ಪಾನಮತ್ತನಾಗಿ ಕಾರು ಚಾಲನೆ: ೬೯ ಸಾವಿರ ರೂ. ದಂಡ
ಮಂಡ್ಯ: ಮಾರ್ಚ್ ೨೧ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾನಮತ್ತರಾಗಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ವರದಪುರ ಮೂಲದ ಧನಂಜಯ ಹಾಗೂ ಸಹಚರರಿಗೆ ಮದ್ದೂರು ಪಟ್ಟಣದ ಜೆಎಂಎಫ್ಸಿ ಪ್ರಧಾನ ಸಿವಿಲ್ ನ್ಯಾಯಾಲಯ ೬೯ ಸಾವಿರ ರೂ. ದಂಡ ವಿಧಿಸಿದೆ.
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಕಳೆದ ಭಾನುವಾರ ಸಂಜೆ ಸಂಚಾರಿ ಪೊಲೀಸರು ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಕಾರ್ಯ ನಡೆಸುತ್ತಿದ್ದ ವೇಳೆ ಮೈಸೂರಿನಿಂದ ಬೆಂಗಳೂರು ಕಡೆಗೆ ಪಾನಮತ್ತರಾಗಿ ಕಾರು ಚಾಲನೆ ಮಾಡುತ್ತಿದ್ದ ಧನಂಜಯ ಮತ್ತು ಇತರೆ ಐದು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಆರೋಪಿಗಳ ವಿರುದ್ಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ ೧೮೫, ೧೮೪, ೧೮೮, ೧೭೯(೧) (೨), ೧೭೭ ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಿದ್ದರು. ಗುರುವಾರ ಬೆಳಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಂಡ ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಿಯಾಂಕಾ ಅವರು ಕಾರು ಚಾಲಕ ಧನಂಜಯ ಹಾಗೂ ಸಂಗಡಿಗರಿಗೆ ೬೯ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
—