ಸಂಘಟಕಿ ಗುಣಸಾಗರಿ ನಾಗರಾಜುಗೆ
ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿ
ಶ್ರೀರಂಗಪಟ್ಟಣ : ತಾಲ್ಲೂಕಿನ ಹಿರಿಯ ಲೇಖಕಿ, ಸಂಘಟಕಿ, ಹಲವು ಪ್ರಶಸ್ತಿಗಳ ದತ್ತಿ ದಾನಿ ಹಾಗೂ ಸಮಾಜ ಸೇವಕಿಯಾಗಿ ಖ್ಯಾತರಾಗಿರುವ ಎಸ್. ಗುಣಸಾಗರಿ ನಾಗರಾಜು ಅವರಿಗೆ ಮೈಸೂರಿನ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ ದೊರೆತಿದೆ.
ಕನ್ನಡದ ಮೇರು ಕಾದಂಬರಿಗಳ ರಚನಾಗಾರ್ತಿ ಗುಣಸಾಗರಿ ನಾಗರಾಜ್ ಅವರು 1956 ನವೆಂಬರ್ 18 ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನಲವತ್ತಕ್ಕೂ ಅಧಿಕ ಗಮನಾರ್ಹ ಪುಸ್ತಕಗಳನ್ನು ರಚಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಹಲವು ಮಹಿಳಾ ಸಂಘಟನೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
ಚೆಲುವು ಒಲವು, ಮನಸು ಮನಸುಗಳ ನಡುವೆ (ಕಥಾ ಸಂಕಲನ), ಸ್ನೇಹ ಸಿಂಚನ, ಜೀವನ ಜೋಕಾಲಿ, ಅಪೂರ್ವ, ಅಸ್ತಿತ್ವ, ದಯೆಯೇ ಧರ್ಮದ ಮೂಲವಯ್ಯ, ಜೀವನ್ಮುಖಿ, ಸುರಭಿ, ಕೂಸನ್ನು ಕಂಡಿರಾ (ಪ್ರಮುಖ ಕಾದಂಬರಿಗಳು), ಜೋಕು ಜೋಕಾಲಿ, ಕುಹೂ ಕುಹೂ ಕೋಗಿಲೆ, ಸುವ್ವಿ ಸುವ್ವಾಲಿ, ನಲಿಯುತ ಕಲಿಯೋಣ ಬಾ (ಶಿಶುಗೀತೆ ಸಂಕಲನ) ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಜೊತೆಗೆ ಸಂಸ್ಕೃತಿ ಸೌರಭ, ಅರಿವಿನ ಅಂಗಳದಲ್ಲಿ (ಲೇಖನಗಳ ಸಂಗ್ರಹ), ತಿರುಮಲೆ ರಾಜಮ್ಮ (ವ್ಯಕ್ತಿಪರಿಚಯ) ಪುಸ್ತಕಗಳನ್ನು ಸಹ ರಚಿಸಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಶ್ರೀರಂಗಪಟ್ಟಣ ತಾಲ್ಲೂಕು ಎರಡನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ, ಜಿಲ್ಲಾ ಯುವ ಬರಹಗಾರರ ಬಳಗದ ಡಾ.ಸಿ. ಬಂದೀಗೌಡ ಸಮಾಜಮುಖಿ ಪ್ರಶಸ್ತಿ, ತ್ರಿವೇಣಿ ಸಾಹಿತ್ಯ ಪ್ರಶಸ್ತಿಗಳು ದೊರೆತಿವೆ.
ಪ್ರಸ್ತುತ ಕರ್ನಾಟಕ ಲೇಖಕಿಯರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಗುಣಸಾಗರಿ ನಾಗರಾಜು ಅವರ ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಮೈಸೂರು ಜಿಲ್ಲಾ ಸಾಹಿತ್ಯ ಭವನದಲ್ಲಿ ನಡೆದ ಯುಗಾದಿ ಕಾವ್ಯ ಮೇಳದಲ್ಲಿ ಖ್ಯಾತ ಕವಯಿತ್ರಿ ಡಾ. ಲತಾ ರಾಜಶೇಖರ್ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಖ್ಯಾತ ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ), ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಉಪಸ್ಥಿತರಿದ್ದರು.