ಪಾಂಡವಪುರ :ಜೂ:೧೧. ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಜನರು ತಾಲೂಕು ಕಚೇರಿ ಸೇರಿದಂತೆ ಇತರೆ ಯಾವುದೇ ಸರ್ಕಾರಿ ಕಚೇರಿಗಳಿಗೆ ವೃಥಾ ಅಲೆಯುವುದನ್ನು ತಪ್ಪಿಸಲು ಪ್ರತಿ ಪಂಚಾಯಿತಿವಾರು ‘ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ, ಇದು ಸೇವೆಯಲ್ಲ ನಮ್ಮ ಕರ್ತವ್ಯ’ ಎಂಬ ವಿನೂತನ ಕಾರ್ಯಕ್ರಮವನ್ನು ಜೂ.13 ರಿಂದ ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಪ್ರಾರಂಭಿಸಲಾಗುವುದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಈ ಕಾರ್ಯಕ್ರದಡಿಯಲ್ಲಿ ಒಟ್ಟು 42 ಇಲಾಖೆಗಳ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟು, ಜನರಿಗೆ ಅಗತ್ಯವಿರುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ. ಕಂದಾಯ ಇಲಾಖೆ ವತಿಯಿಂದ ಪೌತಿ ಖಾತೆ, ಹದ್ದುಬಸ್ತು, ದುರಸ್ತು, ಪೋಡಿ, ಪಹಣಿ ತಿದ್ದುಪಡಿ, ಗಾಡಿ ಜಾಡು, ಇಸ್ವತ್ತು, ಜಮೀನು ಸರ್ವೇ ಸೇರಿದಂತೆ ಇತರೆ ಎಲ್ಲಾ ಸರ್ಕಾರಿ ಸೇವೆಗಳನ್ನು ಸ್ಥಳದಲ್ಲೇ ಬಗೆಹರಿಸಿ ಮನೆ ಬಾಗಿಲಿಗೆ ತಲುಪಿಸುವರು. ಅಂತೆಯೇ ಸೆಸ್ಕ್, ಕೃಷಿ, ಪಂಚಾಯತ್ ರಾಜ್, ತೋಟಗಾರಿಕೆ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ, ಕುಡಿಯುವ ನೀರು ಮತ್ತು ನೈರ್ಮಲ್ಯ, ಲೋಕೋಪಯೋಗಿ, ಶಿಕ್ಷಣ, ಸಾರಿಗೆ, ಆರೋಗ್ಯ, ನೀರಾವರಿ ಇಲಾಖೆಯ ಎಲ್ಲಾ ಅಧಿಕಾರಿಗಳು ಸ್ಥಳದಲ್ಲೇ ಮೊಕಂ ಹೂಡಿ ಜನರ ದೂರು ಮತ್ತು ಸಮಸ್ಯೆಗೆ ಸ್ಪಂಧಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಲಾಗಿದ್ದು, ಸರ್ವೆ ಕಾರ್ಯಕ್ಕಾಗಿ ಹೆಚ್ಚುವರಿಯಾಗಿ 15 ಸರ್ವೇಯರ್‌ಗಳನ್ನು ನೇಮಿಸಲಾಗಿದೆ. ಇದಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಗಳ ಜತೆಯಲ್ಲಿಯೂ ಸಭೆ ನಡೆಸಿ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಲಾಗಿದ್ದು ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುವಂತೆ ತಾಕೀತು ಮಾಡಿದ್ದೇನೆ. ಇದಕ್ಕಾಗಿಯೇ ಅಗತ್ಯ ಸಿದ್ದತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದರು.
ಜಮೀನು, ನಿವೇಶನ ಇತರೆ ಆಸ್ತಿಗಳ ಸಂಬಂಧ ಅಣ್ಣ, ತಮ್ಮಂದಿರು ಮತ್ತು ಸಂಬಂಧಿಕರ ನಡುವೆ ವಿವಾದವಿದ್ದರೆ ಗ್ರಾಮದ ಹಿರಿಯರು, ಯಜಮಾನರು ಸಮ್ಮುಖದಲ್ಲಿ ವ್ಯಾಜ್ಯ ಇತ್ಯರ್ಥ ಪಡಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಡ್ಡಿಯಾಗದಂತೆ ಪೊಲೀಸರ ಬಂದೋಬಸ್ತ್ ಗೆ ಸೂಚಿಲಾಗಿದೆ ಎಂದು ವಿವರಿಸಿದರು.
ಸದ್ಯ ರೈತರ ಮೂರು ಪಂಪ್ ಸೆಟ್‌ಗಳಿಗೆ ಒಂದು ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ನಮ್ಮ ಯೋಜನೆ ಪ್ರಕಾರ ಎರಡು ಪಂಪ್‌ಸೆಟ್‌ಗಳಿಗೆ ಒಂದು ಪರಿವರ್ತಕ ಅಳವಡಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಜತೆಗ ಸೆಸ್ಕ್ ಅಧಿಕಾರಿಗಳು ಶಿಥಿಲಗೊಂಡ ಕಂಬ ಮತ್ತು ತಂತಿ, ಟಿಸಿ ಬದಲಾವಣೆ, ಜಮೀನುಗಳಲ್ಲಿ ಹಾದು ಹೋಗಿರುವ ಹಾಗೂ ಜೋತು ಬಿದ್ದಿರುವ ವಿದ್ಯುತ್ ಮಾರ್ಗಗಳ ಬದಲಾವಣೆ ಸೇರಿದಂತೆ ಇಲಾಖೆಯ ಹತ್ತು ಹಲವು ಕೆಲಸ ಕಾರ್ಯಗಳನ್ನು ನೆರವೇರಿಸಲಿದ್ದಾರೆ ಎಂದರು.
ಕೃಷಿ ಇಲಾಖೆ ಸಂಬಂಧಿಸಿದಂತೆ ತಜ್ಞ ಹಿರಿಯ ವಿಜ್ಞಾನಿಗಳು ಮಣ್ಣು ಪರೀಕ್ಷೆ ಮಾಡಿ ಮಣ್ಣಿನ ಗುಣಕ್ಕೆ ಅನುಗುಣವಾಗಿ ಬೆಳೆ ಬೆಳೆಯಲು ರೈತರಿಗೆ ಸಲಹೆ ನೀಡಲಿದ್ದಾರೆ. ಈ ಬಗ್ಗೆ ಸಿಆರ್‌ಒಪಿಎನ್ ಎಂಬ ಸಂಸ್ಥೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಲಿದೆ. ಜತೆಗೆ ಜನರಿಗೆ ಹತ್ತು ಹಲವು ಕಾರ್ಯಕ್ರಗಳ ಬಗ್ಗೆ ತರಭೇತಿ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಹದಿನೈದು ದಿನಗಳಿಂದ ಒಂದು ತಿಂಗಳ ಕಾಲದವರೆಗೆ ನಡೆಯಲಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಚೆಕ್ ಡ್ಯಾಂ ನಿರ್ಮಾಣ, ರಸ್ತೆಗಳ ನಿರ್ಮಾಣ, ಕಸ ವಿಲೇವಾರಿ, ಸ್ವಚ್ಚತೆ, ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ, ಕ್ರೀಡೆ ಬಗೆ ಉತ್ತೇಜನ ಹಾಗೂ ಅಗತ್ಯ ತರಭೇತಿ ಮತ್ತು ಆರೋಗ್ಯ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಎಲ್ಲಾ ತರಹದ ಕಾರ್ಯಕ್ರಮಗಳು ಈ ಯೋಜನೆಯಿಂದ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.