ಮಂಡ್ಯ : ತಾಲ್ಲೂಕಿನ ಮಂಗಲ ಗ್ರಾಮದ ಪ್ರತಿಭಾನ್ವಿತ ಸೃಜನಶೀಲ ಪ್ರಸಿದ್ಧ ಸಾಹಿತಿ ಹಾಗೂ ಜಿಲ್ಲಾ ಯುವ ಬರಹ ಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ (ಸಜಗೌ) ಅವರು ವಿಶ್ವವಿಖ್ಯಾತ ಮೈಸೂರು ದಸರಾದ ಪ್ರತಿಷ್ಠಿತ ‘ಪ್ರಧಾನ ಕವಿಗೋಷ್ಠಿ’ಗೆ ಮಂಡ್ಯ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ಸಾಹಿತ್ಯ ಕೃಷಿ ಹಾಗೂ ಸಂಘಟನಾ ಕಾರ್ಯಚಟುವಟಿಕೆಗಳಲ್ಲಿ ಸದಾ ಕ್ರಿಯಾ ಶೀಲವಾಗಿರುವ ಸಾಹಿತಿ ಟಿ. ಸತೀಶ್ ಜವರೇಗೌಡ ಅವರು ಈವರೆಗೆ ಆರು ಕವನ ಸಂಕಲನ ಹಾಗೂ ಮೂರು ಸಂಪಾದಿತ ಕೃತಿಗಳು ಸೇರಿದಂತೆ ೯ ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರ ‘ಅಪ್ಪ’ ಕವಿತೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾ ಲಯ ಮತ್ತು ‘ಬೆಳಕಿಗೂ ಶೋಕದ ಗ್ರಹಣ’ ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ‘ಪಠ್ಯ’ ಗಳಾಗಿವೆ. ನಾಡೋಜ ಡಾ. ದೇಜಗೌ ಸಾಹಿತ್ಯ ಪ್ರಶಸ್ತಿ, ಡಾ.ಜಿ.ಪಿ. ರಾಜ ರತ್ನಂ ಸಾಂಸ್ಕೃತಿಕ ಪ್ರಶಸ್ತಿ, ಕುವೆಂಪು ಸಿರಿಗನ್ನಡ ಪ್ರಶಸ್ತಿ, ಸರ್ವಜ್ಞ ಕಾವ್ಯ ಪ್ರಶಸ್ತಿ ಸೇರಿದಂತೆ ೫೦ ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ.
ತಮ್ಮ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಇತ್ತೀಚೆಗಷ್ಟೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ ಪುರಸ್ಕೃತರಾಗಿರುವ ಕವಿ ಸತೀಶ್ ಜವರೇ ಗೌಡ ಅವರು ನಾಡಿನ ಪ್ರಖ್ಯಾತ ಕವಯತ್ರಿ ಡಾ. ಪ್ರತಿಭಾ ನಂದಕುಮಾರ್ ಅವರ ಉದ್ಘಾಟನೆ ಮತ್ತು ಪ್ರಖ್ಯಾತ ಹಿರಿಯ ಕವಿ ಡಾ. ಅಲ್ಲಮಪ್ರಭು ಬೆಟ್ಟದೂರು ಅವರ ಅಧ್ಯಕ್ಷತೆಯಲ್ಲಿ ಅ. ೧೭ ರಂದು ಬೆಳಗ್ಗೆ ೧೦-೩೦ ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿಯ ಆವರಣದಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಬಿ.ಎಂ.ಶ್ರೀ. ಸಭಾಂಗಣದಲ್ಲಿ ನಡೆಯ ಲಿರುವ ‘ಪ್ರಧಾನ ಕವಿಗೋಷ್ಠಿ’ಯಲ್ಲಿ ತಮ್ಮ ಸ್ವರಚಿತ ಕವನ ವಾಚನ ಮಾಡಲಿದ್ದಾರೆ.


