ಪಾಂಡವಪುರ:ಮೇ.18: ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ತಾನು ಪಡೆದಿರುವ 80 ಸಾವಿರ ಮತಗಳು ಮಾತ್ರ ಅಪ್ಪನಿಗೆ ಹುಟ್ಟಿವೆ ಎಂದು ಹೇಳಿರುವ ಮಾತು ಮತದಾರರಿಗೆ ಹಾಗೂ ಸ್ತ್ರೀಕುಲಕ್ಕೆ ಮಾಡಿರುವ ಅಪಮಾನವಾಗಿದೆ. ಕೂಡಲೇ ಪುಟ್ಟರಾಜು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಆಗ್ರಹಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆ ಸದಸ್ಯ ದಿ.ಬಿ.ವೈ.ಬಾಬು ಅವರ ಶ್ರದ್ದಾಂಜಲಿ ಸಭೆಯಲ್ಲಿ ಬಾಬು ಅವರ ಬಗ್ಗೆ ಮಾತನಾಡಿ ಗೌರವ ಸಲ್ಲಿಸುವುದನ್ನು ಬಿಟ್ಟು ಪುಟ್ಟರಾಜು ಬಾಯಿಗೆ ಬಂದಂತೆ ಬಾಲಿಶವಾಗಿ ಮಾತನಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದು ರಾಜಪ್ರಭುತ್ವ, ಯಾವಾಗಲೂ ತಾನೇ ರಾಜನಾಗಿರಬೇಕು. ಇನ್ನುಳಿದವರು ಸೇವಕನಾಗಿರಬೇಕು ಎಂದು ಪುಟ್ಟರಾಜು ತಿಳಿದುಕೊಂಡಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರ ಪ್ರಭು ನೀಡುವ ತೀರ್ಪನ್ನು ಎಲ್ಲರೂ ಗೌರವಿಸಬೇಕಿದೆ. ಅಂತೆಯೇ ಪುಟ್ಟರಾಜು ಮತದಾರರ ತೀರ್ಪಿಗೆ ತಲೆಬಾಗಿ ಗೌರವಯುತವಾಗಿ ನಡೆದುಕೊಳ್ಳಬೇಕಿದೆ. ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಕೂಡ 7 ವಿಧಾನ ಸಭಾ ಚುನಾವಣೆಯಲ್ಲಿ 2 ಬಾರಿ ಮಾತ್ರ ಗೆಲುವು ಸಾಧಿಸಿದ್ದರು. ದರ್ಶನ್ ಪುಟ್ಟಣ್ಣಯ್ಯ ತನ್ನ ತಂದೆಯ ಸಾವಿನ ಅನುಕಂಪದಲ್ಲೂ ಸೋಲು ಕಂಡಿದ್ದರು. ಆದರೆ ಎಂದು ಹತಾಶರಾಗಿ ಅವರು ಮಾತನಾಡಿಲ್ಲ ಎಂದರು.
ರೈತ ನಾಯಕ ಪುಟ್ಟಣ್ಣಯ್ಯ ಮತ್ತು ತಾನು ಚುನಾವಣೆ ಎದುರಿಸಿದ್ದರೂ ಎಂದೂ ಕ್ಷೇತ್ರದಲ್ಲಿ ಸಮಸ್ಯೆ ಮಾಡಿಕೊಂಡಿರಲಿಲ್ಲ ಎಂದು ಮಾಜಿ ಶಾಸಕ ಪುಟ್ಟರಾಜು ಹೇಳಿದ್ದಾರೆ. ಆದರೆ 2013ರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಗೆಲುವು ಸಾಧಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಚಿನಕುರಳಿಗೆ ಹೋಗಿದ್ದಾಗ ಜೆಡಿಎಸ್‌ನವರು ಪೊರಕೆ ತೋರಿಸಿ ಅವಮಾನ ಮಾಡಿದ್ದನ್ನು ನಾವು ಮರೆತಿಲ್ಲ. ಈ ಚುನಾವಣೆಯಲ್ಲಿಯೂ ನಾರಾಯಣಪುರ ಗ್ರಾಮದಲ್ಲಿ ಪುಟ್ಟರಾಜು ರೈತ ಸಂಘದ ಕಾರ್ಯಕರ್ತನ ಕುತ್ತಿಗೆ ಪಟ್ಟಿ ಹಿಡಿದು ಗಲಾಟೆ ಮಾಡಿದ್ದಾರೆ ಎಂದು ಟೀಕಿಸಿದರು.
ಪುಟ್ಟರಾಜು ಮಾನಸಿಕ ಅಸ್ವಸ್ಥ : ಉನ್ನತ ಶಿಕ್ಷಣ ಪಡೆದು ವೈದ್ಯರಾಗಿರುವ ಡಾ.ಎನ್.ಎಸ್.ಇಂದ್ರೇಶ್ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರು. ‘ಅವರು ಹೆಚ್ಚು ಮತ ಪಡೆದಿಲ್ಲ. ಗಂಡಸೇ ಅಲ್ಲ ಎಂದು ಮಾತನಾಡಿ ಅವಮಾನ ಮಾಡಿದ್ದೀರಾ, ರಾಜಕೀಯ ಕ್ಷೇತ್ರ ನಿಮಗೆ ಮಾತ್ರ ಮೀಸಲಾ? ಉಳಿದವರ್ಯಾರು ಸ್ಪರ್ಧಿಸಬಾರದಾ?’ ನೀವು ಸೋತು ಮಾನಸಿಕ ಅಸ್ವಸ್ಥರಾಗಿ ಇಂತಹ ಮಾತುಗಳನ್ನಾಡುತ್ತಿದ್ದೀರಿ, ಮೊದಲು ಚಿಕಿತ್ಸೆಗೆ ಒಳಗಾಗಿ ಮಾನಸಿಕ ಆರೋಗ್ಯ ಸರಿಮಾಡಿಕೊಂಡು ಜನ ಸೇವೆ ಮಾಡಲು ಬನ್ನಿ ನಾವು ಸ್ವಾಗತಿಸುತ್ತೇವೆ ಎಂದು ಪುಟ್ಟರಾಜುಗೆ ಕೆಂಪೂಗೌಡ ತಿಳಿ ಹೇಳಿದರು.
