Tuesday, July 1, 2025
spot_img

ಆಡಳಿತದಲ್ಲಿ ಕನ್ನಡ ಜಾರಿಗೆ ಮುಖ್ಯ ಕಾರ್ಯದರ್ಶಿ ಸುತ್ತೋಲೆ

ಸರ್ಕಾರದ ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಬಳಸುವಂತೆ ಸರ್ಕಾರದ ಸುತ್ತೋಲೆ

ಬೆಂಗಳೂರು : ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಇರತಕ್ಕದ್ದೆಂದು ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ 1963ರಲ್ಲಿ ತಿಳಿಸಲಾಗಿದೆ. ಕನ್ನಡದಲ್ಲಿ ಬರುವ ಅರ್ಜಿ ಮತ್ತು ಪತ್ರಗಳಿಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಉತ್ತರಿಸಬೇಕು. ಸರ್ಕಾರಿ ಕಛೇರಿಗಳ ನಾಮಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು.

ವಿಧಾನ ಮಂಡಲದ ಕಾರ್ಯಕಲಾಪಗಳು, ಪತ್ರ ವ್ಯವಹಾರ, ಗಮನಸೆಳೆಯುವ ಸೂಚನೆ ಇತ್ಯಾದಿಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಸಲ್ಲಿಸಲು ತಿಳಿಸಲಾಗಿದೆ. ನೇಮಕಾತಿ, ವರ್ಗಾವಣೆ ಮತ್ತು ರಜೆ ಮಂಜೂರಾತಿ ಇತರೆ ಎಲ್ಲಾ ಸರ್ಕಾರದ ಆದೇಶಗಳನ್ನು ಕನ್ನಡದಲ್ಲಿ ಹೊರಡಿಸಲು ಸ್ಪಷ್ಟವಾಗಿ ಸೂಚನೆಗಳನ್ನು ನೀಡಲಾಗಿದೆ. ಕಛೇರಿಗಳಿಗೆ ಒದಗಿಸಿರುವ ಆಂಗ್ಲ ಭಾಷಾ ನಮೂನೆ, ದಾಖಲೆ ಪುಸ್ತಕ ಮುಂತಾದವುಗಳನ್ನು ಕನ್ನಡದಲ್ಲಿ ಭರ್ತಿ ಮಾಡುವಂತೆ, ಆಂತರಿಕ ಪತ್ರ ವ್ಯವಹಾರ, ಕಡತದ ಟಿಪ್ಪಣಿ ಕನ್ನಡದಲ್ಲಿಯೇ ಇರುವಂತೆ ತಿಳಿಸಲಾಗಿದೆ. ಸಭಾ ಸೂಚನೆ, ಕಾರ್ಯಸೂಚಿ, ಸಂಕ್ಷಿಪ್ತ ಟಿಪ್ಪಣಿ ಹಾಗೂ ನಡವಳಿಗಳನ್ನು ಕನ್ನಡದಲ್ಲಿ ತಯಾರಿಸಿ ಸರ್ಕಾರದ ಭಾಷಾ ನೀತಿಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದನ್ನು ಈಗಾಗಲೇ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕೇಂದ್ರ ಸರ್ಕಾರ, ಹೊರ ರಾಜ್ಯಗಳು ಮತ್ತು ನ್ಯಾಯಾಲಯಗಳ ಪತ್ರ ವ್ಯವಹಾರಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರುವಂತೆ ಸೂಚಿಸಲಾಗಿದೆ.

