ಇಂದು ಚುನಾವಣೆ ಪ್ರಚಾರಕ್ಕೆ ನೂರೆಂಟು ಮಾರ್ಗಗಳಿವೆ. ಪ್ರಿಂಟ್ ಮೀಡಿಯಾ, ದೃಶ್ಯ ಮಾಧ್ಯಮಗಳನ್ನು ನಿವಾಳಿಸಿ ಸೋಷಿಯಲ್ ಮೀಡಿಯಾ ಈಗ ಎಲ್ಲರನ್ನೂ ತಲುಪುತ್ತಿದೆ. ಪ್ರಿಂಟ್ ಮೀಡಿಯಾ ಹಾಗೂ ದೃಶ್ಯ ಮಾಧ್ಯಮದ ಜಾಹೀರಾತು ಸಿಮೀತ ನೆಲೆಯಲ್ಲಿ ಕೆಲಸ ಮಾಡುತ್ತದೆ. ಆದರೆ ಸೋಶಿಯಲ್ ಮೀಡಿಯಾದ ವ್ಯಾಪ್ತಿ ನಿರ್ದಿಷ್ಟ ಹಾಗೂ ವಿಶಾಲವಾದುದು. ಒಂದು ವಿಧಾನಸಭಾ ಕ್ಷೇತ್ರದ ನಿರ್ದಿಷ್ಟ ವಯೋಮಾನದ ಮತದಾರರಿಗೆ ಅಭ್ಯರ್ಥಿ ಪರವಾಗಿ ಯಾವ ವಿಷಯವನ್ನು ತಲುಪಿಸಬೇಕು, ಮತದಾರನ ಮೇಲೆ ಸದಾ ಪ್ರಭಾವ ಬೀರುವಂತಹದ್ದು ಇಂದು ಸೋಷಿಯಲ್ ಮೀಡಿಯಾಗಿದೆ. ಇದಲ್ಲದೆ ಮೀಡಿಯಾಗಳು ಹಣ ಪಡೆದು ನಿರ್ದಿಷ್ಟ ಪಕ್ಷ, ವ್ಯಕ್ತಿ ಗುಂಪಿನ ಪರವಾಗಿ ಸುದ್ದಿ ಪ್ರಸರಿಸುತ್ತವೆ ಎಂಬ ಆರೋಪವೂ ಇದೆ. ಇದೆಲ್ಲ ಒತ್ತಟ್ಟಿಗಿಟ್ಟು ಮೂರು ದಶಕಗಳ ಹಿಂದೆ ಚುನಾವಣಾ ಪ್ರಚಾರ ಹೇಗಿತ್ತು ಎಂದು ಗಮನಿಸೋಣ. ಆಗೆಲ್ಲ ಚುನಾವಣಾ ಪ್ರಚಾರ ಎಂದರೆ ಆಟೋ ಮೈಕ್ ಪ್ರಚಾರ, ಗೋಡೆಬರಹ, ಸಾರ್ವಜನಿಕ ಸಭೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಪ್ರದರ್ಶಿಲಾಗುತಿತ್ತು.
ದೊಡ್ಡ ದೊಡ್ಡ ಸಾರ್ವಜನಿಕ ಸಭೆಗಳು ಮಾತ್ರವಲ್ಲದೆ ಬಡಾವಣೆಗಳಲ್ಲೂ ಸಣ್ಣ ಪುಟ್ಟ ಸಭೆಗಳು ನಡೆಯುತ್ತಿದ್ದವು.
ಈ ಸಭೆ, ಗೋಡೆ ಬರಹಗಳೇ ಅಂತಿಮವಾಗಿ ಜನಾಭಿಪ್ರಾಯ ರೂಪಿಸುತ್ತಿದ್ದವು.
