ಮಂಡ್ಯ :ಮೇ ೮. ಲೈಂಗಿಕ ಹಗರಣದಲ್ಲಿ ಸಿಕ್ಕಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕರೆ ತಂದು ಜೆಡಿಎಸ್ ನಾಯಕರು ಒಪ್ಪಿಸುವ ಬದಲು,
ಡಿಕೆಶಿ ನಾಯಕತ್ವವನ್ನು ಸಹಿಸದೇ ಅವರ ವಿರುದ್ದ ಜೆಡಿಎಸ್ ತೇಜೋವದೆ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಹರಿಹಾಯ್ದರು.
ಹಾಸನ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಡಿಕೆಶಿ ಕೈವಾಡವಿದೆ ಎಂದು ಆರೋಪಿಸಿ
ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿರುವುದರ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದರು.
ಬರಗಾಲ, ಬರ ಪರಿಹಾರದ ಬಗ್ಗೆ ಯಾವತ್ತು ಪ್ರತಿಭಟನೆ ನಡೆಸದ ಜೆಡಿಎಸ್,
ಪ್ರಕರಣವನ್ನು ಮರೆಮಾಚುವ ಸಲುವಾಗಿ ಈ ರೀತಿಯ ಪ್ರತಿಭಟನೆ ಮಾಡಿದ್ದಾರೆ.
ಮುಂದೆ ಜೆಡಿಎಸ್ ಇದೇ ರೀತಿ ವರ್ತಿಸಿದರೆ ಅವರ ವಿರುದ್ಧ ನಾವು ಕೂಡ ದೊಡ್ಡ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಡಿಕೆಶಿ ವಿರುದ್ದ ಪ್ರತಿಭಟನೆ ನಡೆಸುವ ನೈತಿಕತೆ ಜೆಡಿಎಸ್ ನಾಯಕರಿಗಿಲ್ಲ.
ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹಾಗೂ ಜೆಡಿಎಸ್ ಪಕ್ಷಕ್ಕೆ ಬಂದಿರುವ ಕಳಂಕ ಮರೆಮಾಚಲು ಪಿತೂರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಒಕ್ಕಲಿಗ ನಾಯಕನ ಏಳಿಗೆ ಸಹಿಸಲು ಜೆಡಿಎಸ್ ಗೆ ಆಗುತ್ತಿಲ್ಲ.
ಎಸ್ಐಟಿ ತನಿಖಾ ತಂಡ ರಚಿಸಿ ಪೆನ್ ಡ್ರೈವ್ ಪ್ರಕರಣದ ತನಿಖೆ ನಡೆಸಲು ಸರ್ಕಾರ ಮುಂದಾಗಿದ್ದು,
ಜೆಡಿಎಸ್ ಪಕ್ಷದ ಸ್ಥಿತಿ ಏನಾಗಿದೆ ಎಂದು ಅರ್ಥಮಾಡಿಕೊಂಡು ಇದನ್ನೆಲ್ಲ ಬಿಡಬೇಕು ಎಂದರು.
ನಾಳೆ ನಮ್ಮ ಮಂತ್ರಿಗಳ ಜೊತೆ ಚರ್ಚಿಸಿ ಪ್ರತಿಭಟನೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು,
ನಮ್ಮ ಪಕ್ಷ ಹಾಗೂ ಡಿಸಿಎಂ ವಿರುದ್ದ ಗೂಬೆ ಕೂರಿಸುವ ಕೆಲಸ ಬಿಡಬೇಕು ಎಂದರು.
ಎಸ್ಐಟಿ ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದೆ, ತಪ್ಪಿತಸ್ಥರ ರಕ್ಷಣೆ ಮಾಡುವ ಕೆಲಸ ಮಾಡುತ್ತಿಲ್ಲ.
ಸಿಬಿಐ ಕೇಂದ್ರದ ಬಿಜೆಪಿ ಕೈಯಲ್ಲಿದ್ದು, ರಾಜ್ಯದ ತನಿಖಾ ತಂಡದಿಂದಲೇ ಶಿಕ್ಷೆಯಾಗುತ್ತೆ ಎಂದು ನುಡಿದರು.
ಗೋಷ್ಠಿಯಲ್ಲಿ ಕಿಸಾನ್ ಕಾಂಗ್ರೆಸ್ ಮೇಲುಕೋಟೆ ಅಧ್ಯಕ್ಷ ಚಿನಕುರುಳಿ ರಮೇಶ್, ಕೆಪಿಸಿಸಿ ಸದಸ್ಯೆ ವಿಜಯಲಕ್ಷ್ಮಿ ರಘುನಂದನ್, ಮುಖಂಡರಾದ
ಜಾರ್ಜ್,ಮೋಹನ್ ಕುಮಾರ್, ವೀಣಾ ಶಂಕರ್, ದೇವಪ್ಪ, ನಾಗರಾಜು ಸೇರಿದಂತೆ ಇತರರಿದ್ದರು.