ಮಂಡ್ಯ ನಗರದ ಮಿಮ್ಸ್ ಅಸ್ಪತ್ರೆ ಬಿಲ್ಲಿಂಗ್ ಕೌಂಟರ್’ನಲ್ಲಿ ₹ 1.20 ಲಕ್ಷ ಹಣ ಕಳ್ಳತನವಾಗಿರುವ ಘಟನೆ ಶುಕ್ರವಾರ ತಡರಾತ್ರಿ ಜರುಗಿದ್ದು ತಡವಾಗಿ ವರದಿಯಾಗಿದೆ.
ಈ ಕುರಿತು ಭಾನುವಾರ ಮಧ್ಯಾಹ್ನ ಮಾಹಿತಿ ನೀಡಿರುವ ನಗರ ಪೂರ್ವ ಠಾಣೆ ಪೊಲೀಸರು, ದೂರು ದಾಖಲಾಗಿದ್ದು ಸೆಕ್ಯೂರಿಟಿ ಸಿಬ್ಬಂದಿಗಳ ಪೋಷಕರು ಹಣ ಪಾವತಿಸುವ ಭರವಸೆ ಹಿನ್ನೆಲೆಯಲ್ಲಿ ಎಫ್’ಐಆರ್ ದಾಖಲಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಅಂದು ಕರ್ತವ್ಯದಲ್ಲಿದ್ದ ಕಾರ್ತಿಕ್ ಹಾಗೂ ರಕ್ಷಿತ್ ಎಂಬ ಸೆಕ್ಯೂರಿಟಿ ಸಿಬ್ಬಂದಿಗಳಿಬ್ಬರ ಪೈಕಿ ತಡರಾತ್ರಿ ಒಬ್ಬರು ವಿಶ್ರಾಂತಿಗೆ ತೆರಳಿದ್ದಾರೆ. ಮತೋರ್ವ ಸಿಬ್ಬಂದಿ ಶೌಚಾಲಯಕ್ಕೆ ತೆರಳಿದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ವ್ಯಕ್ತಿಯೊಬ್ಬ ಹಣ ಲಪಟಾಯಿಸಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಿಮ್ಸ್’ಗೆ ಮುಖಭಂಗವಾಗುವ ಹಿನ್ನೆಲೆಯಲ್ಲಿ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ.
ಸೆಕ್ಯೂರಿಟಿ ಸಿಬ್ಬಂದಿಗಳಿಗೆ ಕಂಪ್ಯೂಟರ್ ಹಾಗೂ ಹಣ ಸ್ವೀಕೃತಿ ಜವಾಬ್ದಾರಿ ನೀಡಿ ಬೇಜವಾಬ್ದಾರಿ ಮೆರೆದಿರುವ ಮಿಮ್ಸ್ ಆಡಳಿತದಿಂದಾಗಿ ಈ ಘಟನೆ ನಡೆದಿದೆ ಎಂದು ಮಿಮ್ಸ್ ಸಿಬ್ಬಂದಿ ಆರೋಪಿಸಿದ್ದಾರೆ.
ಸದ್ಯ ಮಂಡ್ಯ ಮೆಡಿಕಲ್ ಕಾಲೇಜಿ ಭದ್ರತಾ ಸೇವೆಯನ್ನು ಒದಗಿಸುತ್ತಿರುವ ಕೆಎಸ್ ಎಫ್ -9 ಏಜೆನ್ಸಿಯ ವೈಫಲ್ಯ ಇದಾಗಿದ್ದು ಸದರಿ ಏಜೆನ್ಸಿ ಮಹಲಿಂಗೇಗೌಡ ಮುದ್ದನಘಟ್ಟ ಎಂಬುವವರಿಗೆ ಸೇರಿದ್ದು ಸದರಿ ಏಜೆನ್ಸಿ ನಕಲಿ ದಾಖಲೆ ಬಳಸಿ ಮಿಮ್ಸ್ ನಲ್ಲಿ ಟೆಂಡರ್ ಪಡೆದಿರುವ ಕುರಿತು ದೂರು ದಾಖಲಾಗಿದ್ದರು ಮಿಮ್ಸ್ ನಿರ್ದೇಶಕ ಮಹೇಂದ್ರ ಯಾವುದೆ ಕ್ರಮ ಕೈಗೊಳ್ಳದೆ ನಿರ್ಲಕ್ಷವಹಿಸಿದ ಬೆನ್ನಲ್ಲೆ ಕಳ್ಳತನದ ಘಟನೆ ವರದಿಯಾಗಿದೆ.
ಸದ್ಯ ಈ ಪ್ರಕರಣದಲ್ಲಿ ಹೊರಗುತ್ತಿಗೆ ಏಜೆನ್ಸಿಯನ್ನು ರಕ್ಷಿಸುವ ಸಲುವಾಗಿ ಠಾಣೆಯಲ್ಲಿ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಲಾಗಿದೆ.ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಕರುನಾಡ ಸೇವಕರು ಸಂಘದ ನಗರಾಧ್ಯಕ್ಷ ಎಂ.ಎನ್ ಚಂದ್ರು ಆರೋಪಿಸಿದ್ದಾರೆ