ಪಾಂಡವಪುರ : ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ರೈಲುಗಾಡಿ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಮೂಲಕ ರೈಲುಗಾಡಿಯ ತಮ್ಮ ಪ್ರಯಾಣವನ್ನು ಮುಂದುವರೆಸಿ ಸರಳತೆ ಮೆರೆದರು.
ಸೋಮವಾರ ಬೆಳಗ್ಗೆ ಪಾಂಡವಪುರ ರೈಲ್ವೆ ನಿಲ್ದಾಣದಿಂದ ಟಿಕೆಟ್ ಪಡೆದು 7.05ಕ್ಕೆ ಹೊರಟ ಚಾಮುಂಡಿ ಎಕ್ಸ್ ಪ್ರೆಸ್ ರೈಲುಗಾಡಿ ಏರಿ ಸಾಮಾನ್ಯ ಭೋಗಿಯಲ್ಲಿ ಕುಳಿತು ಬೆಂಗಳೂರಿಗೆ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರಯಾಣಿಕರ ಜತೆಗೆ ಹಲವು ವಿಷಯಗಳ ಕುರಿತು ಮಾತನಾಡುತ್ತಲೇ ಬೆಂಗಳೂರಿಗೆ ತೆರಳಿದರು.
ರೈಲುಗಾಡಿ ಹತ್ತಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಜನರಿಂದ ತುಂಬಿದ್ದ ರೈಲುಗಾಡಿಯಲ್ಲಿ ನಿಂತುಕೊಂಡೇ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಕೆಲ ಪ್ರಯಾಣಿಕರು ಅವರನ್ನು ಗುರುತಿಸಿ ತಮ್ಮ ಸೀಟ್ ಬಿಟ್ಟುಕೊಟ್ಟು ಕುಳಿತುಕೊಳ್ಳುವಂತೆ ಶಾಸಕರನ್ನು ಆಹ್ವಾನಿಸಿದರು. ಬೇಡ, ನೀವು ಕುಳಿತುಕೊಳ್ಳಿ ಎಂದು ನಿಂತೇ ಪ್ರಯಾಣ ಬೆಳೆಸಿದರು. ಆಗ ಪ್ರಯಾಣಿಕರು ಒತ್ತಾಯ ಮಾಡಿದ ಕಾರಣ ಕುಳಿತುಕೊಂಡು ದಿನಪತ್ರಿಕೆ ಓದುವ ಮೂಲಕ ಸಹ ಪ್ರಯಾಣಿಕರಂತೆ ಪ್ರಯಾಣ ಬೆಳೆಸಿದರು.
ಈ ವೇಳೆ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬಾರಿಗೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲು ಮೊದಲ ಅಧಿವೇಶನಕ್ಕೆ ತೆರಳುತ್ತಿರುವ ಬಗ್ಗೆ ನನಗೆ ತುಂಬಾ ಖುಷಿಯಾಗ್ತಿದೆ. ಇಂತಹ ಸದಾವಕಾಶ ನೀಡಿರುವ ಮೇಲುಕೋಟೆ ಮತದಾರರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ರೈತರ ಪರ, ಮಹಿಳೆಯರು ಹಾಗೂ ದೀನ ದಲಿತರ ಪರ
ಮಾಡುತ್ತಿದ್ದ ಕೆಲಸಗಳನ್ನು ಮಾಡಬೇಕೆಂಬ ಆಸೆ ಇದೆ. ಜತೆಗೆ ಮೇಲುಕೋಟೆ ಕ್ಷೇತ್ರ ಹಾಗೂ ರಾಜ್ಯದ ಹಲವರು ಸಮಸ್ಯೆಗಳನ್ನು ಯಾವ ರೀತಿ ಸದನದಲ್ಲಿ ಚರ್ಚೆ ಮಾಡಬಹುದೆಂದು ದೊಡ್ಡವರಿಂದ ಕೇಳಿ ತಿಳಿದು ಚರ್ಚಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ದುಡಿಯಲು ಕಾತುರನಾಗಿದ್ದೇನೆ ಎಂದರು.
