ಮಂಡ್ಯ: ‘ಮಿಮ್ಸ್ನ ಮಕ್ಕಳ ಪುನಶ್ಚೇತನ ಘಟಕ, ಎನ್ಆರ್ಸಿ ವಾರ್ಡ್, ಅಪೌಷ್ಟಿಕತೆಯಿಂದ ಬಳಲು ಮಕ್ಕಳ ಆರೈಕೆ ಘಟಕ ಸೇರಿದಂತೆ ಹಲವು ಘಟಕಗಳ ಬಗ್ಗೆ ಇಲ್ಲಿನ ಸಮಸ್ಯೆಗಳ ಕುರಿತಂತೆ ಬಗೆಹರಿಸಲು ಮೂರು ದಿನದೊಳಗೆ ಅಧಿಕಾರಿಗಳು ಸರಿಯಾದ ಮಾಹಿತಿಯೊಡನೆ ವರದಿ ನೀಡಬೇಕು. ತಪ್ಪಿದರೆ ಕ್ರಮ ವಹಿಸಲಾಗುವುದು’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಎಚ್ಚರಿಕೆ ನೀಡಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲಾಸ್ಪತ್ರೆಯಲ್ಲಿ ಎನ್ಆರ್ಸಿ ವಾರ್ಡ್ ಸರಿಯಾಗಿ ವ್ಯವಸ್ಥೆ ಮಾಡಿದ್ದಾರೆ, ಆದರೆ ದಾಖಲು ಮಾಡುವ ಮಕ್ಕಳ ಸಂಖ್ಯೆ ಮಾತ್ರ ಇಲ್ಲ. ಬರಿ ಒಪಿಡಿ ಮಕ್ಕಳ ಕುರಿತಂತೆ ಎನ್ಆರ್ಸಿ ನಿಟ್ಟಿನಲ್ಲಿ ಮಾಡಿದ್ದಾರೆ. ತೀರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಆರೈಕೆಗಾಗಿ ಇರುವ ವ್ಯವಸ್ಥೆಯಿದೆ. ಆದರೆ ಇಲ್ಲಿ ಅದರ ಬಗ್ಗೆ ಗಮನ ಹರಿಸಿಲ್ಲ. ಇದರಿಂದ ಅಧಿಕಾರಿಗಳಿಗೆ ಮಾಹಿತಿ ಕೊರತೆ ಇರುವುದು ಕಂಡು ಬಂದಿದೆ’ ಎಂದರು.
‘ಜಿಲ್ಲಾಸ್ಪತ್ರೆಯಲ್ಲಿ ಇಂತಹ ಸಮಸ್ಯೆಗಳನ್ನು ಬಗೆಹರಿಸಿ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ವ್ಯವಹಾರ ಸೇರಿದಂತೆ ಅಗತ್ಯ ಮಾಹಿತಿ ಪಡೆದು ಸರಿಪಡಿಸಿಕೊಳ್ಳುವಂತೆ ತಿಳಿಸಿದ್ದೇನೆ. ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿರುವವರು 37(ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ), ಎನ್ಆರ್ಸಿ(ಪೌಷ್ಟಿಕ ಪುನಶ್ಚೇತನ ಕೇಂದ್ರ) 31 ಮಕ್ಕಳು ಜಿಲ್ಲೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಆಧಾರದ ಮೇಲೆ ವೈದ್ಯೋಪಚಾರ ಮಾಡುವಂತೆ ತಿಳಿಸಿದ್ದೇನೆ’ ಎಂದು ಹೇಳಿದರು.
‘ಮಕ್ಕಳಿಗೆ ಹಾಗೂ ತಾಯಂದಿರ ಆರೈಕೆಯು ಈ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ಜೊತೆಗೆ ಇಲ್ಲಿರುವ ನ್ಯೂನತೆಯನ್ನು ಸರಿ ಪಡಿಸಿಕೊಳ್ಳುವಂತೆ ಇಲ್ಲಿನ ಮುಖ್ಯಾಧಿಕಾರಿಗಳಿಗೆ ತಿಳಿಸಿದ್ದೇನೆ. ಮೂರು ದಿನಗಳಲ್ಲಿ ಏನೆಲ್ಲಾ ಕ್ರಮ ತೆಗೆದುಕೊಂಡರು ಎಂಬುದನ್ನು ವರದಿ ನೀಡುವಂತೆ ತಿಳಿಸಿದ್ದೇನೆ. ತಪ್ಪಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆಯೋಗದ ಸದಸ್ಯ ತಿಪ್ಪೇಸ್ವಾಮಿ, ಕಾರ್ಯದರ್ಶಿ ಇಂದ್ರಮ್ಮ, ಉಪ ಕಾರ್ಯದರ್ಶಿ ಶಶಿಧರ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರಶ್ನಿ, ರಕ್ಷಣಾಧಿಕಾರಿ ರಾಜೇಂದ್ರ, ರವಿಶಂಕರ್ ಇದ್ದರು.


