ಮದ್ದೂರು :- ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳ ಸರಣಿ ಮುಂದುವರೆದಿದ್ದು, ಪಟ್ಟಣದ ಪ್ಲೇ ಓವರ್ ನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಪಟ್ಟಣದಲ್ಲಿ ಹಾದು ಹೋಗಿರುವ ಪ್ಲೇ ಓವರ್ ನಲ್ಲಿ ಯುವಕರು ತೆರಳುತ್ತಿದ್ದ ಬೈಕಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದಾರೆ.
ಬೆಂಗಳೂರಿನ ಬಾಸ್ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋಲಾರ ಜಿಲ್ಲೆ ಮೂಲದ ಮಣಿ,ಕೊಪ್ಪಳ ಜಿಲ್ಲೆಯ ಲಿಂಗದ ಮಂಡಿ ಗ್ರಾಮದ ಜನಾರ್ಧನ್ ಪೂಜಾರಿ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ,
ಇಬ್ಬರು ಬೈಕಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಹೊರಟಿದ್ದರು,ಪಟ್ಟಣದ ನ್ಯಾಯಾಲಯದ ಬಳಿಯ ಪ್ಲೇಓವರ್ ನಲ್ಲಿ ತೆರಳುತ್ತಿದ್ದಾಗ ಮುಂಜಾನೆ 5:30 ಸಮಯದಲ್ಲಿ ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಇದರಿಂದ ಬೈಕ್ ಸವಾರಿ ಮಾಡುತ್ತಿದ್ದ ಮಣಿ ಮತ್ತು ಹಿಂಬದಿ ಸವಾರ ಜನಾರ್ದನ ಪೂಜಾರಿ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಈ ಸಂಬಂಧ ಘಟನಾ ಸ್ಥಳಕ್ಕೆ ಮದ್ದೂರು ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನ ಪತ್ತೆಗೆ ಕ್ರಮ ವಹಿಸಿದ್ದಾರೆ.