
ಮಂಡ್ಯ :- ಆ.೧೦.ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸದ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮಂಡ್ಯದಲ್ಲಿ ರಸ್ತೆ ತಡೆ ನಡೆಸಿತು.
ನಗರದ ಸರ್ ಎಂ ವಿ ಪ್ರತಿಮೆ ಎದುರು ನಿರಂತರ ಧರಣಿ ಸ್ಥಳದಲ್ಲಿ ವಿವಿಧ ಸಂಘಟನೆಗಳ ಜೊತೆಗೂಡಿ ಸಮಿತಿಯ ಮುಖಂಡರು ಬೆಂಗಳೂರು -ಮೈಸೂರು ಹೆದ್ದಾರಿಗೆ ಇಳಿದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೇಂದ್ರ – ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಕಾವೇರಿ ಕಣಿವೆ ಜಲಾಶಯ ಗಳಲ್ಲಿ ನೀರಿನ ಪ್ರಮಾಣ ಕುಸಿತಗೊಂಡಿದೆ, ಆದರೂ ಸಹ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ, ರೈತರ ಜೊತೆ ಕಣ್ಣ ಮುಚ್ಚಾಲೆ ಆಟ ಆಡುತ್ತಿರುವ ಸರಕಾರ ಮತ್ತೆ ಹೆಚ್ಚಿನ ನೀರನ್ನು ಕೆ ಆರ್ ಎಸ್ ಜಲಾಶಯದಿಂದ ಬಿಡುಗಡೆ ಮಾಡಿದೆ, ರೈತರಿಗೆ ದ್ರೋಹ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನು ಸರಿಸುತ್ತಿದೆ,ಇಷ್ಟು ದಿನವಾ ದರೂ ಪ್ರಧಾನ ಮಂತ್ರಿ ಕನ್ನಡಿಗರ ಸಮಸ್ಯೆ ಬಗ್ಗೆ ಬಾಯಿ ತೆರೆದಿಲ್ಲ, ಒಕ್ಕೂಟ ವ್ಯವಸ್ಥೆಯಲ್ಲಿ ಎರಡು ರಾಜ್ಯ ಗಳ ನಡುವೆ ಉದ್ಭವಿಸಿರುವ ಸಮಸ್ಯೆ ಶಮನ ಮಾಡಲು ಮುಂದಾಗಿಲ್ಲ ಎಂದು ಹೇಳಿದರು.
ತಮಿಳುನಾಡಿಗೆ ಹರಿಸುತ್ತಿ ರುವ ನೀರು ಸ್ಥಗಿತ ಮಾಡ ಬೇಕು,ಕುಡಿಯುವ ನೀರು ಸಂರಕ್ಷಣೆ ಮಾಡಿಕೊಳ್ಳಬೇಕು, ಕಾವೇರಿ ಸಂಕಷ್ಟವನ್ನು ನಿವಾರಿಸಲು ರಾಜ್ಯ ಸರ್ಕಾರ ಮುಂದಾಗಬೇಕು,ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶಿಸಿ ಪರಿಹಾರ ಸೂತ್ರ ರೂಪಿಸಬೇಕು ಎಂದು ಒತ್ತಾಯಿಸಿದರು.ಸಮಿತಿಯ ಸುನಂದಾ ಜಯರಾಂ.ಅಂಬುಜಮ್ಮ, ಕನ್ನಡಸೇನೆ ಮಂಜುನಾಥ್, ರೈತ ಸಂಘದ ಇಂಡು ವಾಳು ಚಂದ್ರಶೇಖರ್ ನೇತೃತ್ವ ವಹಿಸಿದ್ದರು.