ಮಂಡ್ಯ ಜ್ಯಾದಳ ಟಿಕೇಟ್ ಅಸಮಾಧಾನ:ಮತ್ತೊಂದು ಸ್ವಾಭಿಮಾನಿ ಹೋರಾಟಕ್ಕೆ ಮುನ್ನುಡಿಯೆ?
ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಕಡೆ ಘಳಿಗೆಯಲ್ಲಿ ಟಿಕೇಟ್ ಬದಲಾಯಿಸಿ ತಮ್ಮ ಸ್ಪರ್ಧೆಗೆ ಅವಕಾಶ ನಿರಾಕರಿಸಿದ ಜ್ಯಾದಳ ಹೈಕಮಾಂಡ್ ವಿರುದ್ದ ಸ್ವಾಭಿಮಾನಿ ಹೋರಾಟ ನಡೆಸುವುದಾಗಿ ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಎಚ್ಚರಿಸಿದ್ದಾರೆ.ಈ ಹೋರಾಟಕ್ಕೆ ತಮ್ಮೊಂದಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಅಕಾಂಕ್ಷಿಗಳಾಗಿದ್ದ ಮುದ್ದನಘಟ್ಟ ಮಹಲಿಂಗೇಗೌಡ.ವಿಜಯಾನಂದ್ ಹಾಗೂ ತಮ್ಮ ಅಳಿಯ ಮಾಜಿ ಜಿಪಂ ಸದಸ್ಯ ಎಚ್ ಎನ್ ಯೋಗೇಶ್ ರನ್ನು ಈ ಯುದ್ದಕ್ಕೆ ಜೋಡಿಸಿಕೊಂಡಿದ್ದಾರೆ.ಜ್ಯಾದಳದ ಕುಮಾರಸ್ವಾಮಿ ಹೇಳುವಂತೆ ವಯೋಮಾನದ ಕಾರಣಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಒಮ್ಮತ ಅಭ್ಯರ್ಥಿ ಸೂಚಿಸುವಂತೆ ಹಾಲೀ ಶಾಸಕರಿಗೆ ತಿಳಿಸಲಾಗಿತ್ತು.ಆದರೆ ಒಮ್ಮತಕ್ಕೆ ಬರುವಲ್ಲಿ ವಿಫಲವಾದ್ದರಿಂದ ಎಲ್ಲವನ್ನು ಅಳೆದು ಸುರಿದು ಮನ್ ಮೂಲ್ ಅಧ್ಯಕ್ಷ ರಾಮಚಂದ್ರರನ್ನು ಅಂತಿಮವಾಗಿ ಅಭ್ಯರ್ಥಿಯಾಗಿ ಘೋಷಿಸಲಾಯಿತು ಎಂದು ಹೇಳಿದ್ದಾರೆ.ರಾಮಚಂದ್ರು ಆಯ್ಕೆ ಹಿಂದೆ ಮೇಲುಕೋಟೆ ಶಾಸಕ ಪುಟ್ಟರಾಜು ಪ್ರಭಾವ ಇದೆಯೆಂದು ಹೇಳಲಾಗುತ್ತಿದ್ದರು ಇದು ಹೊಸದೇನಲ್ಲ.ಈ ಹಿಂದೆಯು ಮಂಡ್ಯ ನಗರಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲು ಪುಟ್ಟರಾಜು ಕೈಯಾಡಿಸಿ ಕಡೆಗೆ ಅದು ರಾದ್ದಾಂತಕ್ಕೆ ಕಾರಣವಾಗಿತ್ತು.ನಂತರದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದ್ದ ಯೋಜನೆಗಳ ಹಣಕಾಸನ್ನು ಮೇಲುಕೋಟೆ ಹೊತ್ತುಕೊಂಡು ಹೋದರೆಂಬ ಆರೋಪವೂ ಇದೆ.ಅದೆಲ್ಲ ಒತ್ತಟ್ಟಿಗಿಟ್ಟು ಶಾಸಕ ಶ್ರೀನಿವಾಸ್ ಘೋಷಿಸಿರುವ ಸ್ವಾಭಿಮಾನಿ ಹೋರಾಟ ಯಾವ ಮಾದರಿಯಲ್ಲಿ ಇರಲಿದೆ ಅದು ಕಳೆದ 2018ರಲ್ಲಿ ಚಿತ್ರನಟಿ ಸುಮಲತಾ ಅಂಬರೀಶ್ ಮಾದರಿಯಾ ಹೇಗೆ ಎಂಬುದು ಕುತೂಹಲಕಾರಿಯೆ ಸರಿ.