
ಮಂಡ್ಯ : ಜು29.ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಬಳಿ ತಡೆಗೋಡೆ ಇಲ್ಲದ ನಾಲೆಗೆ ಕಾರು ಮಗುಚಿ ಬಿದ್ದ ಪರಿಣಾಮ ನಾಲ್ಕು ಮಂದಿ ಮಹಿಳೆಯರು ಮೃತಪಟ್ಟ ದಾರುಣ ಘಟನೆ ಶನಿವಾರ ರಾತ್ರಿ 8.30 ರ ಸುಮಾರಿಗೆ ಸಂಭವಿಸಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಮಂಡ್ಯ ತಾಲ್ಲೂಕಿನ ತಿಬ್ಬನಹಳ್ಳಿ ಬಳಿ ತಡೆಗೋಡೆ ಇಲ್ಲದ ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ವ್ಯಕ್ತಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ನಾಲ್ಕು ಮಂದಿ ಮಹಿಳೆಯರು ಕೂಡ ಕಾರು ನಾಲೆಗೆ ಮಗುಚಿದ ಪರಿಣಾಮ ಮೃತಪಟ್ಟಿರುವುದು ಜಿಲ್ಲೆಯ ಜನರಲ್ಲಿ ದಿಗ್ಧಮೆ ಮೂಡಿಸಿದೆ. ಟಿ.ನರಸೀಪುರ ತಾಲೂಕು ಗೊರವನಹಳ್ಳಿ ಗ್ರಾಮದ ದೊಡ್ಡಯ್ಯ ಎಂಬುವರ ಪತ್ನಿ ಮಹದೇವಮ್ಮ, ಸಂಬಂಧಿಕರಾದ ರೇಖಾ, ಸಂಜನಾ, ಮಹದೇವಿ ಮೃತರು.
ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿ ಗ್ರಾಮದ ಹೊರವಲಯದ ತುರುಗನೂರು ಬ್ರಾಂಚ್‌ನ ವಿಶ್ವೇಶ್ವರಯ್ಯ ಉಪ ನಾಲೆಗೆ ಕಾರು ಉರುಳಿ ಬಿದ್ದು ಈ ನಾಲ್ಕು ಮಂದಿ ಅಸುನೀಗಿದ್ದಾರೆ.
ದೊಡ್ಡಮುಲಗೂಡು ಮತ್ತು ಗಾಮನಹಳ್ಳಿ ನಡುವೆ ಶನಿವಾರ ರಾತ್ರಿ 8.30ರ ಸಮಯದಲ್ಲಿ ಈ ಅವಘಡ ಸಂಭವಿಸಿದೆ.
ನಾಲೆಯಲ್ಲಿಯೇ ಎಲ್ಲರೂ ಜೀವ ಹೋಗಿದೆ : ನಾಲೆ ನೀರಿನಲ್ಲಿ ಕಾರು ಮುಳುಗಿದ ಪರಿಣಾಮ ನಾಲ್ವರು ಮಹಿಳೆಯರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲಕ ಮನೋಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಪೊಲೀಸರು ನಾಲ್ವರು ಮಹಿಳೆಯರ ಶವವನ್ನು ನಾಲೆ ನೀರಿನಿಂದ ಹೊರ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಮಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಸಂಬಂಧಿಕರನ್ನು ಕರೆಯಲು ಬಂದಿದ್ರು : ಮಹದೇವಮ್ಮ ಅವರ ಮನೆಯವರು ಆದಿಚುಂಚನಗಿರಿಯಲ್ಲಿ ಇಟ್ಟುಕೊಂಡಿದ್ದ ಭುಕ್ತಿ ಎಂಬ ದೇವತಾ ಕಾರ್ಯಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಗೊರವನಹಳ್ಳಿಯಿಂದ ದೊಡ್ಡಮುಲಗೂಡಿಗೆ ಚಾಲಕನ ಜೊತೆ ನಾಲ್ಕು ಮಹಿಳೆಯರು ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ನಾಲೆಗೆ ತಡೆಗೋಡೆ ಇಲ್ಲದ ಕಾರಣ ಕತ್ತಲಲ್ಲಿ ಚಾಲಕನ ಕಣ್ಣಪ್ಪಿ ಕಾರು ನಾಲೆಗೆ ಉರುಳಿಬಿದ್ದಿದೆ. ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪದೇ ಪದೇ ಇಂತಹ ಘಟನೆ : ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿ ವಿಶ್ವೇಶ್ವರಯ ನಾಲೆಗೆ ಕಳೆದ ಗುರುವಾರವಷ್ಟೇ
ಕಾರು ಮಗುಚಿ ಬಿದ್ದು ಶಿವಳ್ಳಿ ಗ್ರಾಮದ ಲೋಕೇಶ್ ಮೃತಪಟ್ಟಿದ್ದರು. ಇದಾದ ಎರಡು ದಿನಗಳಲ್ಲೇ ಮತ್ತೆ ತಡೆಗೋಡೆ ಇಲ್ಲದ ಕಾರಣಕ್ಕೇ ನಾಲೆಗೆ ಬಿದ್ದು ನಾಲ್ವರು ಮೃತಪಟ್ಟಿರುವುದು ಜಿಲ್ಲೆಯ ಜನರಲ್ಲಿ ದಿಗ್ಧಮೆ ಮೂಡಿಸಿದೆ. ಪದೇ ಪದೇ ಇಂತಹ ದುರ್ಘಟನೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ತಡೆಗೋಡೆ ಇಲ್ಲದ ನಾಲೆಗಳಿಗೆ ತಕ್ಷಣವೇ ತಡೆಗೋಡೆ ನಿರ್ಮಿಸಬೇಕೆಂಬುದು ಜನರ ಆಗ್ರಹವಾಗಿದೆ.