ರಾಗಿ ಲಕ್ಷಣಯ್ಯ ಹೆಸರು ಚಿರಸ್ಥಾಯಿ: ಎನ್ ಚಲುವರಾಯಸ್ವಾಮಿ
ಕೃಷಿ ವಿಜ್ಞಾನಿ ರಾಗಿ ಲಕ್ಷ್ಮಣಯ್ಯ ಅವರ ಹೆಸರು ಭೂಮಂಡಲ ಇರುವವರೆಗೆ ಚಿರಸ್ಥಾಯಿಯಾಗಿರಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಇಂದು ಕೃಷಿ ವಿಶ್ವವಿದ್ಯಾಲಯ ವಿ.ಸಿ ಫಾರಂ ನಲ್ಲಿ ನಡೆದ 27 ನೇ ವರ್ಷದ ರಾಗಿ ಲಕ್ಷ್ಮಣಯ್ಯ ಸ್ಮಾರಕ ಉಪನ್ಯಾಸ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು .
ರಾಗಿ ಲಕ್ಷ್ಮಣಯ್ಯ ಅವರು ರಾಗಿಯ ಹೊಸ ತಳಿಗಳನ್ನು ಜಗತ್ತಿಗೆ ಪರಿಚಯಿಸಿದವರು. ಅವರ ಹೆಸರಿನಲ್ಲಿ ಸ್ಮಾರಕ ಸಮಿತಿ ಕಟ್ಟಿಕೊಂಡು ಅವರನ್ನು ಜಗತ್ತಿಗೆ ಪರಿಚಯಿಸಿ 27ನೇ ವರ್ಷದ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಜಗತ್ತು ತನ್ನ ಎಲ್ಲಾ ಸ್ಥಾನಮಾನಗಳನ್ನು ಮೀರಿ ಮುಂದಕ್ಕೆ ದಾಪುಗಾಲು ಇಟ್ಟಿದೆ. ಆದರೆ ಜಗತ್ತಿಗೆ ಅನ್ನವನ್ನು ನೀಡುವ ರೈತರು ಮಾತ್ರ ತಮ್ಮ ಹೆಜ್ಜೆಯನ್ನು ಹಿಂದಕ್ಕೆಇಟ್ಟಿದ್ದಾನೆ. ಇದಕ್ಕೆ ಕಾರಣ ರೈತರಿಗೆ ಅವಕಾಶವಿಲ್ಲದಿರುವುದು. ನಮ್ಮ ಸರ್ಕಾರವು ರೈತರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿ ರೈತರನ್ನು ಎತ್ತರಕ್ಕೆ ಹೊಯ್ಯಲಾಗುವುದು ಎಂದರು.
ರೈತರು ಬೆಳೆದ ಬೆಳೆಗಳು ಬರಗಾಲ ಅಥವಾ ವಿಪರೀತ ಮಳೆಯಿಂದ ಹಾನಿಗೊಳಗಾಗುತ್ತಿವೆ. ಆದ ಕಾರಣ ರೈತರು ಬೆಳೆದ ಬೆಳಗಳಿಗೆ ವಿಮೆ ಮಾಡಿಸಿ ಹಾನಿಗೊಳಗಾದ ಸಂದರ್ಭದಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯಿರಿ ಎಂದು ಹೇಳಿದರು.
ರಾಗಿ ಲಕ್ಷ್ಮಣಯ್ಯ ಅವರ ಹೆಸರಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನವೊದ್ಯಮ ಯೋಜನೆಗಳು ಹಾಗೂ ಸಂಶೋಧನಾ ಕೇಂದ್ರಗಳನ್ನು ತೆರೆಯಲು ಯೋಜಿಸಲಾಗುವುದು ಎಂದರು.
ಕೃಷಿ ವಿವಿಯ ನಿವೃತ್ತ ಸಂಶೋಧನಾ ನಿರ್ದೇಶಕರಾದ ಡಾ. ಪ್ರಭಾಕರ ಶೆಟ್ಟಿ ಟಿ.ಕೆ ರಾಗಿ ಲಕ್ಷ್ಮಣಯ್ಯ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಬೆಂಗಳೂರಿನ ಕೃಷಿ ವಿವಿಯ ಕುಲಪತಿ ಡಾ.ಎಸ್ ವಿ ಸುರೇಶ್, ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿಯ ಅಧ್ಯಕ್ಷ ಕೆ.ಬೋರಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.