ಮಂಡ್ಯ ಮೆಡಿಕಲ್ ಕಾಲೇಜು ಮತ್ತೊಮ್ಮೆ ಸುದ್ದಿಯಲ್ಲಿದೆ.ಮತ್ತದೆ ನಕಲಿ ದಾಖಲೆಗಳ ವೈದ್ಯರ ಕಾರಣಕ್ಕೆ.ಸರಕಾರ ಬದಲಾದರೂ ವೈದ್ಯಕೀಯ ಸಚಿವರೆ ಬದಲಾದರೂ ಈ ಕಾಲೇಜಿನ ನಕಲಿ ದಾಖಲೆಗಳ ವೈದ್ಯರಿಗೆ ಅಂಟಿರುವ ರೋಗ ವಾಸಿಯಾಗುವಂತೆ ಕಾಣುತ್ತಿಲ್ಲ.ಇಲ್ಲಿಗೆ ಬರುವ ನಿರ್ದೇಶಕರು ಆಡಳಿತಾಧಿಕಾರಿಗಳು ಸಹ ಇದೇ ಖಾಯಿಲೆಯ ಗ್ರಾಹಕರಾಗಿರುವುದರಿಂದ ಇವರಿಂದ ಹೆಚ್ಚಿನದೇನನ್ನು ನಿರೀಕ್ಷಿಸುವಂತಿಲ್ಲ.ನಕಲಿ ದಾಖಲೆಗಳನ್ನು ಸಲ್ಲಿಸಿ ಮಂಡ್ಯ ಮಿಮ್ಸ್ ಗೆ ಸಹ ಪ್ರಾಧ್ಯಾಪಕರಾಗಿ ನೇಮಕಗೊಂಡ ಮೂವರು ವೈದ್ಯರಿಗೆ ಒಂದುವರೆ ಕೋಟಿ ರೂಪಾಯಿಗಳನ್ನು ಧಾರೆ ಎರೆಯಲು ನಿಂತಿರುವ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ಕತೆ ಇದು.
ಮಂಡ್ಯ ಮಿಮ್ಸ್ ಆರಂಭವಾದ 2006 ರಲ್ಲಿ ವೈದ್ಯರುಗಳಾದ ಮಂಡ್ಯದ ಶ್ರೀನಿಧಿ ನರ್ಸಿಂಗ್ ಹೋಂ ಮಾಲಕಿ ಡಾ.ಕಾವ್ಯಶ್ರೀ (ಈಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರಿ ಡಾ.ಆರುಣಾರ ವೈದ್ಯಕೀಯ ಸಹಪಾಠಿ ಸಹ)ಮಂಡ್ಯದ ಮಾಜಿ ವಿಧಾನ ಪರಿಷತ್ ಸದಸ್ಯರು ಪಿಇಟಿ ಅಧ್ಯಕ್ಷರಾಗಿದ್ದ ದಿವಂಗತ ಎಚ್ ಡಿ ಚೌಡಯ್ಯನವರ ಪುತ್ರಿ ಡಾ.ಸವಿತಾ ಮತ್ತೊಬ್ಬ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಜಾಗೊಂಡಿದ್ದ ವೈದ್ಯ ಡಾ.ಕೃಷ್ಣ ಸಹ ಪ್ರಾಧ್ಯಾಪಕರಾಗಿ ನೇಮಕಗೊಳ್ಳುತ್ತಾರೆ.
ಈ ರೀತಿ ಒಂದು ಮೆಡಿಕಲ್ ಕಾಲೇಜಿಗೆ ಸಹ ಪ್ರಾಧ್ಯಾಪಕರಾಗಿ ನೇಮಕವಾಗುವವರು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಇಂತಿಷ್ಟು ವರ್ಷ ಪಾಠ ಮಾಡಿದ ಅನುಭವ ಇರಬೇಕು ಎಂಬುದು ನಿಯಮ.ಆದರೆ ಯಾವೊತ್ತು ಯಾವ ಮೆಡಿಕಲ್ ಕಾಲೇಜಿನಲ್ಲು ಪಾಠ ಮಾಡದ ಈ ಮೂವರು ಸುಳ್ಯದ ಮೆಡಿಕಲ್ ಕಾಲೇಜು ಅದಿಚುಂಚನಗಿರಿ ಮೆಡಿಕಲ್ ಕಾಲೇಜುಗಳಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಗೆ ಪಾಠ ಮಾಡಿರುವುದಾಗಿ ನಕಲಿ ದಾಖಲೆಗಳನ್ನು ಮಿಮ್ಸ್ ಗೆ ನೀಡಿ ತಮ್ಮ ಹೆಚ್ಚುವರಿ ಭತ್ಯೆ ಸಂಬಳ ಇತ್ಯಾದಿಗಳಿಗೆ ದಾರಿ ಮಾಡಿಕೊಳ್ಳುತ್ತಾರೆ.
