ರಾಧಾಕೃಷ್ಣ ಮನೆ ಎದುರು ಬೆಂಬಲಿಗರ ಪ್ರತಿಭಟನೆ
ಮಾಜಿ ಸಚಿವ ಆತ್ಮಾನಂದ ನಿವಾಸದಲ್ಲಿ ಅತೃಪ್ತರ ಸಭೆ
ಮಂಡ್ಯ: ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಿ.ರವಿಕುಮಾರ್ ಅವರಿಗೆ ಘೋಷಣೆಯಾದ ಬೆನ್ನಲ್ಲೇ ಟಿಕೆಟ್ ವಂಚಿತ ಆಕಾಂಕ್ಷಿತರ ಅಸಮಾಧಾನ ಬಹಿರಂಗಗೊAಡಿದೆ. ಕೆ.ಕೆ.ರಾಧಾಕೃಷ್ಣ ಬೆಂಬಲಿಗರು ಪ್ರತಿಭಟನೆ ನಡೆಸಿ ಪಕ್ಷದ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಮಾಜಿ ಸಚಿವ ಎಂ.ಎಸ್.ಆತ್ಮಾನAದ ನಿವಾಸದಲ್ಲಿ ಸಭೆ ಸೇರಿದ ಟಿಕೆಟ್ ವಂಚಿತರು ಮತ್ತು ಹಲವು ಮುಖಂಡರು ರವಿಕುಮಾರ್ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿದರು.
ಗುರುವಾರ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದ ರಾಧಾಕೃಷ್ಣ ಬೆಂಬಲಿಗರು, ಶುಕ್ರವಾರವೂ ನಗರದ ಬಂದೀಗೌಡ ಬಡಾವಣೆಯ ರಾಧಾಕೃಷ್ಣ ನಿವಾಸದ ಎದುರು ಪ್ರತಿಭಟನೆ ಮುಂದುವರಿಸಿ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದರು.
ರಾಧಾಕೃಷ್ಣ ಅವರು ಕ್ಷೇತ್ರದಲ್ಲಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿದ್ದಾರೆ. ಅವರು ಗೆಲ್ಲುವ ಸಮರ್ಥ ಅಭ್ಯರ್ಥಿ. ಆದರೆ, ಷಡ್ಯಂತ್ರದಿAದ ಟಿಕೆಟ್ ತಪ್ಪಿಸಲಾಗಿದೆ. ವರಿಷ್ಠರು ಪುನರ್ ಪರಿಶೀಲಿಸಿ ಅನ್ಯಾಯ ಸರಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪಕ್ಷೇತರವಾಗಿ ನಿಲ್ಲಿ, ಗೆಲ್ಲಿಸಿಕೊಂಡು ಬರುತ್ತೇವೆ ಎಂದು ರಾಧಾಕೃಷ್ಣ ಅವರಿಗೆ ತಾಕೀತು ಮಾಡಿದರು. ಇನ್ನೂ ಸಮಯವಿದೆ. ಕಾದು ನೋಡೋಣ ಎಂದು ರಾಧಾಕೃಷ್ಣ ಬೆಂಬಲಿಗರನ್ನು ಸಮಾಧಾನಪಡಿಸುವ ಯತ್ನ ಮಾಡಿದರು.
ಇತ್ತ ಮಾಜಿ ಸಚಿವ ಆತ್ಮಾನಂದ ಅವರ ನಿವಾಸದಲ್ಲಿ ಸಭೆ ನಡೆಸಿದ ಹಲವು ಮುಖಂಡರು, ಕಳೆದ ಬಾರಿ ಸೋತಿರುವ ರವಿಕುಮಾರ್ ಅವರಿಗೇ ಟಿಕೆಟ್ ನೀಡಿರುವುದು ಸರಿಯಲ್ಲ. ಹಾಗಾಗಿ ಈಗಿನ ಟಿಕೆಟ್ ಘೋಷಣೆ ಹಿಂಪಡೆದು ಬೇರೆಯವರಿಗೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮಾಜಿ ಶಾಸಕ ಎಚ್.ಬಿ.ರಾಮು, ಮುಖಂಡರಾದ ಅಮರಾವತಿ ಚಂದ್ರಶೇಖರ್, ಮೈಷುಗರ್ ಮಾಜಿ ಅಧ್ಯಕ್ಷರಾದ ಹಾಲಹಳ್ಳಿ ರಾಮಲಿಂಗಯ್ಯ, ಸಿದ್ದರಾಮೇಗೌಡ, ಬಿ.ಸಿ.ಶಿವಾನಂದ, ಸಿದ್ದರೂಢ ಸತೀಶ್‌ಗೌಡ, ಮಿತ್ರ ರಮೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಈ ನಡುವೆ ಕೆ.ಕೆ.ರಾಧಾಕೃಷ್ಣ ಅವರ ಮನೆಗೆ ತೆರಳಿದ ಟಿಕೆಟ್ ಘೋಷಿತ ಪಿ.ರವಿಕುಮಾರ್, ರಾಧಾಕೃಷ್ಣ ಅವರ ಕಾಲಿಗೆ ಬಿದ್ದು ಅಭಿನಂದಿಸಿದರು.
ಬೆAಬಲಿಗರ ಸಭೆ ನಡೆಸಿ ನಿರ್ಧಾರ: ರಾಧಾಕೃಷ್ಣ
ನನಗೆ ಟಿಕೆಟ್ ಸಿಗದೇ ಇರುವುದರಿಂದ ಬೆಂಬಲಿಗರಿಗೆ ಬೇಸರವಾಗಿದೆ. ಹಾಗಾಗಿ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕವಾಗಿ ಯಾರಿಗೂ ದೂಷಿಸುವುದಿಲ್ಲ. ಸದ್ಯದಲ್ಲೇ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದು ಟಿಕೆಟ್ ವಂಚಿತ ಕೀಲಾರ ರಾಧಾಕೃಷ್ಣ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ಸಿಗುವ ಭರವಸೆ ಇತ್ತು. ಹಾಗೆಯೇ ಬೆಂಬಲಿಗರೂ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸಹಜವಾಗಿ ನನ್ನ ಬೆಂಬಲಿಗರಲ್ಲಿ ಅಸಮಾಧಾನ ಮೂಡಿದೆ. ಹಾಗಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ನಾನು ಮೊದಲು ಕಾಂಗ್ರೆಸ್‌ನಲ್ಲಿದ್ದು, ಜೆಡಿಎಸ್ ಸೇರಿದ್ದೆ. ಈಗ ಕಾಂಗ್ರೆಸ್‌ನಲ್ಲಿದ್ದೇನೆ. ನನ್ನ ಹಲವಾರು ಬೆಂಬಲಿಗರು ನನ್ನ ಜತೆ ಬಂದಿದ್ದಾರೆ. ಅವರಿಗೆ ನ್ಯಾಯ ಕೊಡಿಸಬೇಕಾಗಿದೆ.
ಪಕ್ಷದ ವರಿಷ್ಠರನ್ನು ಭೇಟಿಯಾಗಿ ಎಲ್ಲವನ್ನೂ ವಿವರಿಸುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಂಬಲಿಗರು ಮುಖ್ಯ. ವಾರದೊಳಗೆ ಬೆಂಬಲಿಗರ ಸಭೆ ಕರೆದು ಅಭಿಪ್ರಾಯ ಪಡೆದು ರಾಜಕೀಯವಾಗಿ ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.