಮಂಡ್ಯದ ಹಳ್ಳಿ ಹಳ್ಳಿಗಳಿಗೂ ಅದರ ರಾಷ್ಡೀಯ ನಾಯಕರನ್ನು ಅಟ್ಟಿ ಪ್ರಚಾರ ಮಾಡಿದೆ. ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜ್ಯಾದಳದ ಅಧಿನಾಯಕ ದೇವೆಗೌಡರನ್ನು ಏಕವಚನದಲ್ಲೇ ಟೀಕಿಸಿದ್ದು ತಮಗೆ ಬೈದಂತೆ ಎಂದೇ ಭಾವಿಸಿಕೊಂಡಿದ್ದ ಒಕ್ಕಲಿಗರು ಮತಗಟ್ಟೆಯಲ್ಲಿ ತಮ್ಮ ಪ್ರತೀಕಾರ ತೀರಿಸಿಕೊಂಡಿದ್ದರು.ಆದರೆ ಈ ಸಾರಿ ಎಚ್ಚರಿಕೆ ಹೆಜ್ಜೆಯಿಟ್ಟಿರುವ ಸಿದ್ದರಾಮಯ್ಯ ಎಲ್ಲಿಯೂ ಸಹ ದೇವೆಗೌಡರ ಚಕಾರ ಎತ್ತಿಲ್ಲ.ಮಂಡ್ಯದ ಮಟ್ಟಿಗೆ ದಲಿತರು ಹಾಗೂ ಮುಸ್ಲಿಮರ ಮತಗಳು ನಗಣ್ಯವಾದರೂ ಈ ಸಾರಿ ಜ್ಯಾದಳಕ್ಕೆ ಚುನಾವಣೆ ಎದುರಿಸಲು ಅಗತ್ಯ ವಿಷಯ ನಾಯಕತ್ವದ ಕೊರತೆಯಿದೆ.ಕುಮಾರಸ್ವಾಮಿ ಹೊರತುಪಡಿಸಿ ಅಲ್ಲೀ ಎರಡನೇ ಹಂತದ ನಾಯಕರುಗಳು ಇಲ್ಲದಿರುವುದು.

ವಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಸಿಎಂ ರೇಸಿನಲ್ಲಿರುವುದು ಈ ಎಲ್ಲ ಅಂಶಗಳು ಕಾಂಗ್ರೆಸ್ ಗೆ ಪೂರಕ ವಾತಾವರಣ ರೂಪಿಸಿದೆ.ಇಷ್ಟರ ಮೇಲು ತಳಮಟ್ಟದಲ್ಲಿ ಜ್ಯಾದಳದ ಮೂಲ ಮತಬ್ಯಾಂಕ್ ಪಕ್ಷನಿಷ್ಟೆಯನ್ನು ಬಿಟ್ಟುಕೊಡದಿರುವುದು ಸಹ ಇದೆ.

ಈ ಅಂಶಗಳ ಮೇಲೆ ಮಂಡ್ಯ ಜಿಲ್ಲೆಯ ಫಲಿತಾಂಶವನ್ನು ಅಳೆಯಬೇಕಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!