ಮಂಡ್ಯ: ಜಿ.ಪಂ ಆವರಣದಿಂದ ೬೦ ಟನ್ ಹಳೆ ಕಬ್ಬಿಣ ಸಾಗಾಣೆ ಸಂಬಂಧ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಗಮನ ಹರಿಸದೆ ಇದ್ದು, ಈ ಸಂಬಂಧ ಸೆ. 2ರಂದು ಬಹಿರಂಗ ಚರ್ಚೆಗೆ ಆಗಮಿಸುವಂತೆ ರೈತಸಂಘದ ಮುಖಂಡ ಅಣ್ಣಯ್ಯ ಸವಾಲೆಸೆದರು.
ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು ೬೦ ಟನ್ ಹಳೆ ಕಬ್ಬಿಣವನ್ನು ಅಕ್ರಮವಾಗಿ ಸಾಗಾಟ ಮಾಡಲಾಗಿದ್ದು ಇದರಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್.ನಂದಿನಿ ಅವರ ಪಾತ್ರವಿದೆ ಎಂದು ಗಂಭೀರ ಆರೋಪ ಮಾಡಿದರು.
ಇದನ್ನು ಖಂಡಿಸಿ ರೈತ, ದಲಿತ, ಕನ್ನಡಪರ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕಳೆದ ೧೬ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಂಸದ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲೆಯ ೭ ಶಾಸಕರು, ೩ ವಿಧಾನ ಪರಿಷತ್ ಸದಸ್ಯರು ಯಾರೂ ಸೌಜನ್ಯಕ್ಕಾದರೂ ಸ್ಥಳಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. ‘ನಾವೇ ಬೇರೆಡೆ ಸಾಗಿಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿರುವ ವಿಡಿಯೋ ಹರಿದಾಡುತ್ತಿದೆ. ಮಾರ್ಚ್ ೧೧ ರ ಮಧ್ಯಾಹ್ನ ೧ ಗಂಟೆ ಸುಮಾರಿಗೆ ಸಾಗಾಟ ಮಾಡಲಾಗಿದೆ. ಅಲ್ಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಬೇಕು. ಹಣ ಯಾವ ಅಕೌಂಟಿಗೆ ಹೋಗಿದೆ? ಇದನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ.ಸಿಇಒ ರವರಿಗೆ ಈ ಬಗ್ಗೆ ಬದ್ಧತೆ ಇರಬೇಕು.ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಸೆ.೨ ರಂದು ಮಂಡ್ಯ ಜಿ.ಪಂ ಆವರಣದ ಪ್ರತಿಭಟನಾ ಸ್ಥಳದಲ್ಲೇ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿದ್ದೇವೆ. ಚರ್ಚೆಯಲ್ಲಿ ನಮ್ಮ ತಪ್ಪಿದ್ದರೆ ನಾವು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇವೆ. ಅಧಿಕಾರಿಗಳ ತಪ್ಪಿದ್ದರೆ ಕಾನೂನು ರೀತಿಯಲ್ಲಿ ಶಿಕ್ಷೆಗೆ ಒಳಪಡಬೇಕು” ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ದಸಂಸ ಸಂಚಾಲಕ ದೇವರಾಜ್, ಜನಶಕ್ತಿ ಮುಖಂಡ ಸಿದ್ದರಾಜು, ಸಾಮಾಜಿಕ ಕಾರ್ಯಕರ್ತ ಸಾಗರ್, ರೈತ ಸಂಘದ ತಾಲೂಕು ಕಾರ್ಯದರ್ಶಿ ಆನಂದ್ ಕುಮಾರ್, ಕೆಆರ್ಎಸ್ ಪಾರ್ಟಿಯ ಪ್ರಮೋದ್ ಉಪಸ್ಥಿತರಿದ್ದರು.


