ಜಿಲ್ಲೆಯ ರೈತರ ಆರ್ಥಿಕ ಮಟ್ಟ ಸುಧಾರಿಸಲು ಹಾಗೂ ಹೆಚ್ಚಿನ ಮಾರುಕಟ್ಟೆ ಒದಗಿಸಲು ಹೆಚ್ಚು ಸಿರಿಧಾನ್ಯ ಮೇಳ ಹಾಗೂ ಬೆಲ್ಲದ ಪರಿಷೆ ಆಯೋಜಿಸುವಂತೆ ಸಂಸದರಾದ ಸುಮಲತಾ ಅಂಬರೀಶ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಡ್ಯ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ 7 ತಾಲ್ಲೂಕು ಬರ ಪೀಡಿತವಾಗಿದ್ದು, ಸಾರ್ವಜನಿಕರು ಹಾಗೂ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು ಎಂದರು.
ಅನಾಧಿಕೃತ ಗಣಿಗಾರಿಕೆ ತಡೆಗಟ್ಟಿ: ಕೊಕ್ಕರೆ ಬೆಳ್ಳೂರು ಹೆಸರುವಾಸಿ ಪ್ರವಾಸಿ ತಾಣವಾಗಿದ್ದು,ಇಲ್ಲಿ ಅಕ್ರಮವಾಗಿ ನಡೆಯುವ ಮರಳು ಗಣಿಗಾರಿಕೆ ನಡೆಯದಂತೆ ಕ್ರಮವಹಿಸಬೇಕು. ಶ್ರೀರಂಗಪಟ್ಟಣದ ಅರಣ್ಯ ವ್ಯಾಪ್ತಿಯಲ್ಲೂ ಸಹ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬರುತ್ತಿದೆ ಎಂದರು.ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಗಣಿಗಾರಿಕೆ ಇಲಾಖೆ ಅವರು ತಂಡ ರಚಿಸಿಕೊಂಡು ನಿರಮತರವಾಗಿ ಪರಿಶೀಲನೆ ನಡೆಸುವಂತೆ ತಿಳಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದರೆ ಕಾನೂನು ರೀತಿ ಕ್ರಮ ವಹಿಸಿ ಎಂದರು.
ಅರ್ಹ ಫಲಾನುಭವಿಗಳನ್ನು ಸ್ಥಳಾಂತರಿಸಿ: ತಮಿಳು ಕಾಲೋನಿ ಕೊಳಚೆ ಪ್ರದೇಶದ ನಿವಾಸಿಗಳನ್ನು ಚಿಕ್ಕ ಮಂಡ್ಯದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ 576:ಮನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರಿತಿಸಿ ಸ್ಥಳಾಂತರ ಮಾಡಲು ಕ್ರಮ ಕೃಗೊಳ್ಳುವ ಬಗ್ಗೆ ಚರ್ಚಿಸಿದಾಗ ಕರ್ನಾಟಕ ಕೊಳಗೇರಿ ಮಂಡಳಿ ಅಧಿಕಾರಿಗಳು ಮಾತನಾಡಿ 100 ಮನೆಗಳಿಗೆ ಎಲ್ಲಾ ಮೂಲಭೂತ ವ್ಯವಸ್ಥೆಯೊಂದಿಗೆ ಸಿದ್ದವಾಗಿದ್ದು ಇನ್ನೂ 10 ದಿನದೊಳಗಾಗಿ ಇನ್ನುಳಿದ ಮನೆಗಳು ಸಹ ಸಿದ್ಧವಾಗಲಿದೆ ಎಂದರು. ಜಿಲ್ಲಾಧಿಕಾರಿಗಳು ಮಾತನಾಡಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಸ್ಥಳಾಂತರ ಮಾಡಿ ಎಂದರು.
ಸಂಸದರು ಬೆಂಗಳೂರು- ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ನಿರ್ಮಾಣವಾಗಿರುವ ಹಂಪ್ ಗಳು ವೈಜ್ಞಾನಿಕವಾಗಿ ನಿರ್ಮಾಣವಾಗಿಲ್ಲ ಅವುಗಳನ್ನು ತೆರವುಗೊಳಿಸಬೇಕು ಇದರ ಬಗ್ಗೆ ಚರ್ಚಿಸಿದಾಗ ಇದರ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಈ ಬಗ್ಗೆ NHAI ವಿಭಾಗೀಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಈ ಸಂದರ್ಭದಲ್ಲಿ ಅಂಡರ್ ಪಾಸ್ ಗಳ ನಿರ್ಮಾಣ ಮಾಡುವುದು ಕಷ್ಟಕರವಾಗಿರುತ್ತದೆ. ಇದಕ್ಕೆ ಪರ್ಯಾಯವಾಗಿ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ವಹಿಸಲು NHAI ಚಿಂತನೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.