ಬಹುತೇಕ ಏಪ್ರಿಲ್ ಮೊದಲ ವಾರದಲ್ಲೇ ನಿಶಾ ಕಾಂಗ್ರೆಸ್ ಸೇರ್ಪಡೆ ನಿಶ್ಚಿತ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈಗ ಡಿ.ಕೆ.ಸುರೇಶ್ ಮತ್ತು ಸಿ.ಎನ್. ಮಂಜುನಾಥ್ ಸ್ಪರ್ಧೆಯ ನಡುವೆ ಯೋಗೇಶ್ವರ್ ನಡೆ ಕುತೂಹಲ ಮೂಡಿಸಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದ ಯೋಗೇಶ್ವರ್ ಈ ಬಾರಿ ಸುರೇಶ್ ಅವರನ್ನು ಸೋಲಿಸುತ್ತೇವೆ ಎಂದು ಬಹಿರಂಗವಾಗಿ ಗುಟುರು ಹಾಕುತ್ತಿದ್ದಾರೆ. ಆದರೆ ಮತ್ತೊಂದು ಬೆಳವಣಿಗೆಯಲ್ಲಿ ಅವರ ಪುತ್ರಿ ನಿಶಾ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ.
ಈಗಾಗಲೇ ನಿಶಾ ಯೋಗೇಶ್ವರ್, ಡಿ.ಕೆ.ಸೋದರರ ಸಂಪರ್ಕದಲ್ಲಿದ್ದು ಕಾಂಗ್ರೆಸ್ ಸೇರುವ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಏಪ್ರಿಲ್ ಮೊದಲ ವಾರದಲ್ಲೇ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮಂಜುನಾಥ್ ಸ್ಪರ್ಧೆಯಿಂದ ಮಹತ್ವ ಪಡೆದುಕೊಂಡಿದೆ. ಸಂಸದ ಡಿಕೆ ಸುರೇಶ್ ವಿರುದ್ಧ ಕುಮಾರಸ್ವಾಮಿ, ಯೋಗೇಶ್ವರ್, ಮುನಿರತ್ನ ಒಂದಾಗಿ ಹೋರಾಟ ಮಾಡುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ಮೊದಲು ಕುಮಾರಸ್ವಾಮಿ, ಯೋಗೇಶ್ವರ್ ಸಾಂಪ್ರದಾಯಿಕ ಎದುರಾಳಿಗಳಾಗಿದ್ದರೂ ಈ ಬಾರಿ ಒಂದಾಗಿ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ನಿಶಾ ಸೇರ್ಪಡೆಯಿಂದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಆಗಬಹುದಾದ ಲಾಭದ ಲೆಕ್ಕಾಚಾರ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ನಿಶಾ ಯೋಗೇಶ್ವರ್ ಮೂಲಕ ಕಾಂಗ್ರೆಸ್ ಕೆಲಸ ಮಾಡಿಸಿದರೆ ಅದರ ಸಣ್ಣ ಅನುಕೂಲ ಚುನಾವಣೆಯಲ್ಲಿ ಆಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಪಾಳಯದಲ್ಲಿದೆ