ಶಿವಮೊಗ್ಗ :ಸೆ.೨೯. ನಗರದ ಸಿಮ್ಸ್ ಮೆಗ್ಗಾನ್ ಬೋಧನಾ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಏಜೆನ್ಸಿ, (ಕೆಎಸ್‌ಎಫ್ ೯)ಕಾರ್ಪೋರೇಟ್ ಸರ್ವೀಸ್ ಏಜೆನ್ಸಿ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಗುತ್ತಿಗೆಯನ್ನು ರದ್ದುಮಾಡಬೇಕು. ಮತ್ತು ಗ್ರಾಮಾಂತರ ಶಾಸಕಿಯವರನ್ನು ಅಪಮಾನಿಸಿದ ನೌಕರನನ್ನು ವಜಾಮಾಡಬೇಕೆಂದು ಆಗ್ರಹಿಸಿ, ಶಿವಮೊಗ್ಗ ಗ್ರಾಮಾಂತರ ಹಾಗೂ ಜಿಲ್ಲಾ ಜನತಾದಳವತಿಯಿಂದ ಮೆಗ್ಗಾನ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ಸಿಮ್ಸ್ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಮೆಗ್ಗಾನ್ ಆಸ್ಪತ್ರೆ ಮತ್ತು ಸಿಮ್ಸ್ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಭದ್ರತಾ ಸೇವೆ ಒದಗಿಸಲು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಕೆಎಸ್‌ಎಫ್ ೯ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಕೆಎಸ್ ಎಫ್ -೯ ಏಜೆನ್ಸಿಯು ಸತೀಶ್ ಎಂಬ ವ್ಯವಸ್ಥಾಪಕರನ್ನು ನೇಮಕ ಮಾಡಿಕೊಂಡಿದೆ.
ಸದರಿ ವ್ಯವಸ್ಥಾಪಕ ಭದ್ರತಾ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ. ಸೆ.೨೭ರ ಮಧ್ಯಾಹ್ನ ಶಾಸಕಿ ಶಾರದಾಪೂರ್‍ಯಾನಾಯ್ಕರವರು ಸತೀಶ್‌ರವರಿಗೆ ಕರೆಮಾಡಿ, ಸೆಕ್ಯೂರಿಟಿ ಗಾರ್ಡ್‌ಗಳಿಗೆ ಅನಾವಶ್ಯಕವಾಗಿ ತೊಂದರೆ ಕೊಡುತ್ತಿರುವ ಬಗ್ಗೆ ವಿಚಾರಿಸಿದ್ದಾರೆ. ಶಾಸಕಿ ಎಂದು ಗೌರವ ಕೊಡದೆ ವ್ಯವಸ್ಥಾಪಕ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಅನಾವಶ್ಯಕವಾಗಿ ಜಾತಿನಿಂದನೆಯನ್ನು ಮಾಡಿರುವುದರಿಂದ ಸದರಿ ಏಜೆನ್ಸಿ ಹಾಗೂ ಅದರ ವ್ಯವಸ್ಥಾಪಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಿಮ್ಸ್‌ನಿಂದ ಅವರ ಗುತ್ತಿಗೆಯನ್ನು ರದ್ದುಪಡಿಸಬೇಕು ಅಲ್ಲಿಯವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಆರಂಭಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಿಮ್ಸ್ ನಿರ್ದೇಶಕ ಡಾ|| ವಿರೂಪಾಕ್ಷಪ್ಪ, ಜಿಲ್ಲಾ ಸರ್ಜನ್ ಸಿದ್ಧನಗೌಡ ಪಾಟೀಲ್‌ರವರು, ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಸತೀಶ್‌ರವರು ಹಾಸನಕ್ಕೆ ಕಾರ್ಯನಿಮಿತ್ತ ಹೋಗಿದ್ದಾರೆ. ಅವರು ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಬಗ್ಗೆ ಸಿಮ್ಸ್‌ನಿಂದ ಲಿಖಿತ ಪತ್ರ ಪಡೆದ ಮೇಲೆ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಜೆಡಿಎಸ್ ಮುಖಂಡರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕೂಡ ಸತೀಶ್ ಹಾಗೂ ಗುತ್ತಿಗೆ ಕಂಪನಿ ಮೇಲೆ ಜಾತಿ ನಿಂದನೆ ದೂರನ್ನು ದಾಖಲಿಸುವುದಾಗಿ ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಗೀತಾ ಸತೀಶ್, ಗಂಧದ ಮನೆ ನರಸಿಂಹ, ಕಾಂತ್‌ರಾಜ್, ನಿಖಿಲ್, ಮಧು, ಸಂಗಯ್ಯ, ತ್ಯಾಗರಾಜ್, ಮಹೇಶ್ ಸೇರಿದಂತೆ ಶಿವಮೊಗ್ಗ ಗ್ರಾಮಾಂತರದ ಮುಖಂಡರು ಉಪಸ್ಥಿತರಿದ್ದರು.