ಆ ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಮಾಡುವುದಕ್ಕೆ ಆತನ ಕೆಲಸ ಕಾರ್ಯಗಳೇ ಮಾನದಂಡವಾಗಿರುತ್ತಿದ್ದವು. ಈಗಿನಂತೆ ಅಭ್ಯರ್ಥಿಗಳ ಇಮೇಜ್ ಕಟ್ಟಿಕೊಡಲು ಖಾಸಗಿ ಏಜೆನ್ಸಿಗಳಿಗೆ ಗುತ್ತಿಗೆ ಕೊಡುವ ಜನಾಭಿಪ್ರಾಯವನ್ನು ನಿರ್ದಿಷ್ಟ ಪಕ್ಷದ ಪರವಾಗಿ ರೂಪಿಸಲು ಹೆಣಗುವ ಮೀಡಿಯಾ ಇರಲಿಲ್ಲ.
ಆಟೋ ಮೈಕ್ ಪ್ರಚಾರ ಇಂದಿನಂತೆ ಈಗಾಗಲೇ ಮುದ್ರಿಸಿದ ಭಾಷಣ ಇರುತಿರಲಿಲ್ಲ. ಬದಲಿಗೆ ಮೈಕ್ ಪ್ರಚಾರ ಮಾಡುವವನೇ ಸೃಜನಾತ್ಮಕವಾಗಿ ಅಭ್ಯರ್ಥಿಗಳ ವಿವರವನ್ನು ಮತದಾರರಿಗೆ ಪರಿಚಯಿಸುತ್ತಿದ್ದ. ಆತನೆ ಪ್ರಚಾರದಲ್ಲಿ ಬಹುದೊಡ್ಡ ಭಾಷಣಕಾರನಂತೆ ತೋರುತ್ತಿದ್ದ. ಈಗಿನಂತೆ ಸುದ್ದಿ ಮಾಧ್ಯಮಗಳು ವಿಸೃತವಾಗಿ ಇಲ್ಲದ ಕಾಲದಲ್ಲಿ ಈ ಆಟೋ ಮೈಕ್ ಪ್ರಚಾರವೇ ಅಭ್ಯರ್ಥಿ ಕುರಿತು ಸಾಕಷ್ಟು ವಿಷಯಗಳನ್ನು ತಿಳಿಸುತಿತ್ತು. ಈ ರೀತಿಯ ಆಟೋ ಮೈಕ್ ಪ್ರಚಾರಕರಲ್ಲಿ ಪ್ರಸಿದ್ದಿಗೆ ಬಂದವರೆಂದರೆ ಮಂಡ್ಯದ ವಡೇ ರಮೇಶ್.
ಈಗಿನ ದಿನಗಳಲ್ಲಿ ಅಭ್ಯರ್ಥಿಗಳ ಮಾತು ಕೇಳಿಸಿಕೊಳ್ಳಲು ನಾಲ್ಕು ಜನ ಸೇರುವುದಿಲ್ಲ. ಅದಕ್ಕೂ ಕಾಸು ಕೊಟ್ಟೆ ಜನ ಸೇರಿಸಬೇಕು. ಆದರೆ ಮಂಡ್ಯ ವಡೆ ರಮೇಶ್ ಅಂದ್ರೆ ಅವರ ಆಟೋ ಪ್ರಚಾರ ಎಂದರೆ ಜನರು ಮೈಯೆಲ್ಲ ಕಿವಿಯಾಗಿಸಿ ಕೇಳಿಸಿಕೊಳ್ಳುತ್ತಿದ್ದರು. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಿಂದಲೇ ಪ್ರಸಿದ್ದಿಗೆ ಬಂದ ವಡೆ ರಮೇಶ್ ಮೂಲತಃ ರಂಗಕಲಾವಿದರು. ಇವರ ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿ ಕುರಿತು ಹಾಡುಗಳಿರುತ್ತಿದ್ದವು. ಅತ್ಯಂತ ಕ್ರಿಯಾಶೀಲವಾಗಿ ಏಕಾಂಗಿಯಾಗಿಯೇ ಅವರು ನಡೆಸುತ್ತಿದ್ದ ಪ್ರಚಾರವೂ ಬೀದಿ ಸಭೆಯಾಗಿ ಪರಿವರ್ತನೆಯಾಗಿ ಬಿಡುತಿತ್ತು.
