ಮಂಡ್ಯ
ಮಂಡ್ಯ ನಗರದ ಲೇಬರ್ ಕಾಲನಿ ಹಾಗೂ ಪೌರ ಕಾರ್ಮಿಕರ ಕಾಲನಿಗಳ ಮಧ್ಯೆ ಇರುವ ವೆಂಕಟೇಶ್ವರ ಮಿಲ್ಟ್ರಿ ಹೋಟೆಲ್ ಹೆಸರಿಗಷ್ಟೇ ಮಿಲ್ಟ್ರಿಹೋಟೆಲ್, ಆದರೆ ಇಲ್ಲಿ ದಿನದ 24ಗಂಟೆಗಳ ಕಾಲವೂ ಅಕ್ರಮ ಮದ್ಯ ಮಾರಾಟ ಯಾವುದೇ ಭಯವಿಲ್ಲದೇ ನಿರಾತಂಕವಾಗಿ ನಡೆಯುತ್ತಿದೆ.
ಕಾನೂನು ಪ್ರಕಾರವಾಗಿ ದಲಿತರ ಕೇರಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತಿಲ್ಲ. ಆದರೆ ಇಲ್ಲಿನ ವೆಂಕಟೇಶ್ವರ ಮಿಲ್ಟ್ರಿ ಹೋಟೆಲ್ ಮಾಲೀಕರು ಯಾವ ಅಧಿಕಾರಿಗಳ ಭಯವಿಲ್ಲದೇ ರಾಜಾರೋಷವಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ.
ವೆಂಕಟೇಶ್ವರ ಮಿಲ್ಟ್ರಿ ಹೋಟೆಲ್ ನಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರಿಗೆ ಚುನಾವಣೆ ಸಂದರ್ಭದಲ್ಲಿ ಎಲ್ಲ ಪತ್ರಕರ್ತರ ಸಮ್ಮುಖದಲ್ಲಿಯೇ ಇಲ್ಲಿನ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಅವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೋಟೆಲ್ ನಲ್ಲಿ ದಿನದ 24ಗಂಟೆಯೂ ನಿರಾಂತಕವಾಗಿ ಅಕ್ರಮ ಮದ್ಯ ಮಾರಾಟ ಮುಂದುವರೆಸಲಾಗಿದೆ. ಜಿಲ್ಲಾಧಿಕಾರಿಗಳು ಅಕ್ರಮ ಮದ್ಯ ಮಾರಾಟದ ಕುರಿತಂತೆ ಅಬಕಾರಿ ಆಯುಕ್ತರ ಗಮನಕ್ಕೆ ಸ್ವತಃ ತಂದರಾದರೂ ಅಬಕಾರಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ.
ಕಳೆದ ಮೇ.9ರಂದು ದೂರವಾಣಿ ಮೂಲಕ ಮಾಧ್ಯಮ ಮಿತ್ರರು ಅಬಕಾರಿ ಆಯುಕ್ತರಿಗೆ ಈ ಅಕ್ರಮ ಮದ್ಯ ಮಾರಾಟ ಕುರಿತು ತಿಳಿಸಿದ್ದರು. ಇಡೀ ರಾಜ್ಯದಲ್ಲಿ ಚುನಾವಣೆ ಪ್ರಯುಕ್ತ ಮದ್ಯ ನಿಷೇಧವಾಗಿದ್ದರೂ ನಗರದ ವೆಂಕಟೇಶ್ವರ ಮಿಲ್ಟ್ರಿ ಹೋಟೆಲ್ ನಲ್ಲಿ ಮಾತ್ರ ಯಾವ ಭಯಭೀತಿಯಿಲ್ಲದೇ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆದಿತ್ತು. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದ ವೇಳೆ
ಹೋಟೆಲ್ ಮಾಲೀಕರು, ನಾವು ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಪ್ರತಿ ತಿಂಗಳು ಚಾಚುತಪ್ಪದೇ ಮಂತ್ಲಿ ಕೊಡುತ್ತಿದ್ದೇವೆ. ಹೀಗಾಗಿ ನಮಗೆ ಯಾರದೇ ಭಯವಿಲ್ಲ ಎಂದು ಉದ್ದಟತನದಿಂದ
ಉತ್ತರಿಸುತ್ತಾರೆ.
ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಲೇಬರ್ ಕಾಲನಿ ಹಾಗೂ ಪೌರ ಕಾರ್ಮಿಕರ ಕಾಲನಿಯಲ್ಲಿ ಪ್ರತಿನಿತ್ಯ ತಾವು ದುಡಿದ ಹಣವನ್ನು ಮದ್ಯ ಕುಡಿಯಲು ಬಳಕೆ ಮಾಡುತ್ತಿದ್ದಾರೆ. ಇದರಿಂದ ಅವರ ಕುಟುಂಬಗಳು ಬೀದಿಗೆ ಬಂದು ಬೀಳುವಂತಾಗಿದೆ.
ಅಲ್ಲದೇ ಗಾಂಧಿನಗರದ 13ನೇ ವಾರ್ಡ್ ನ 7, 8ನೇ ಕ್ರಾಸ್ ನಲ್ಲಿಯೂ ಯಾವ ಭಯಭೀತಿಯಿಲ್ಲದೇ
ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದೆ.
ಈಗಲಾದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ವೆಂಕಟೇಶ್ವರ ಮಿಲ್ಡ್ರಿ ಹೋಟೆಲ್ ಸೇರಿದಂತೆ ನಗರದ ವಿವಿಧ ಹೋಟೆಲ್ ಡಾಬಾಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವರೇ ಎಂಬುದನ್ನು ಕಾದು ನೋಡಬೇಕಾಗಿದೆ.