ʼಬಿಜೆಪಿಗೆ ನನ್ನ ಬೆಂಬಲವಿದೆ, ಈಗಲೂ ಇದೆ, ಮುಂದೆಯೂ ಇರುತ್ತೆʼ
ಮಂಡ್ಯ.ಆ.೧೨: ಮೈತ್ರಿ ವಿಚಾರ ನನ್ನ ಗಮನಕ್ಕೆ ಬಂದಿಲ್ಲ, ಬಿಜೆಪಿಗೆ ನನ್ನ ಬೆಂಬಲ ಕೊಟ್ಟಿದ್ದೇನೆ. ಆ ಬೆಂಬಲ ಈಗಲೂ ಇದೆ, ಮುಂದೆಯೂ ಇರುತ್ತೆ ನೋಡೋಣ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮೈತ್ರಿ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರವನ್ನು ಪಕ್ಷದ ಸ್ಥಳೀಯ ಕಾರ್ಯಕರ್ತರು ಮುಖಂಡರು ಸೇರಿ ಅಭಿಪ್ರಾಯ ಸಂಗ್ರಹ ಮಾಡಬೇಕು.
ಚುನಾವಣೆ ಬಂದಾಗ ಕಾರ್ಯಕರ್ತರು ಮತ್ತು ಮುಖಂಡರು ಮುಖ್ಯ ಎಂದರು.
ʼಮಂಡ್ಯ ಚುನಾವಣೆ ಅಂದ್ರೆ ಸಸ್ಪೆನ್ಸ್ ಥ್ರಿಲ್ಲರ್ ಆಗಿಯೇ ಇರುತ್ತೆʼ
ಮೈತ್ರಿ ಎನ್ನುವುದು ಬೆಂಬಲ ಅಷ್ಟೇ. ಎನ್‌ಡಿಎದಲ್ಲಿ ಕೇವಲ ಜೆಡಿಎಸ್ ಮಾತ್ರ ಇಲ್ಲ ಸಾಕಷ್ಟು ಪಕ್ಷಗಳು ಎನ್‌ಡಿಎದಲ್ಲಿ ಇವೆ.
ವಿಚಾರ ಈಗಲೇ ಹೇಳಲ್ಲ. ಕೆಲವರಿಗೆ ನನ್ನ ನಿರ್ಧಾರದ ಬಗ್ಗೆ ಭಯ ಇದೆ. ಮುಂದೆ ನಿರ್ಧಾರ ಹೇಳುತ್ತೇನೆ, ಅದನ್ನು ಸಸ್ಪೆನ್ಸ್ ಆಗಿಯೇ ಇಡುತ್ತೇನೆ. ಮಂಡ್ಯ ಚುನಾವಣೆ ಅಂದ್ರೆ ಸಸ್ಪೆನ್ಸ್ ಥ್ರಿಲ್ಲರ್ ಆಗಿಯೇ ಇರುತ್ತೆ ಈಗಲೂ ಆ ಸಸ್ಪೆನ್ಸ್ ಥ್ರಿಲ್ಲರ್ ಆಗಿಯೇ ಇರಲಿ. ಎಲ್ಲರ ಆಶೀರ್ವಾದ ಇದ್ದರೆ ನಾನು ಮತ್ತೆ ಮಂಡ್ಯದಿಂದ ಸ್ಪರ್ಧೆ ಮಾಡ್ತೀನಿ ಎಂದು ತಿಳಿಸಿದರು.
ಸೀಟು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಬೇಕು. ಇಲ್ಲವಾದರೆ ವ್ಯತಿರಿಕ್ತವಾಗುವ ಸಾಧ್ಯತೆ ಇದೆ. 2019 ರ ಚುನಾವಣೆಯೇ ಇದಕ್ಕೆ ಉದಾಹರಣೆ. ಆಗ ಎಲ್ಲಾ ಕಡೆ ಅವರೇ ಇದ್ದರು. ಆದರೆ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳದೆ ಕಾರಣ ವ್ಯತಿರಿಕ್ತ ಫಲಿತಾಂಶ ಬಂತು. ಹೀಗಾಗಿ ಇದನ್ನು ರಾಷ್ಟ್ರೀಯ ನಾಯಕರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.
CWRC ಶಿಫಾರಸು ನಿರೀಕ್ಷಿತ, ಯಾಕೆ ನಮ್ಮ ಅಧಿಕಾರಿಗಳು ಸರಿಯಾಗಿ ಮನವರಿಕೆ ಮಾಡಲಾಗ್ತಿಲ್ಲ ಗೊತ್ತಾಗ್ತಿಲ್ಲ. ದೇವರ ದಯೆಯಿಂದ ಮಳೆ ಬಂದು KRS ನೂರಡಿ ತಲುಪಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಈಗ ಆಗಲೇಬೇಕು. ತಮಿಳುನಾಡು ಒತ್ತಡ ಹೇರುವ ಹಾಗೇ ನಮ್ಮವರು ಹೋರಾಟ ಮಾಡಬೇಕು. ಸರ್ಕಾರದ ಸಭೆಗಳಲ್ಲೂ ಭಾಗಿಯಾಗಿ ಸಲಹೆಗಳನ್ನು ಕೊಟ್ಟಿದ್ದೇವೆ ಎಂದು ತಿಳಿಸಿದರು.
