02/12/2025
ಕಾಫಿ ತೋಟದಲ್ಲಿ ಕಾಣೆಯಾಗಿದ್ದ 2 ವರ್ಷದ ಮಗುವಿನ ಸುಳಿವು ನೀಡಿದ ಸಾಕುನಾಯಿಗೆ ಮಾಲೀಕರಿಂದ ಅಭಿನಂದನೆ
ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಕೊಂಗಣ ಗ್ರಾಮದ ಕಾಫಿ ತೋಟದಲ್ಲಿ ಶನಿವಾರ ಮಧ್ಯಾಹ್ನ ನಾಪತ್ತೆಯಾಗಿದ್ದ 2 ವರ್ಷದ ಹೆಣ್ಣು ಮಗು, ತೋಟದ ಮಾಲೀಕರ ಸಾಕು ನಾಯಿಯ ನೆರವಿನಿಂದ ಭಾನುವಾರ ಪತ್ತೆಯಾಗಿದೆ. ಸ್ವಲ್ಪವೂ ಅಳದೇ ಇಡೀ ರಾತ್ರಿ ಒಂದೂವರೆ ಕಿ.ಮೀ ಕ್ರಮಿಸಿದ್ದ ಮಗುವನ್ನು ಕಂಡ ಹೆತ್ತವರಲ್ಲಿ ನೆಮ್ಮದಿ ಮೂಡಿದೆ.
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯಿಂದ ವಾರದ ಹಿಂದಷ್ಟೇ ಗ್ರಾಮದ ಕೆ.ಕೆ.ಗಣಪತಿ ಅವರ ಕಾಫಿ ತೋಟಕ್ಕೆ ಕೆಲಸಕ್ಕೆಂದು ಜೇನುಕುರುಬ ಸಮುದಾಯಕ್ಕೆ ಸೇರಿದ ಕೆಲವರು ಬಂದಿದ್ದರು. ಶನಿವಾರ ಬೆಳಿಗ್ಗೆಯಿಂದ ಕೆಲಸ ಮಾಡಿದ್ದ ಅವರು ಮಧ್ಯಾಹ್ನ ತೋಟದಲ್ಲಿ ನೆಟ್ವರ್ಕ್ ಸಿಗುತ್ತಿದ್ದ ಪ್ರದೇಶದಲ್ಲಿ ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದರು. ಆ ವೇಳೆ ಮಗು ಶೌಚಕ್ಕೆಂದು ಕಾಫಿಗಿಡಗಳ ಮಧ್ಯೆ ತೆರಳಿತ್ತು. ಆದರೆ, ವಾಪಸ್ ಬರಲು ದಾರಿ ಗೊತ್ತಾಗದೇ ಮುಂದಕ್ಕೆ ಹೋಗಿತ್ತು. ಮಗು ಬಾರದೆ ಆತಂಕಗೊಂಡ ಕೆಲಸಗಾರರು ಹುಲಿ ಕೊಂದಿರಬಹುದೆಂದು ಶಂಕಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಪೊಲೀಸರಿಗೂ ದೂರು ನೀಡಿದ್ದರು.
40ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರೂ ಸೇರಿ 70ರಿಂದ 80 ಮಂದಿ ನಿರಂತರವಾಗಿ ಹುಡುಕಾಡಿದರೂ ಮಗುವಿನ ಸುಳಿವು ಸಿಕ್ಕಿರಲಿಲ್ಲ. ಭಾನುವಾರ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿದ್ದ ಅನಿಲ್ ಎಂಬುವವರ ತೋಟದಲ್ಲಿ ಅವರ ಸಾಕುನಾಯಿ ‘ಓರಿಯೋ’ ಎತ್ತರದ ಪ್ರದೇಶದಲ್ಲಿ ಕಾಫಿ ಗಿಡಗಳ ಮಧ್ಯೆ ಇದ್ದ ಮಗುವನ್ನು ಕಂಡು ಬೊಗಳಿತ್ತು. ನಂತರ ಅನಿಲ್ ಹಾಗೂ ಸ್ಥಳೀಯರು ಮಗವನ್ನು ರಕ್ಷಿಸಿ ಪೋಷಕರಿಗೆ ತಲುಪಿಸಿದರು.
‘ಮಗು ಸ್ವಲ್ಪವೂ ಅಳದ ಕಾರಣ ಹುಡುಕಾಡುವುದು ಕಷ್ಟಕರವಾಗಿತ್ತು. ಅತ್ತಿದ್ದರೆ ಬೇಗನೇ ಸಿಗುತ್ತಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.