ಈ ನಕಲಿ ದಾಖಲೆಗಳ ಮಾಹಿತಿ ಪಡೆದ ಅಂದಿನ ಪತ್ರಕರ್ತರು ವಿಚಾರವಾದಿಗಳಾದ ದಿವಂಗತ ಪ್ರೋ ಎಚ್ ಎಲ್ ಕೇಶವಮೂರ್ತಿ ಯವರು ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಿದ ದೂರಿನನ್ವಯ ಸರಕಾರ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಗುರುರಾಜನ್ ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎನ್ ನಾರಯಣ್ ವರದಿ ಸ್ವತ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ವರದಿ ಎಲ್ಲದರಲ್ಲೂ ಈ ಮೂವರು ಸುಳ್ಳು ದಾಖಲೆಗಳನ್ನು ನೀಡಿ ಸಹ ಪ್ರಾಧ್ಯಾಪಕ ಹುದ್ದೆ ಗಿಟ್ಟಿಸಿಕೊಂಡಿರುವುದನ್ನು ತನಿಖೆಯಲ್ಲಿ ಬಯಲಿಗೆಳೆಯುತ್ತವೆ.ಸ್ವತಃ ಸುಳ್ಯ ಕಾಲೇಜಿನಿಂದ ಈ ಮಹಾಶಯರು ಪಡೆದಿದ್ದ ಭೋಧನಾ ಅನುಭವ ಪ್ರಮಾಣ ಪತ್ರವನ್ನು ಸುಳ್ಯಕಾಲೇಜು ವಾಪಸ್ ಪಡೆದಿರುವುದಾಗಿ ಲೋಕಾಯುಕ್ತ ತನಿಖೆ ಮುಂದೆ ಒಪ್ಪಿಕೊಂಡಿರುತ್ತದೆ
.ಡಾ.ಸವಿತಾ ಸುಳ್ಳು ದಾಖಲೆಯ ಅವಧಿಯಲ್ಲಿ ಯಾವ ಕಾಲೇಜಿನಲ್ಲು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡದೆ ಮಂಡ್ಯ ಹೊರವಲಯದ ಖಾಸಗಿ ಸ್ಯಾಂಜೋ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದದ್ದನ್ನು ಸ್ವತ ಸ್ಯಾಂಜೋ ಆಸ್ಪತ್ರೆ ತನಿಖಾ ಸಂಸ್ಥೆ ಎದುರು ಒಪ್ಪಿಕೊಂಡಿದೆ.
ಇನ್ನು ಡಾ.ಕೃಷ್ಣ ಅರಿವಳಿಕೆ ತಜ್ನ ತಾನೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದ ಅವಧಿಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಯತ್ತಂಬಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಾ ಸುಧೀರ್ಘ ಗೈರು ಕಾರಣಕ್ಕೆ ಕೆಲಸದಿಂದ ವಜಾಗೊಂಡಿರುತ್ತಾನೆ.
ಈ ಮೂವರು ಸಹ ಪ್ರಾಧ್ಯಾಪಕ ಹುದ್ದೆಗಳಿಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ನಿಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 2014 ರಲ್ಲಿ ಈ ಮೂವರನ್ನು ಸೇವೆಯಿಂದ ವಜಾ ಮಾಡಿತು.
ಆದರೆ ಮರಳಿ ಯತ್ನವ ಮಾಡು ಎಂಬಂತೆ ಹೈಕೋರ್ಟ್ ಮೊರೆ ಹೋದ ಈ ಮೂವರು ಯಾವುದೋ ಒಂದು ವಿಚಾರಣಾ ಆಯೋಗದ ವರದಿ ಮೇಲೆ ನಮ್ಮ ಮೇಲೆ ಕ್ರಮ ಕೈಗೊಳ್ಳಲಾಗಿದೆ.ನಿಯಮಾನುಸಾರ ಇಲಾಖಾ ತನಿಖೆ ನಡೆಸುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು.