ʼತಮಿಳುನಾಡು, ಕರ್ನಾಟಕ ಕುಳಿತು ಮಾತನಾಡಲಿʼ
ತಮಿಳುನಾಡು, ಕರ್ನಾಟಕ ಸರ್ಕಾರ ಪರಸ್ಪರ ಕುಳಿತು ಮಾತನಾಡಬೇಕು. ಹಾಗಾದರೆ ಮಾತ್ರ ಸಮಸ್ಯೆ ಬಗೆಹರಿಸಬಹುದು. ನಮ್ಮ ಸರ್ಕಾರದ ಪ್ರಯತ್ನ ರಾಜ್ಯದ ಹಿತಕಾಯಲು ಸಾಕಾಗುತ್ತಿಲ್ಲ. ನೀರಿನ ವಿಚಾರ ನಮ್ಮ ಜನರು ಭಾವನಾತ್ಮಕವಾಗಿ ತೆಗೆದುಕೊಳ್ತಾರೆ. ಆದರೆ ನಾವು ವಾಸ್ತವಿಕವಾಗಿ ಮಾತನಾಡಬೇಕು. ನೀರು ಬಿಡಲ್ಲ ಎಂದು ಹೇಳಿದರೆ ಸುಪ್ರೀಂ ಕೋರ್ಟ್ ತಕ್ಷಣ ವಜಾ ಮಾಡಿಬಿಡುತ್ತದೆ. ಇಲ್ಲಿ ಒಂದು ಹನಿ ನೀರು ಬಿಡಲ್ಲ ಎಂದು ಹೇಳುವುದು ಸುಲಭ. ಆದರೆ ಹರಿಯುವ ನೀರನ್ನ ಬಿಡಲ್ಲ ಎಂದು ಹೇಳಲು ಆಗಲ್ಲ ಎಂದು ತಿಳಿಸಿದರು.
ಕಾವೇರಿ ವಿಚಾರದಲ್ಲಿ ಪಿಎಂ ಮಧ್ಯ ಪ್ರವೇಶಿಸಲು ಆಗಲ್ಲ ಎಂಬ ಸುಮಲತಾ ಹೇಳಿಕೆಗೆ ಚಲುವರಾಯಸ್ವಾಮಿ ಕಿಡಿಕಾರಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚಲುವಣ್ಣ ಬಗ್ಗೆ ನನಗೆ ಗೌರವವಿದೆ. ಅವರ ಬಗ್ಗೆ ನಾನು ರಾಜಕೀಯವಾಗಿ ಮಾತನಾಡಲ್ಲ. ಕಾವೇರಿಗಾಗಿ ಅಂಬರೀಶ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರು. ಅಂದು ಕಾಂಗ್ರೆಸ್ ನಲ್ಲಿಯೇ ಸಚಿವರಾಗಿದ್ದು, ಅಂದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಯಾಕೆ ಮಧ್ಯಪ್ರವೇಶ ಮಾಡೋಕೆ ಆಗಲಿಲ್ಲ. ಚಲುವರಾಯಸ್ವಾಮಿಯವರು ಅದಕ್ಕೆ ಉತ್ತರ ಕೊಡಬೇಕಲ್ವಾ ? ಎಂದು ಪ್ರಶ್ನಿಸಿದರು.
ಅಂಬರೀಶ್ ಯಾಕೆ ಕೇಂದ್ರ ಸಚಿವ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಟ್ಟರು. ಎಲ್ಲ ಗೊತ್ತಿದ್ದರೂ ಕಾಂಗ್ರೆಸ್ ಆರೋಪ ವಿಚಾರವಾಗಿ ಮಧ್ಯ ಪ್ರವೇಶ ಮಾಡಲು ಆಗಲ್ಲ ಎಂದು ಗೊತ್ತಿದ್ದೇ ಈ ರೀತಿ ಮಾಡ್ತಿದ್ದಾರೆ. ನಾನು ಕಾನೂನು ಇಟ್ಟುಕೊಂಡು ಮಾತಾಡ್ತಿದ್ದೀನಿ, ಪಿಎಂ ಮೋದಿಯವರಿಗೆ ಪಿ.ಆರ್.ಓ ಸಾವಿರಾರು ಜನ ಇದ್ದಾರೆ. ಪ್ರಧಾನಿ ಪರ ಮಾತನಾಡುವ ಅವಶ್ಯಕತೆ ಸುಮಲತಾ ಅಂಬರೀಶ್ ಗೆ ಇಲ್ಲ. ತಮ್ಮ ಕೈಯಲ್ಲಿ ಆಗದಿದ್ದಕ್ಕೆ ಬೇರೆಯವರ ಮೇಲೆ ಬ್ಲೇಮ್ ಮಾಡ್ತಾರೆ ಎಂದು ಚಲುವರಾಯಸ್ವಾಮಿಗೆ ಸಂಸದೆ ಸುಮಲತಾ ಟಾಂಗ್ ಕೊಟ್ಟರು.