ಸರ್ಕಾರಿ ಪತ್ರ ವ್ಯವಹಾರಗಳಲ್ಲಿ ಕಡತದ ಟಿಪ್ಪಣಿಗಳನ್ನು ಕನ್ನಡದಲ್ಲಿ ಮಾಡುವಂತೆ ಸೂಚಿಸಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದಿರು ವುದನ್ನು ಗಮನಿಸಿದ ಸನ್ಮಾನ್ಯ ಮುಖ್ಯಮಂತ್ರಿಯವರು ಕಡತದಲ್ಲಿನ ಟಿಪ್ಪಣಿ ಮತ್ತು ಪತ್ರ ವ್ಯವಹಾರಗಳು ಕನ್ನಡದಲ್ಲಿ ಬಾರದಿದ್ದ ಪಕ್ಷದಲ್ಲಿ ಅಂತಹ ಕಡತಗಳನ್ನು ಹಿಂದಿರುಗಿಸಿ ಸೂಕ್ತ ಸಮಜಾಯಿಷಿ ಪಡೆಯಲು ನಿರ್ದೇಶನ ನೀಡಿರುತ್ತಾರೆ. ಆಡಳಿತದಲ್ಲಿ ಭಾಷಾ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಹಾಗೂ ಎಲ್ಲಾ ಹಂತಗಳಲ್ಲಿ ಜಾರಿಗೊಳಿಸುವುದು ಎಲ್ಲ ಅಧಿಕಾರಿಗಳ ನೌಕರರ ಕರ್ತವ್ಯವಾಗಿದೆ. ಆದುದರಿಂದ ಈಗಾಗಲೇ ಹೊರಡಿಸಿರುವ ಸರ್ಕಾರಿ ಆದೇಶಗಳಲ್ಲಿ ನೀಡಿರುವ ಸೂಚನೆಗಳನ್ನು ಸರಕಾರ/ನಿಗಮ/ಮಂಡಳಿ/ಸ್ಥಳೀಯ ಸಂಸ್ಥೆಗಳ/ ವಿಶ್ವವಿದ್ಯಾಲಯಗಳ/ ಅನುದಾನಿತ ಸಂಘ-ಸಂಸ್ಥೆಗಳ ಎಲ್ಲಾ ಅಧಿಕಾರಿ/ ನೌಕರರು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಮತ್ತೊಮ್ಮೆ ಪುನರುಚ್ಚರಿಸಲಾಗಿದೆ.

ಇತ್ತೀಚೆಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೆಡಿಪಿ ಸಭೆಯ ಕಾರ್ಯಸೂಚಿಯನ್ನು ಆಂಗ್ಲ ಭಾಷೆಯಲ್ಲಿ ಹೊರಡಿಸಿರುತ್ತಾರೆಂದು ಹಾಗೂ ವಿಶೇಷವಾಗಿ ಕಾಮಗಾರಿ ಇಲಾಖೆಗಳು ತಮ್ಮೆಲ್ಲ ಮಾಹಿತಿಗಳನ್ನು ಆಂಗ್ಲ ಭಾಷೆಯಲ್ಲಿ ಮಂಡಿಸುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಗಳು ಅನುಮೋದಿಸುತ್ತಿದ್ದಾರೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ವರದಿ ಮಾಡಿರುತ್ತಾರೆ.

ಕನ್ನಡ ಭಾಷೆಯಲ್ಲಿಯೇ ಆಡಳಿತ ನಡೆಸುವ ಬಗ್ಗೆ ಈಗಾಗಲೇ ಹಲವಾರು ಬಾರಿ ಸೂಚನೆಗಳನ್ನು ನೀಡಿ ಸುತ್ತೋಲೆಗಳನ್ನು ಹೊರಡಿಸಿದ್ದರೂ ಸಹ ಪಾಲನೆಯಾಗದೇ ಇರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವರದಿ ಮಾಡುತ್ತಲೇ ಬಂದಿದೆ.

ಈ ಹಿನ್ನೆಲೆಯಲ್ಲಿ ಮೇಲ್ಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಸದರಿ ಸೂಚನೆಗಳನ್ನು ಉಲ್ಲಂಘಿಸಿದವರ ವಿರುದ್ಧ ವೈಯಕ್ತಿಕವಾಗಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮತ್ತೊಮ್ಮೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳು,
ಎಲ್ಲಾ ಇಲಾಖಾ ಮುಖ್ಯಸ್ಥರುಗಳು , ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು‌ ಮತ್ತು ಎಲ್ಲಾ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು‌ ಜೂನ್ 24 ರ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!