ಪಾಂಡವಪುರ : ಮೇಲುಕೋಟೆ ಕ್ಷೇತ್ರದಲ್ಲಿ ರೈತಸಂಘದ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ತಂಟೆಗೆ ಬಂದರೆ ನನ್ನ ಇನ್ನೊಂದು ಮುಖ ತೋರಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ರೈತ ಸಂಘದವರ ಮೇಲೆ ಕಿಡಿಕಾರಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪುರಸಭೆ ಸದಸ್ಯ ಸದಸ್ಯ ದಿ.ಬಿ.ವೈ.ಬಾಬು ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರೈತ ಸಂಘ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಕೆನ್ನಾಳು ಗ್ರಾಮದ ಜೆಡಿಎಸ್ ಮುಖಂಡ ಲಕ್ಷ್ಮೀಶ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ರೀತಿ ಕ್ಷೇತ್ರದಾದ್ಯಂತ
ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ನಾನಿರುವವರೆಗೂ ಕ್ಷೇತ್ರದಲ್ಲಿ ಶಾಂತಿ ನೆಲೆಸಿತ್ತು. ನೂತನ ಶಾಸಕರು ಶಾಂತಿ ಕಾಪಾಡಬೇಕಿದೆ. ನನ್ನ ಸಾಮರ್ಥ್ಯ ಏನೆಂಬುದು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಗೊತ್ತಿತ್ತು. ಜನ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ನೂತನ ಶಾಸಕರು ಗೌರವಯುತವಾಗಿ ನಡೆದುಕೊಳ್ಳಬೇಕು. ನಮ್ಮ ಕಾರ್ಯಕರ್ತರ ತಂಟೆಗೆ ನಾನು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.
ನನಗೆ ಬಂದಿರುವ 80ಸಾವಿರ ಮತಗಳು ಅಪ್ಪನಿಗುಟ್ಟಿದವು ಅದನ್ನು ಅಲ್ಲಾಡಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯನವರಿಗೆ ಬಂದಿರುವ 91ಸಾವಿರ ಮತಗಳು ಅನೈತಿಕ ಮತಗಳಾಗಿವೆ ಎಂದು ಮೂದಲಿಸಿದ ಅವರು, ಸೋಲಿನಿಂದ ನಾನು ವಿಚಲಿತನಾಗಿಲ್ಲ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬಾರದು. ನಿಮ್ಮೊಂದಿಗೆ ಸದಾ ನಾನಿರುವೆ ಎಂದು ಹೇಳಿದರು.
ನನ್ನ ಸೋಲಿಗೆ ಬಾಬು ನಿಧನವೂ ಕಾರಣ : ಜೆಡಿಎಸ್ ಭದ್ರಕೋಟೆಯಾಗಿದ್ದ ಮೇಲುಕೋಟೆ ಕ್ಷೇತ್ರದಲ್ಲಿ ನನ್ನ ಸೋಲಿಗೆ ಪುರಸಭೆ ಸದಸ್ಯ ಬಿ.ವೈ.ಬಾಬು ಅವರ ಅಕಾಲಿಕ ಮರಣವೂ ಕಾರಣವಾಯಿತು. ಬಾಬು ನಿಧನದ ದಿನ ಪಟ್ಟಣದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕಾರ್ಯಕ್ರಮ ರದ್ದು ಮಾಡಿದೆ. ದೇವೇಗೌಡರು ಆ ದಿನ ಬಂದಿದ್ದರೆ ನನಗೆ ಮತಗಳು ಹೆಚ್ಚು ಬರುತ್ತಿದ್ದವು ಎಂದರು.
ಮೇಲುಕೋಟೆ ವಿಧಾನಸಭಾ ಚುನಾವಣೆ ಕಣದಲ್ಲಿದ್ದ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಒಂದಿಷ್ಟು ಮತ ಗಳಿಸುವ ಗಂಡಸು ಎಂದುಕೊಂಡಿದ್ದೆ. ಆದರೆ ಆ ಮತಗಳು ಯಾರಿಗೆ ಹಂಚಿಹೋಗಿದೆ ಎಂದು ಗೊತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಅವರನ್ನು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಕೆಣಕಿದರು.
ರಾಜಕೀಯ ಸಭೆಯಾದ ಶ್ರದ್ಧಾಂಜಲಿ ಸಭೆ
ರಾಜಕೀಯ ಸಭೆಯಾಗಿ ಮಾರ್ಪಾಟ್ಟ ಶ್ರದ್ದಾಂಜಲಿ ಸಭೆ: ಪುರಸಭೆ ಸದಸ್ಯ ಬಿ.ವೈ.ಬಾಬು ಈಚೆಗೆ ಅಕಾಲಿಕ ನಿಧನ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದಲ್ಲಿ ಶ್ರದ್ದಾಂಜಲಿ ಸಭೆ ಏರ್ಪಡಿಸಲಾಗಿತ್ತು. ಆದರೆ ಶ್ರದ್ದಾಂಜಲಿ ಸಭೆಯನ್ನು ರಾಜಕೀಯ ವೇದಿಕೆಯಾಗಿ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮಾರ್ಪಾಡಿಸಿಕೊಂಡರು. ಮೃತ ಬಿ.ವೈ.ಬಾಬು ಬಗ್ಗೆ ಶ್ರದ್ದಾಂಜಲಿ ಸಲ್ಲಿಸುವ ಮಾತುಗಳನ್ನಾಡುವ ಬದಲು ಸಭೆಯುದ್ದಕ್ಕೂ ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರೈತ ಸಂಘದ ಕಾರ್ಯಕರ್ತರನ್ನು ಟೀಕಿಸಲು ಶ್ರದ್ಧಾಂಜಲಿ ಸಭೆಯನ್ನು ಬಳಕೆ ಮಾಡಿಕೊಂಡರು. ಇದು ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಇರಿಸುಮುರಿಸು ಉಂಟಾಯಿತು.
ಕಾರ್ಯಕ್ರಮಕ್ಕೂ ಮುನ್ನ ದಿ.ಬಿ.ವೈ.ಬಾಬು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಚೆಲುವರಾಜು, ಗುರುಸ್ವಾಮಿ, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಜೆಡಿಎಸ್ ಮುಖಂಡರಾದ ಲಿಂಗರಾಜು, ದ್ಯಾವಪ್ಪ ಇತರರು ಇದ್ದರು.