ಮಂಡ್ಯ:ಮೇ.16.ಸಮಯದ ಕೊರತೆಯಿಂದಾಗಿ ನನಗೆ ಸೋಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೆ ಶಕ್ತಿ ಮೀರಿ ಶ್ರಮಿಸುತ್ತೇನೆ. ನನ್ನ ಕೈಲಾದ ಸಾಮಾಜಿಕ ಸೇವೆಯನ್ನೂ ಮುಂದಿನ ದಿನಗಳಲ್ಲೂ ಮುಂದುವರೆಸುತ್ತೇನೆ ಎಂದು
ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ನನ್ನ ಪರವಾಗಿ ಶ್ರಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ 50,300 ಕ್ಕೂ ಹೆಚ್ಚು ಮತಗಳನ್ನು ನೀಡಿದ ಕ್ಷೇತ್ರದ ಮತದಾರರಿಗೆ ಚಿರಋಣಿಯಾಗಿ ಮುಂದಿನ ದಿನಗಳಲ್ಲಿ ತನ್ನ ಸಮಾಜಸೇವಾ ಕಾರ್ಯ ನಿರ್ವಹಿಸುತ್ತೇನೆಂದು ತಿಳಿಸಿದರು.
ಸಾಮಾನ್ಯ ರೈತನ ಮಗನಾದ ನನಗೆ ಸ್ಪರ್ಧೆಗೆ ಅನುವು ಮಾಡಿಕೊಟ್ಟ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಭಾರಿಯಾಗಿದ್ದೇನೆಂದರು.
ಅತ್ಯಲ್ಪ ಅವಧಿಯಲ್ಲಿ ಕ್ಷೇತ್ರದ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರನ್ನು ಖುದ್ದು ಭೇಟಿ ಮಾಡಲು ಸಾಧ್ಯವಾಗಿಲ್ಲ. ಆದರೂ ನನ್ನ ಉಮೇದುವಾರಿಕೆ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆಂದರು.
ಕ್ಷೇತ್ರದ ಮತದಾರ ಬಂಧುಗಳೊಂದಿಗೆ ಮುಂದಿನ ದಿನಗಳಲ್ಲೂ ನಿಕಟ ಸಂಪರ್ಕ ಹೊಂದಿ ಅವರ ಸುಖ – ದುಃಖ ಭಾಗಿಯಾಗಲು ನನ್ನ ಕುಟುಂಬ ಸದಸ್ಯರು ಹಾಗೂ ನಾನೂ ಮುಂದಾಗುತ್ತೇವೆಂದರು.
ಸೋಲಿಗೆ ಯಾರನ್ನೂ ಹೊಣೆ ಮಾಡೋಲ್ಲ : ನನ್ನ ಸೋಲಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದಿಲ್ಲ, ಚುನಾವಣೆ ವೇಳೆ ಸಣ್ಣ ಪುಟ್ಟ ಲೋಪಗಳಾಗುವುದು ಸಹಜ. ಅನುಭವದ ಕೊರತೆಯೂ ನನ್ನ ಸೋಲಿಗೆ ಕಾರಣವಿರಬಹುದೆಂದರು.
ಪಕ್ಷದ ಬಂಡಾಯಗಾರರ ಮನವೊಲಿಕೆ ವಿಚಾರವಾಗಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರ ಸೋಲು ಆಘಾತ ತಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಹಿನ್ನೆಲೆಯಲ್ಲಿ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಸೋಲಾಗಿದೆ. ಮೇಲುಕೋಟೆ ಶಾಸಕರಾಗಿದ್ದ ಪುಟ್ಟರಾಜು ಅವರು ಏತ ನೀರಾವರಿ ಯೋಜನೆಗಳು, ರಸ್ತೆ ಹಾಗೂ ದೇವಾಲಯ ನಿರ್ಮಾಣ ಮುಂತಾದ ಜನೋಪಯೋಗಿ ಸೇವೆ ಮಾಡಿದ್ದರೂ ಮತದಾರರು ಮಾನ್ಯತೆ ನೀಡದಿರುವುದು ಬೇಸರದ ಸಂಗತಿ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಮನ್ ಮುಲ್ ಉಪಾಧ್ಯಕ್ಷ ರಘುನಂದನ್, ಮುಖಂಡರಾದ ಸ್ವಾಮಿ, ಜಯರಾಂ, ಮೋಹನ್, ಪ್ರತಾಪ್ ಉಪಸ್ಥಿತರಿದ್ದರು.