ಈ ಪ್ರಕರಣ ಸುಧೀರ್ಘ ಏಳು ವರ್ಷಗಳ ವಿಳಂಬದ ನಂತರ ಹೈಕೋರ್ಟ್ ತನ್ನ ತೀರ್ಪು ಹೊರಡಿಸಿದೆ.ಈ ಪ್ರಕರಣದ ನ್ಯಾಯಾಧೀಶರು ಹೊರಡಿಸಿದ ಮೊದಲ ಆದೇಶದಲ್ಲಿ ನಕಲಿ ದಾಖಲೆಗಳನ್ನು ನೀಡಿದ ವೈದ್ಯರ ವಿರುದ್ದ ಇಲಾಖಾ ತನಿಖೆ ನಡೆಸುವಂತೆ ಆದೇಶ ನೀಡಿದೆ. ಎಂಟು ವಾರಗಳ ನಂತರ ಇದೇ ಪ್ರಕರಣದಲ್ಲಿ ಇದೇ ನ್ಯಾಯಾಧೀಶರ ಎದುರು ತೀರ್ಪು ಮರುಪರೀಶೀಲನಾ ಅರ್ಜಿ ಸಲ್ಲಿಸಿ ಅದೇ ದಿನ ಮತ್ತೊಂದು ಆದೇಶ ಹೊರಡಿಸಿ 2014 ರಿಂದ ಇಲ್ಲಿವರೆಗೆ ಈ ವೈದ್ಯರಿಗೆ ಸಲ್ಲಬೇಕಾಗಿರುವ ಎಲ್ಲ ಭತ್ಯೆಗಳನ್ನು ನೀಡುವಂತೆ ಆದೇಶಿಸಿದೆ.
ಲೋಕಾಯುಕ್ತ ವರದಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ವರದಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎನ್ ನಾರಯಣ್ ವರದಿ ಎಲ್ಲದರಲ್ಲು ಈ ವೈದ್ಯರು ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ದಾಖಲಾಗಿದೆ.ಸ್ವತ ಡಾ.ಸವಿತಾ ತಂದೆ ಮಾಜಿ ವಿಧಾನಪರಿಷತ್ ಸದಸ್ಯ ಎಚ್ ಡಿ ಚೌಡಯ್ಯನವರು ಅಂದಿನ ರಾಜ್ಯ ಸರಕಾರ ಈ ಮೂವರು ವೈದ್ಯರನ್ನು ನಕಲಿ ದಾಖಲೆಗಳ ಕಾರಣಕ್ಕೆ ವಜಾಗೊಳಿಸಿದಾಗ ಈ ಮೂವರು ಏನೋ ತಪ್ಪು ಮಾಡಿದ್ದಾರೆ ಕಠಿಣವಾದ ಕ್ರಮ ಕೈಗೊಳ್ಳದಂತೆ ಸ್ವತ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮದೆ ಲೆಟರ್ ಹೆಡ್ ನಲ್ಲಿ ಮನವಿ ಮಾಡಿದ್ದಾರೆ.ಇದಲ್ಲದೆ ಸರಕಾರಿ ಸೇವೆಯಿಂದ ವಜಾಗೊಂಡಿದ್ದ ಡಾ.ಕೃಷ್ಣ ಮರಳಿ ಸರಕಾರಿ ಸೇವೆಗೆ ಸೇರಲು ಅನರ್ಹ ಹಾಗೆಯೆ ಡಾ ಕಾವ್ಯಶ್ರೀ ವಿರುದ್ದ ನಕಲಿ ದಾಖಲೆಗಳನ್ನು ಸಲ್ಲಿಸಿದ್ದ ಕಾರಣಕ್ಕೆ ಪ್ರೋ ಎಚ್ ಎಲ್ ಕೇಶವಮೂರ್ತಿಯವರು ಮಂಡ್ಯದ ನ್ಯಾಯಾಲದಲ್ಲಿ ಖಾಸಗಿ ಪ್ರಕರಣವೊಂದನ್ನು ದಾಖಲಿಸಿದ್ದರು.(9-11-19)ಈ ಪ್ರಕರಣದಲ್ಲಿ ಪೋಲಿಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದನ್ನು ಡಾ.ಕಾವ್ಯಶ್ರೀ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.