ಟ್ರಾಮಾಕೇರ್ ಓಕೆ..ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ ಎಲ್ಲಿ?
ಮಂಡ್ಯದಲ್ಲಿ ಟ್ರಾಮಾಕೇರ್ ಚಿಕಿತ್ಸಾ ಕೇಂದ್ರ ಹಾಗೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲು ಮೆಡಿಕಲ್ ಕಾಲೇಜಿಗೆ ಸೇರಿದ ಸ್ಥಳವನ್ನು ಒತ್ತುವರಿ ಮಾಡಿಕೊಂಡಿರುವ ತಮಿಳು ಕಾಲೋನಿ ಸೇರಿದಂತೆ ಅಗತ್ಯ ಸ್ಥಳ ನೀಡುವಂತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಾಡಿದ ಕೂಗಿಗೆ ಶಾಸಕ ಗಣಿಗ ರವಿಕುಮಾರ್ ತಕ್ಷಣವೆ ಪ್ರತಿಕ್ರಿಯಸಿದ್ದಾರೆ.
ತಮಿಳು ಕಾಲೋನಿ ತೆರವು ವಿಷಯ ನ್ಯಾಯಾಲಯದಲ್ಲಿದ್ದು ತಕ್ಷಣಕ್ಕೆ ಮಂಡ್ಯ ಮೆಡಿಕಲ್ ಕಾಲೇಜು ಎದುರಿನ ಡಿಎಚ್ ಓ ಕಚೇರಿಯನ್ನು ತೆರವುಗೊಳಿಸಿ ಅಲ್ಲಿರುವ ಎರಡು ಎಕರೆ ವಿಸ್ತೀರ್ಣದಲ್ಲಿ ಟ್ರಾಮಾಕೇರ್ ನಿರ್ಮಿಸುವಂತೆ ಹೇಳಿಕೆ ನೀಡಿದ್ದಾರೆ.
ಹಾಲೀ ಇರುವ ಡಿಎಚ್ ಓ ಕಚೇರಿ ನಗರದಿಂದ ಆಚೆಗೆ ಕೊಂಡೊಯ್ಯಬಹುದಾದರೂ ಬಹುಮಹಡಿಯಲ್ಲಿ ಟ್ರಾಮಾಕೇರ್ ನಿರ್ಮಿಸುವುದು ಸಾಧ್ಯವಾಗುವುದಾದರೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಅಗತ್ಯ ಭೂಮಿ ನೀಡುವ ವಿಷಯ ಬಾಕೀಯಾಗೆ ಉಳಿದಿದೆ.
ರಾಜ್ಯ ಸರಕಾರ ಮೆಡಿಕಲ್ ಕಾಲೇಜು ಒತ್ತುವರಿ ತೆರವುಗೊಳಿಸಿ ವಿಸ್ತಾರವಾದ ಆರೋಗ್ಯ ವ್ಯವಸ್ಥೆ ಒದಗಿಸುವಲ್ಲಿ ಅಗತ್ಯ ರಾಜಕೀಯ ಇಚ್ಚಾಶಕ್ತಿ ಇಲ್ಲದಿರುವುದೆ ಈ ಎಲ್ಲ ಸಮಸ್ಯೆಗೆ ಕಾರಣ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ.
ಅಗತ್ಯ ಸರಕಾರಿ ಭೂಮಿ ಮೆಡಿಕಲ್ ಕಾಲೇಜು ಬಳಿಯೆ ಇದ್ದರು ಅದಕ್ಕೆ ಬೇಕಾದ ಅಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆಸಿ ಒತ್ತುವರಿ ತೆರವುಗೊಳಿಸುವಲ್ಲಿ ಕಳೆದ ಎರಡುವರೆ ವರ್ಷಗಳಿಂದ ರಾಜ್ಯ ಸರಕಾರಕ್ಕೆ ಸಾಧ್ಯವಾಗಿಲ್ಲ.
ಇದರ ಪರಿಣಾಮ ಮಂಡ್ಯ ಜಿಲ್ಲೆಯ ಜನರು ಅಗತ್ಯ ಅರೋಗ್ಯ ಸೇವೆಗಾಗಿ ಬೆಂಗಳೂರು ಮೈಸೂರು ಅಲೆಯುವಂತಾಗಿದೆ.
ಇದಲ್ಲದೆ ಮಿಮ್ಸ್ ನ ಕಿಷ್ಕಿಂದ ವಾತಾವರಣದಲ್ಲಿ ಮಹಡಿಯ ಮೇಲೆ ಮಹಡಿಗಳು ನಿರ್ಮಾಣವಾಗುತ್ತಿದ್ದು ಒಂದು ಮೆಡಿಕಲ್ ಕಾಲೇಜು ಕ್ಯಾಂಪಸ್ಸಿಗೆ ಇರಬೇಕಾದ ಎಲ್ಲ ಲಕ್ಷಣಗಳನ್ನು ಮೆಡಿಕಲ್ ಕಾಲೇಜು ಕಳೆದುಕೊಂಡಿದೆ.
ಮಿಮ್ಸ್ ವಿದ್ಯಾರ್ಥಿಗಳು ಸಹ ಈ ಕುರಿತು ಅನಗತ್ಯ ಕಿರುಕುಳ ಅನುಭವಿಸುತ್ತಿದ್ದಾರೆ.ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಅಗತ್ಯ ನಿರ್ಧಾರ ತೆಗೆದುಕೊಳ್ಳದೆ ಒತ್ತುವರಿ ಸಮಸ್ಯೆಯಿಂದಾಗಿ ಮಂಡ್ಯ ಜಿಲ್ಲೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕನಸಾಗಿಯೆ ಉಳಿವ ಸಾಧ್ಯತೆ ಹೆಚ್ಚಿದೆ.ಇನ್ನಾದರೂ ರಾಜ್ಯ ಸರ್ಕಾರ ಅಗತ್ಯ ಭೂಮಿ ನೀಡಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಬೇಕಿದೆ.ರಾಜ್ಯ ಸರ್ಕಾರ ಮತ್ತು ಜಿಲ್ಲೆಯ ಸಚಿವರು ಶಾಸಕರು ಒಮ್ಮತವಾಗಿ ರಾಜಕೀಯ ಇಚ್ಚಾಶಕ್ತಿ ತೋರಿದರೆ ಮೆಡಿಕಲ್ ಕಾಲೇಜು ಒತ್ತುವರಿ ತೆರವು ಕಷ್ಟದ ವಿಷಯವೇನಲ್ಲ.ಆದರೆ ಅಭಿವೃದ್ದಿ ಬಗೆಗಿನ ರಾಜಕೀಯ ಇಚ್ಚಾಶಕ್ತಿಯ ಕೊರತೆಯೆ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸುವುದರಿಂದ ಉನ್ನತ ಮಟ್ಟದ ಚಿಕಿತ್ಸೆಗಳು ಜಿಲ್ಲೆಯ ಜನರಿಗೆ ಮಂಡ್ಯದಲ್ಲೆ ಲಭ್ಯವಾಗುವುದರ ಜತೆಗೆ ಸ್ಥಳಾವಕಾಶದ ಕಾರಣಕ್ಕೆ ಹೆಚ್ಚುವರಿ ಮೆಡಿಕಲ್ ಸೀಟುಗಳ ಲಭ್ಯತೆಯು ಸಾಧ್ಯವಾಗಲಿದೆ.ಇದಕ್ಕಾಗಿ ಜಿಲ್ಲೆಯ ಜನರೇ ಪ್ರಬಲ ಜನಾಂದೋಲನಾ ರೂಪಿಸಬೇಕಿದೆ.