ಕಂಚಿನಕಂಠದ ರಮೇಶ್ ಧ್ವನಿ ಮಂಡ್ಯದ ಜನರಿಗೆ ಚಿರಪರಿಚಿತವಾಗಿತ್ತು. ರಮೇಶ್ ಯಾರ ಪರ ಪ್ರಚಾರ ಮಾಡುತ್ತಾರೊ ಅವರು ಗೆಲ್ಲುತ್ತಾರೆಂಬ ಪ್ರತೀತಿ ಮಂಡ್ಯದಲ್ಲಿತ್ತು. ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ರಮೇಶ್ ರನ್ನು ಬಳಸಿಕೊಳ್ಳಲು ತಾಮುಂದು ನಾಮುಂದು ಎನ್ನುತ್ತಿದ್ದರು.
ಚುನಾವಣಾ ಪ್ರಚಾರವನ್ನೇ ಚುನಾವಣಾ ಸಭೆಯಾಗುವಂತೆ ಮಾಡುವ ಕಲೆ ರಮೇಶ್ ಗೆ ಸಿದ್ದಿಸಿತ್ತು. 1994ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗಳು ಘೋಷಣೆಯಾದವು.ಜನತಾ ದಳದಿಂದ ಮಂಡ್ಯ ವಿಧಾನಸಭಾ ಅಭ್ಯರ್ಥಿಯಾಗಿದ್ದ ಎಸ್ ಡಿ ಜಯರಾಂ ಪರ ವಡೇ ರಮೇಶ್ ರದ್ದು ಅಬ್ಬರದ ಪ್ರಚಾರ. ಒಂದು ಹಂತಕ್ಕೆ ಅಂದಿನ ಕಾಂಗ್ರೇಸ್ ಶಾಸಕ ಆತ್ಮಾನಂದ ಪ್ರಚಾರಕ ರಮೇಶ್ ರನ್ನು ಪೋಲಿಸರ ಮೂಲಕ ಬಂಧಿಸುವ ಮಟ್ಟಕ್ಕೂ ಸನ್ನಿವೇಶ ಸೃಷ್ಟಿಯಾಗಿತ್ತು.
ಅಂದು ನಡೆದ ಚುನಾವಣೆಯಲ್ಲಿ ಎಸ್ ಡಿ ಜಯರಾಂ ಜಯಶೀಲರಾದರು ಮತ್ತು ಮಂತ್ರಿಯೂ ಸಹ ಆದರು. ಇಂದಿನ ದಿನಗಳ ಚುನಾವಣಾ ಪ್ರಚಾರಕ್ಕೂ ಅಂದಿನ ದಿನಗಳ ಪ್ರಚಾರಕ್ಕೂ ಸಾಕಷ್ಟು ಅಂತರ ಸೃಷ್ಟಿಯಾಗಿದೆ. ಪ್ರಚಾರಕರ ಕ್ರಿಯಾಶೀಲತೆಗಿಂತ ತಂತ್ರಜ್ನಾನವೇ ಈಗ ಮೇಲುಗೈ ಪಡೆದಿದೆ.
ಯಶ್ ಅಭಿನಯದ ಮಾಸ್ಟರ್ ಪೀಸ್ ನಿರ್ದೇಶಕ ಕನ್ನಡ ಸಿನಿರಂಗದ ಸಂಭಾಷಣೆಕಾರ ಮಂಜು ಮಾಂಡವ್ಯ ವಡೇ ರಮೇಶ್ ರ ಪುತ್ರ ಎಂಬುದು ಗಮನಾರ್ಹವಾಗಿದೆ.