ಆಗಿನ ನ್ಯಾಯಧೀಶರಾದ ಮೈಕೇಲ್ ಕುಟ್ಟಿನೊ ಕೆಳಗಿನ ನ್ಯಾಯಾಲಯದ ವಿಚಾರಣೆಗೆ ಅನುವು ಮಾಡಿ ಆದೇಶ ಮಾಡಿರುತ್ತಾರೆ.ಈ ಯಾವುದೇ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರದೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಮಂಡ್ಯ ಮಿಮ್ಸ್ ನಿರ್ದೇಶಕರು ನಕಲಿ ದಾಖಲೆಗಳ ವೈದ್ಯರಿಗೆ ಪೂರಕವಾದ ಆದೇಶವೊಂದು ಹೊರಬೀಳುವಂತೆ ನೋಡಿಕೊಂಡಿದ್ದಾರೆ.ಅಸಲಿಗೆ ಈ ನಕಲಿ ದಾಖಲೆಗಳ ವೈದ್ಯರು ಇಲಾಖಾ ತನಿಖೆ ಕೋರಿದ್ದರೆ ವಿನಾ ತಾವು ತಂದಿರುವ ದಾಖಲೆಗಳು ನೈಜವೆಂದು ಸಾಬೀತು ಮಾಡಿರಲಿಲ್ಲ.
ನಂತರದಲ್ಲಿ ಈ ಪ್ರಕರಣದಲ್ಲಿ ಬಲವಾದ ಸಾಕ್ಷಾಧಾರಗಳಿದ್ದರು ಮೇಲ್ಮನವಿ ಸಲ್ಲಿಸುವ ಬದಲು ಈ ಪ್ರಕರಣ ಮೇಲ್ಮನವಿಗೆ ಅರ್ಹವಲ್ಲ ಎಂಬ ಸರಕಾರಿ ವಕೀಲರಿಂದ ಪತ್ರವೊಂದನ್ನು ಪಡೆದು ಕಳೆದ ಬಿಜೆಪಿ ಸರಕಾರದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಮಂತ್ರಿಯಾಗಿದ್ದ
ಡಾ.ಸುಧಾಕರ್ ಮುಂದೆ ಮಂಡಿಸಲಾಗಿದೆ.ಸಚಿವ ಸುಧಾಕರ ರೆಡ್ಡಿ ಸಹ ಪ್ರಕರಣವನ್ನು ಮುಚ್ಚಿಹಾಕಲು ಅನುಕೂಲವಾಗುವಂತೆ ಸರಕಾರಿ ವಕೀಲನ ಪತ್ರವನ್ನು ಅನುಮೋದಿಸಿದ್ದಾರೆ.ಈಗ ಈ ನಕಲಿ ದಾಖಲೆಗಳ ವೈದ್ಯರಿಗೆ 2014 ರಿಂದ ಬಾಕೀ ಇರುವ ಸುಮಾರು ಒಂದುವರೆ ಕೋಟಿ ರೂಪಾಯಿಗಳ ಹಣಕಾಸು ಭತ್ಯೆಯನ್ಮು ಬಿಡುಗಡೆಗೊಳಿ ತಾವೊಂದಿಷ್ಟು ಕಮೀಷನ್ ಗಿಟ್ಟಿಸಲು ಮಿಮ್ಸ್ ನಿರ್ದೇಶಕ ಮಹೇಂದ್ರ ಆಡಳಿತಾಧಿಕಾರಿ ಜಾನ್ಸನ್ ಲಘುಬಗೆಯಿಂದ ಒಡಾಡುತ್ತಿದ್ದಾರೆ.
ಈಗಿನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಂಡ್ಯ ಮಿಮ್ಸ್ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹಗಲು ದರೋಡೆಕೋರರಿಗೆ ಬಿಸಿ ಮುಟ್ಟಿಸಿ ಈ ಪ್ರಕರಣದ ಮೇಲ್ಮನವಿಗೆ ಕ್ರಮವಹಿಸಿದರೆ ಜನರ ತೆರಿಗೆ ದುಡ್ಡು ಉಳಿಯಲಿದೆ.ನಕಲಿ ದಾಖಲೆಗಳ ವೀರರಿಗೆ ಎಚ್ಚರಿಕೆಯ ಪಾಠವಾಗಲಿದೆ