ಸದ್ಯಕ್ಕೆ ಸ್ವತಃ ಶ್ರೀನಿವಾಸ್ ಗೆ ಈ ಬಗ್ಗೆ ಯಾವ ಸ್ಪಷ್ಟತೆಯು ಇದ್ದಂತಿಲ್ಲ.ಆರಂಭದಲ್ಲಿಎಲ್ಲ ಅಕಾಂಕ್ಷಿಗಳನ್ನು ಒಗ್ಗೂಡಿಸಿ ಒಮ್ಮತದ ಅಭ್ಯರ್ಥಿ ತೀರ್ಮಾನಿಸುವಲ್ಲಿ ವಿಫಲರಾದ ಶ್ರೀನಿವಾಸ್ ಮೊನ್ನೆಯಷ್ಟೆ ತಮ್ಮ ಹೋರಾಟಕ್ಕೆ ತಮ್ಮ ಅಳಿಯ ಯೋಗೇಶ್ ಹಾಗೂ ಮಂಡ್ಯ ನಗರಸಭಾ ಅಧ್ಯಕ್ಷ ಎಚ್ ಎಸ್ ಮಂಜುರನ್ನು ಮಾತ್ರ ಸೇರ್ಪಡೆ ಮಾಡಿಕೊಂಡಿದ್ದರು.ಯಾವಾಗ ಟಿಕೇಟ್ ಕೈತಪ್ಪಿ ರಾಮಚಂದ್ರು ಪಾಲಾಯಿತೋ ಈಗಿನ ತಮ್ಮ ಹೋರಾಟಕ್ಕೆ ವಿಜಯಾನಂದ ಹಾಗೂ ಮಹಲಿಂಗೇಗೌಡ ಮುದ್ದನಘಟ್ಟರನ್ನು ಜತೆ ಮಾಡಿಕೊಂಡಿದ್ದಾರೆ.ಈ ಪೈಕಿ ಎಮ್ಮೆಲ್ಕೆ ಅಭ್ಯರ್ಥಿಯ ರೇಸಿನಲ್ಲೆ ಇರದಿದ್ದ ನಗರಸಭೆ ಅಧ್ಯಕ್ಷ ಎಚ್ ಎಸ್ ಮಂಜು ನಾಮಪತ್ರ ಸಲ್ಲಿಸದೆ ಈ ಆಟಕ್ಕೆ ನಾನಿಲ್ಲ ಎಂಬ ಸಂದೇಶ ಹೊರಡಿಸಿದ್ದಾರೆ.
ಈಗ ಕುಮಾರಸ್ವಾಮಿ ಇವರ ಒತ್ತಡಕ್ಕೆ ಒಳಗಾಗಿ ಅಭ್ಯರ್ಥಿಯನ್ನು ಬದಲಿಸುವರೆ.ಬದಲಿಸದಿದ್ದರೆ ಮೂವರ ಪೈಕಿ ಕಣದಲ್ಲಿ ಉಳಿಯುವವರು ಯಾರು ಈ ವಿಚಾರದಲ್ಲೂ ಯಾವುದೆ ಸ್ಪಷ್ಟತೆಯಿಲ್ಲ.ಪ್ರತಿಯೊಬ್ಬರಿಗೂ ತಾವು ಸ್ಪರ್ಧಿಸಲೇಬೇಕೆಂಬ ಅಕಾಂಕ್ಷೆಯಂತೂ ಇದ್ದೆ ಇರುತ್ತದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಿಂತ ಜ್ಯಾದಳದ ವರ್ಚಸ್ಸೆ ದೊಡ್ಡದು.ಕಡೇ ಪ್ರಯತ್ನವಾಗಿ ಕುಮಾರಸ್ವಾಮಿ ಕಡೆಯಿಂದ ರಾಜೀ ಸಂಧಾನ ನಡೆದರೂ ಅದನ್ನು ಮೀರಿ ಕಣದಲ್ಲಿ ಉಳಿಯುವ ಧೈರ್ಯ ತೋರಬಲ್ಲರೆ ಎಂಬುದಕ್ಕೆ ಎಪ್ರಿಲ್ 24ವರೆಗೆ ಕಾಯಬೇಕಿದೆ.
ಆದರೆ ಜ್ಯಾದಳದಲ್ಲಿನ ಈ ಗೊಂದಲಗಳು ಪಕ್ಷದ ಮತಬ್ಯಾಂಕಿಗೆ ಸಾಕಷ್ಟು ಡ್ಯಾಮೇಜಂತೂ ಮಾಡಲಿವೆ.ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಜನತಾಪರಿವಾರದ ಹಿನ್ನೆಲೆಯವರೆ ಆದ್ದರಿಂದ ಅವರು ಸಹ ಜ್ಯಾದಳದ ಮತಬುಟ್ಟಿಗೆ ಕೈ ಹಾಕಲಿದ್ದಾರೆ.ಜ್ಯಾದಳದ ಟಿಕೆಟ್ ಒಳಜಗಳಅಹಿಂದ ಮತಗಳನ್ನೆ ನೆಚ್ಚಿಕೊಂಡಿರುವ ಕಾಂಗ್ರೇಸ್ ನ ಗಣಿಗ ರವಿಕುಮಾರ್ ಹಾದಿ ಸುಗಮಗೊಳಿಸಬಹುದೇನೊ.