Monday, December 1, 2025
spot_img

ನಾಗಮಂಗಲದಲ್ಲಿ ರಂಗಮಂದಿರ ನಿರ್ಮಾಣವಾಗಲಿ: ಸತೀಶ್‌ ತಿಪಟೂರು

‘ನಾಗಮಂಗಲದಲ್ಲಿ ರಂಗಕಾಯಕ ಮಾಡುವ ಜನರಿದ್ದಾರೆ. ರಂಗಚಟುವಟಿಕೆ ಪ್ರೋತ್ಸಾಹಿಸುವ ಜನರು ಇದ್ದಾರೆ. ಮುಂದಿನ ದಿನಗಳಲ್ಲಿ ರಂಗಮಂದಿರದ ಕೊರತೆ ನೀಗುವಂತಾಗಲಿ. ಯಾವ ಊರಿನಲ್ಲಿ ರಂಗ ಚಟುವಟಿಕೆ ಜೀವಂತವಾಗಿರುತ್ತದೆಯೋ ಆ ಊರಿನಲ್ಲಿ ಸಾಂಸ್ಕೃತಿಕತೆ, ಜನರ ಆತ್ಮಸಾಕ್ಷಿ ಎಚ್ಚರವಾಗಿರುತ್ತದೆ’ ಎಂದು ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್.ಎಲ್.ಭೈರಪ್ಪ ನೆನಪಿನ ವೇದಿಕೆಯಲ್ಲಿ ಕನ್ನಡ ಸಂಘ, ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವದ ಸಮಾರೋಪದಲ್ಲಿ ನುಡಿಗೌರವ ಸ್ವೀಕರಿಸಿ ಅವರು ಮಾತನಾಡಿದರು.

‘ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪ್ರವಹಿಸುತ್ತಿರುವ ರಂಗಕಲೆ ಸಂಸ್ಕೃತಿ ಅತಿ ಮುಖ್ಯ. ಇದರೊಂದಿಗೆ ಮಕ್ಕಳ ಚಟುವಟಿಕೆ ಹೆಚ್ಚು ಜರುಗಿದಾಗ ಸ್ವಸ್ಥ ಸಮಾಜ ಕಟ್ಟುವ ಕಾಯಕಕ್ಕೆ ವೇಗ ದೊರಕಿದಂತಾಗುತ್ತದೆ. ತಂತ್ರಜ್ಞಾನದ ಸುಳಿಯಲ್ಲಿ ಸಿಲುಕಿ ನಲುಗುತ್ತಿರುವ ಮಕ್ಕಳಿಗೆ ಬಂಧುತ್ವದ ಸೆಳೆತ ಮೂಡಿಸುವಲ್ಲಿ, ತಾಂತ್ರಿಕ ಗೋಡೆ ಬೇಧಿಸುವಲ್ಲಿ ರಂಗಭೂಮಿ ಜೀವಂತಿಕೆ ಅತ್ಯವಶ್ಯಕ ಸನ್ನಿವೇಶ ಇದೆ’ ಎಂದು ಹೇಳಿದರು.

ಪ್ರಸ್ತುತ ಶಾಲಾ ವಾರ್ಷಿಕೋತ್ಸವದ ಹೆಸರಿನಲ್ಲಿ ಜಗಮಗಿಸುವ ಲೈಟುಗಳು, ಕಿವಿಗಡಚಿಕ್ಕುವ ಮೈಕುಗಳ ನಡುವೆ ಅಸ್ಪಷ್ಟ ದನಿಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳ ಹೆಸರಿನಲ್ಲಿ ನಡೆಯುತ್ತಿರುವುದು ಸಾಂಸ್ಕೃತಿಕ ಭಯೋತ್ಪಾದನೆ ಎಂದು ವಿಷಾದಿಸಿದರು.

ಕನ್ನಡ ಸಂಘದ ಅಧ್ಯಕ್ಷೆ ಪುಟ್ಟಮ್ಮ ಮಾಯಣ್ಣಗೌಡ ಮಾತನಾಡಿ, ‘ಇಂತಹ ರಂಗಚಟುವಟಿಕೆಗೆ ಸಭಾಭವನ ಇಲ್ಲದೆ ಇರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣ. ಇನ್ನಾದರು ಕನ್ನಡ ಭವನ ನಿರ್ಮಾಣ ಆಗಲು ಸಹಕರಿಸಿ’ ಎಂದು ಒತ್ತಾಯಿಸಿದರು. ಆಳ್ವಾಸ್ ರಂಗ ಅಧ್ಯಯನ ತಂಡ ಡಾ.ಜೀವನ್ ರಾಂ ಸುಳ್ಯ, ನಾಯಿಮರಿ ನಾಟಕ ಪ್ರಸ್ತುತ ಪಡಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಚಂದ್ರು, ರಿಜಿಸ್ಟ್ರಾರ್ ನೀಲಮ್ಮ, ನಿರ್ದೇಶಕ ಅಣೆ ಚನ್ನಾಪುರ ಮಂಜೇಶ್, ಉಪನ್ಯಾಸಕ ರಘುನಾಥ್ ಸಿಂಗ್, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಕೊಣನೂರು ಹನುಮಂತು ಭಾಗವಹಿಸಿದ್ದರು.

ರಂಗಮಂದಿರ ಶೀಘ್ರ ನಿರ್ಮಾಣ: ಸಚಿನ್ ಭರವಸೆ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಮಾತನಾಡಿ, ‘ನಾಗಮಂಗಲದಲ್ಲಿ ಕಲಾವಿದರಿಗೆ ಬರವಿಲ್ಲ. ರಂಗಮಂದಿರ ನಿರ್ಮಾಣ ಶೀಘ್ರವೆ ಆಗುತ್ತೆ. ಸ್ಥಳದ ಕೊರತೆ ಇದೆ. ಸೂಕ್ತ ಸ್ಥಳ ನಿಗದಿಪಡಿಸಿ ಕಲಾವಿದನಾಗಿ ಮುಂಚೂಣಿಯಲ್ಲಿ ನಿಂತು ನಾನೇ ನನ್ನ ತಂದೆಯವರಾದ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರ ಬಳಿ ಬೇಡಿಕೆ ಇಡುತ್ತೇನೆ’ ಎಂದು ಭರವಸೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!