ನಾಯಿ ಸಂತಾನಶಕ್ತಿಹರಣಕ್ಕೆ ₹23 ಲಕ್ಷ ವೆಚ್ಚ?
ರಾಣೆಬೆನ್ನೂರು ನಗರಸಭೆ ಸಾಮಾನ್ಯ ಸಭೆ ಬಿಜೆಪಿ ಕಚೇರಿಗೆ ಜಾಗ ಬಿಟ್ಟುಕೊಡಲು ಒಪ್ಪಿಗೆ
29/10/2025
‘ರಾಣೆಬೆನ್ನೂರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಕಚೇರಿ ಜಾಗದ ಬಗ್ಗೆ ಚರ್ಚೆ ನಡೆಸಬೇಕು’ ಎಂದು ಆಗ್ರಹಿಸಿ ಅಧ್ಯಕ್ಷೆ ಚಂಪಕಾ ಬಿಸಲಹಳ್ಳಿ ಅವರಿಗೆ ಬಿಜೆಪಿ ಸದಸ್ಯರು ಮಂಗಳವಾರ ಸಭೆ ಆರಂಭಕ್ಕೂ ಮುನ್ನ ಮನವಿ ಸಲ್ಲಿಸಿದರು
ರಾಣೆಬೆನ್ನೂರು: ‘ನಗರದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಸಂತಾನಹರಣ ಕಾರ್ಯಾಚರಣೆಗೆ ₹23 ಲಕ್ಷ ಮಂಜೂರಾತಿ ನೀಡಬೇಕು’ ಎಂಬ ಪ್ರಸ್ತಾವಕ್ಕೆ ನಗರಸಭೆಯ ಹಲವು ಸದಸ್ಯರು ವಿರೋಧ ವ್ಯಕ್ತಪಡಿಸಿ, ಮಂಜೂರಾತಿ ನೀಡದಂತೆ ಆಗ್ರಹಿಸಿದರು.
ಇಲ್ಲಿಯ ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ, ಬೀದಿನಾಯಿಗಳ ಹಾವಳಿ ಬಗ್ಗೆ ಚರ್ಚೆ ನಡೆಯಿತು.
‘ನಗರದಲ್ಲಿ ಸುಮಾರು 2,800 ಬೀದಿನಾಯಿಗಳಿರುವುದು ಗೊತ್ತಾಗಿದೆ. ಇಂಥ ನಾಯಿಗಳು ಗುಂಪು ಗುಂಪಾಗಿ ಓಡಾಡುತ್ತಿವೆ. ವೃದ್ಧರು ಹಾಗೂ ಮಕ್ಕಳ ಮೇಲೆ ದಾಳಿ ಮಾಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಹೀಗಾಗಿ, ನಾಯಿಗಳ ಸಂತಾನಹರಣ ಮಾಡಲು ಕಾರ್ಯಾಚರಣೆ ಆರಂಭಿಸಬೇಕು. ಇದಕ್ಕಾಗಿ ₹ 23 ಲಕ್ಷ ವೆಚ್ಚವಾಗಬಹುದು’ ಎಂದು ಸಭೆಯಲ್ಲಿ ಪ್ರಸ್ತಾವ ಮಂಡಿಸಲಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಲವು ಸದಸ್ಯರು, ‘ಕಳೆದ ವರ್ಷವೂ ಸಂತಾನಹರಣ ಕಾರ್ಯಾಚರಣೆಗೆ ಹಣ ನೀಡಲಾಗಿತ್ತು. ಅಷ್ಟಾದರೂ ಬೀದಿನಾಯಿಗಳು ಮತ್ತೆ ಮರಿ ಹಾಕಿವೆ. ಇದು ಯಾವ ರೀತಿ ಸಂತಾನಹರಣ ಗೊತ್ತಾಗುತ್ತಿಲ್ಲ. ಈ ಬಾರಿ ಈ ವಿಷಯವನ್ನು ತಿರಸ್ಕರಿಸಬೇಕು’ ಎಂದು ಕೋರಿದರು. ನಂತರ, ಪ್ರಸ್ತಾವ ತಿರಸ್ಕರಿಸಲಾಯಿತು.
ಬಿಜೆಪಿಗೆ ಜಾಗ ಬಿಟ್ಟುಕೊಡಲು ಒಪ್ಪಿಗೆ: ‘ನಗರದಲ್ಲಿರುವ ಸಿಟಿಎಸ್ ನಂ. 1827/1ಬಿ ಆಸ್ತಿಯನ್ನು 1984ರಲ್ಲಿ ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷರ ಹೆಸರಿನಲ್ಲಿ ದಾಖಲಿಸಲಾಗಿದೆ. ಈ ಆಸ್ತಿ ಇಂದಿಗೂ ಕರ್ನಾಟಕ ಜನತಾ ಪಕ್ಷವೆಂದಿದೆ. ಕಂದಾಯವನ್ನೂ ಕಟ್ಟಲಾಗಿದೆ. ಕರ್ನಾಟಕ ಜನತಾ ಪಕ್ಷದ ಜಾಗವನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬಳಸುತ್ತಿದೆ. ಎರಡೂ ಪಕ್ಷವೂ ಒಂದೇಯಾಗಿದೆ. ನಿರಂತರ ಭೂ- ಬಾಡಿಗೆ ಆಧಾರದ ಮೇಲೆ ಅನುಭೋಗದಾರರ ಖಾತೆ ಬದಲಾವಣೆ ಮಾಡಲು ತಾಲ್ಲೂಕು ಉಪನೊಂದಣಾಧಿಕಾರಿ, ನಗರ ಭೂ ಮಾಪನಾ ಅಧಿಕಾರಿ ಹಾಗೂ ಪೌರಾಯುಕ್ತರಿಗೆ ನಿರ್ದೇಶನ ನೀಡಬೇಕು’ ಎಂದು ಕೆಲ ಸದಸ್ಯರು ಕೋರಿದರು. ಅದಕ್ಕೆ ಒಪ್ಪಿದ ಎಲ್ಲ ಸದಸ್ಯರು ಅನುಮೋದನೆ ನೀಡಿದರು.