ಮೇಲುಕೋಟೆ ಕ್ಷೇತ್ರಕ್ಕೆ ಘನತೆ ಗೌರವ ತಂದುಕೊಡುವಂತೆ ನಡೆದುಕೊಳ್ಳಿ. ನಿಮ್ಮ ನಡವಳಿಕೆಗಳು ನಮ್ಮೆಲ್ಲರ ಹಿರಿಯ ರಾಜಕೀಯ ಮುತ್ಸದ್ದಿ ಎಚ್.ಡಿ.ದೇವೇಗೌಡರಿಗೆ ಗೌರವ ತಂದುಕೊಡುವಂತಹದ್ದಲ್ಲ. ವಿವೇಕ, ವಿವೇಚನೆಯಿಂದ ನಡೆದುಕೊಳ್ಳಿ. ನಾಲಿಗೆ ನಮ್ಮ ಸಂಸ್ಕೃತಿಯನ್ನು ತೋರುತ್ತದೆ. ಸಜ್ಜನ, ಸಚ್ಚಾರಿತ್ರ್ಯವುಳ್ಳ ದರ್ಶನ್ ಪುಟ್ಟಣ್ಣಯ್ಯ ಯಾವತ್ತೂ ನಿಮ್ಮ ರೀತಿಯಲ್ಲಿ ನಡೆದುಕೊಂಡಿಲ್ಲ. ಘನತೆ ಗಂಭೀರತೆಯಿಂದ ಇದ್ದು ಮೇರು ರಾಜಕಾರಣ ಮಾಡುತ್ತಿದ್ದಾರೆ ಎಂದು ಪುಟ್ಟರಾಜುಗೆ ಕಿವಿ ಮಾತು ಹೇಳಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು ಮಾತನಾಡಿ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ಪ್ರಚೋದನಕಾರಿ ಮಾತುಗಳನ್ನಾಡುವುದನ್ನು ಬಿಡಬೇಕು. ಮೊದಲು ಅವರು ಡಿಎನ್ ಎ ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ಕಾಲೆಳೆದರು. ಗಾಂಧಿ ಮಾರ್ಗದಲ್ಲಿ ಹೋರಾಟ ನಡೆಸುತ್ತಿರುವ ರೈತ ಸಂಘವು ಕ್ಷೇತ್ರದ ಜನ ಶಾಂತಿ ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದರು.
ಅಧಿಕಾರಿಗಳ ಗೌಪ್ಯ ಸಭೆ: ಸರ್ವೋದಯ ಕರ್ನಾಟಕ ಪಕ್ಷದ ತಾಲ್ಲೂಕು ಅಧ್ಯಕ್ಷ ಎಸ್.ದಯಾನಂದ್ ಮಾತನಾಡಿ, ಚುನಾವಣೆ ಮುಗಿದ ಮೇಲೆ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ತಾಲ್ಲೂಕು ಮಟ್ಟದ ಕೆಲ ಅಧಿಕಾರಿಗಳನ್ನು ಕರೆದು ಗೌಪ್ಯ ಸಭೆ ನಡೆಸುತ್ತಿದ್ದಾರೆ. ಅಲ್ಲದೇ ಚುನಾವಣೆ ನೀತಿ ಸಂಹಿತೆ ಇದ್ದರೂ ಮೇ.7,8 ಮತ್ತು 9ರಂದು ಕೆಆರ್‌ಐಡಿಎಲ್ (ಕರ್ನಾಟಕ ಭೂ ಸೇನೆ ನಿಗಮ) ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಅಕ್ರಮವಾಗಿ ಗುತ್ತಿಗೆ ಕಾಮಗಾರಿ ಬಿಲ್ ಪಾಸ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಹರವು ಪ್ರಕಾಶ್, ಕೆ.ಕೆ.ಗೌಡೇಗೌಡ, ಕೆನ್ನಾಳು ವಿಜಯಕುಮಾರ್, ಡಾಮಡಹಳ್ಳಿ ಸ್ವಾಮಿಗೌಡ, ಹಾರೋಹಳ್ಳಿ ಲಕ್ಷ್ಮೇಗೌಡ, ಶಿವಳ್ಳಿ ಚಂದ್ರಣ್ಣ, ಎಂಜಿನಿಯರ್ ಯೋಗೀಶ್, ಕಾಂಗ್ರೆಸ್ ಮುಖಂಡರಾದ ಸಿ.ಆರ್.ರಮೇಶ್, ವಕೀಲ ಎಚ್.ಎಲ್.ಮುರುಳೀಧರ್, ಡಿ.ಹುಚ್ಚೇಗೌಡ, ಸಾಹಿತಿ ಬೋರೇಗೌಡ ಚಿಕ್ಕಮರಳಿ ಇತರರು ಇದ್ದರು.