ಅಧಿಕಾರಾವಧಿ ಇದೇ 31ಕ್ಕೆ ಕೊನೆ: ನಗರಸಭೆ ಸದಸ್ಯರ ಅಧಿಕಾರವಧಿ ಇದೇ 31ಕ್ಕೆ ಕೊನೆಯಾಗಲಿದೆ. ಮತ್ತದೇ ಗದ್ದಲ, ಗಲಾಟೆ ನಡುವೆಯೇ ನಗರಸಭೆ ಅಧ್ಯಕ್ಷೆ ಚಂಪಕಾ ಬಿಸಲಹಳ್ಳಿ ಸಮ್ಮುಖದಲ್ಲಿ ಅನೇಕ ವಿಷಯಗಳು ಚರ್ಚೆಯಾದವು.
ಸಂಗಮ ವೃತ್ತಕ್ಕೆ ಅಂಬೇಡ್ಕರ್ ವೃತ್ತ, ಹಲಗೇರಿ ವೃತ್ತಕ್ಕೆ ಕಿತ್ತೂರು ಚನ್ನಮ್ಮ ವೃತ್ತ, ಬಸ್ ನಿಲ್ದಾಣದ ವೃತ್ತಕ್ಕೆ ಬಸವೇಶ್ವರ ವೃತ್ತ, ನಿರೀಕ್ಷಣ ಮಂದಿರದ ಬಳಿ ಇರುವ ವೃತ್ತಕ್ಕೆ ಅಂಬಿಗರ ಚೌಡಯ್ಯ ವೃತ್ತ, ಅಂಚೆ ವೃತ್ತಕ್ಕೆ ವೀರ ಮದಕರಿ ನಾಯಕ ವೃತ್ತ ಸೇರಿದಂತೆ ಇತರ ರಸ್ತೆಗಳಿಗೆ ಹಾಗೂ ವೃತ್ತಗಳಿಗೆ ಮಹನೀಯರ ಹೆಸರುಗಳ ನಾಮಕರಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
‘ಹಲಗೇರಿ ರಸ್ತೆ ವಿಭಜಕ ರಸ್ತೆಯಲ್ಲಿ ಕೈಗೊಂಡ ಯುಜಿಡಿ ಕಾಮಗಾರಿ ಕಳಪೆಯಾಗಿದೆ. ಕೆಲವೇ ದಿನಗಳಲ್ಲಿ ಕುಸಿದು ಬಿದ್ದಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಕೆಲ ಸದಸ್ಯರು ಒತ್ತಾಯಿಸಿದರು.
ಪೊಲೀಸರಿಂದ ತೊಂದರೆ: ‘ಮಾರುಕಟ್ಟೆಗೆ ಬರುವ ಜನರನ್ನು ಅಡ್ಡಗಟ್ಟಿ ಪೊಲೀಸರು ತೊಂದರೆ ನೀಡುತ್ತಿದ್ದಾರೆ. ಸಂಚಾರ ನಿಯಮಗಳನ್ನು ಏಕಾಏಕಿ ರೂಪಿಸಿ, ಉಲ್ಲಂಘನೆ ಆರೋಪದಡಿ ₹1,000–₹2,000 ದಂಡ ಹಾಕುತ್ತಿದ್ದಾರೆ’ ಎಂದು ಕೆಲ ಸದಸ್ಯರು ದೂರಿದರು.
‘ಹೊಸದಾಗಿ ಸಂಚಾರ ನಿಯಮ ರೂಪಿಸುವ ಮುನ್ನ, ಅದನ್ನು ಜನರಿಗೆ ತಿಳಿಸಬೇಕು. ಜಾಗೃತಿ ಮೂಡಿಸಬೇಕು. ಆ ನಂತರವೇ, ದಂಡ ವಿಧಿಸುವ ಪ್ರಕ್ರಿಯೆ ನಡೆಸಬೇಕು. ಆದರೆ, ಏಕಾಏಕಿ ದಂಡ ವಿಧಿಸುವುದನ್ನು ಪ್ರಶ್ನಿಸಿದರೆ ಪೊಲೀಸರು ಸಮರ್ಪಕವಾಗಿ ಉತ್ತರಿಸುವುದಿಲ್ಲ’ ಎಂದು ಆರೋಪಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಅಧ್ಯಕ್ಷೆ ಹಾಗೂ ಪೌರಾಯಕ್ತರು ಆಶ್ವಾಸನೆ ನೀಡಿದರು.
ಉಪಾಧ್ಯಕ್ಷ ನಾಗೇಂದ್ರಸಾ ಪವಾರ, ಪೌರಾಯುಕ್ತ ಎಫ್.ವೈ. ಇಂಗಳಗಿ ಇದ್ದರು.


